Advertisement

11 ವಾರ್ಡ್‌ಗಳಲ್ಲಿ ಚರಂಡಿ, ರಸ್ತೆ, ಕಸದ ಸಮಸ್ಯೆ

03:36 PM May 27, 2019 | keerthan |

ಸುಳ್ಯ: ಚರಂಡಿ ಅವ್ಯವಸ್ಥೆ, ರಸ್ತೆ ಬೇಡಿಕೆ, ಕಸದ ಕಸಿವಿಸಿಗಳು ಈ ಹನ್ನೊಂದು ವಾರ್ಡ್‌ಗಳನ್ನು ಬಿಟ್ಟಿಲ್ಲ..!

Advertisement

ದುಗಲಡ್ಕ, ಕೊೖಕುಳಿ, ಅಂಬೆಟಡ್ಕ, ಕೇರ್ಪಳ, ಕೆರೆಮೂಲೆ, ಬೂಡು, ಗಾಂಧಿ ನಗರ, ಕಾಯರ್ತೋಡಿ, ಬೋರುಗುಡ್ಡೆ, ಜಟ್ಟಿಪಳ್ಳ, ಕಾನತ್ತಿಲ ವಾರ್ಡ್‌ಗಳಲ್ಲಿ ಜನರ ಗೋಳು ಆರಂಭಗೊಳ್ಳುವುದೇ ಹೀಗೆ. ಹಲವು ಬೇಡಿಕೆ ಈಡೇರುವ ನಿರೀಕ್ಷೆ ಇದೆ.

ಕಾಯರ್ತೋಡಿ
ವಾರ್ಡ್‌ನಲ್ಲಿ ನಾವೂರು-ಕುದ್ಪಾಜೆ, ಕಾಯ ರ್ತೋಡಿ ಬೈಲು ಕಾಲುದಾರಿ ಅಭಿವೃದ್ಧಿ ನಿರೀಕ್ಷೆ ಯಲ್ಲಿದೆ. ಜಟ್ಟಿಪಳ್ಳ- ಸೂರ್ತಿಲ ಸಂಪರ್ಕ ರಸ್ತೆಯ ಬೊಳಿಯ ಮಜಲಿನಲ್ಲಿ ಚರಂಡಿ ಸಮಸ್ಯೆ, ಕಾಯ ರ್ತೋಡಿ ನಾಗ ಸಾನಿಧ್ಯ ಸ್ಥಳಕ್ಕೆ ತೆರಳುವ ರಸ್ತೆ ಮಧ್ಯಭಾಗದಲ್ಲಿ ವಿದ್ಯುತ್‌ ಕಂಬ ಅಳವಡಿಸಿರುವುದು, ಸೂರ್ತಿಲ ಜನತಾ ಕಾಲನಿ ರಸ್ತೆ ಅವ್ಯವಸ್ಥೆ ಮೊದಲಾದ ಸಮಸ್ಯೆಗಳು ಇಲ್ಲಿವೆ.

ಗಾಂಧಿನಗರ (ನಾವೂರು)
ನ.ಪಂ. ವತಿಯಿಂದ ನಿರ್ಮಿಸಲಾದ ರಸ್ತೆಗಳಿಗೆ ಚರಂಡಿ ಇಲ್ಲದ ಕಾರಣ ಮಳೆ ನೀರು ಮನೆಗಳಿಗೆ ನುಗ್ಗುವ ಸಮಸ್ಯೆ ಇಲ್ಲಿದೆ. ರಥಬೀದಿಯಲ್ಲಿ ಬೀದಿದೀಪ ಇದ್ದರೂ ಬೆಳಗುತ್ತಿಲ್ಲ. ಸಂತೋಷ್‌ ಚಿತ್ರಮಂದಿರದಿಂದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ರಸ್ತೆಯಲ್ಲಿಯೂ ಬೀದಿ ದೀಪಗಳು ಉರಿಯುತ್ತಿಲ್ಲ. ಈ ರಸ್ತೆಯಲ್ಲಿ ಅಲ್ಲಲ್ಲಿ ಪೊದೆ, ಕಸದ ರಾಶಿಗಳು ತುಂಬಿವೆ. ಗಾಂಧಿನಗರದಲ್ಲಿ ತೆರೆದ ಚರಂಡಿಯ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಪರಿಸರದಲ್ಲಿ ರೋಗ ಭೀತಿ ಉಂಟಾಗಿದೆ. ಗರಿಷ್ಠ ಸ್ಪರ್ಧಿಗಳಿರುವ ಈ ವಾರ್ಡ್‌ನಲ್ಲಿ ಸಮಸ್ಯೆಗಳಿಗೆ ಬರವಿಲ್ಲ. ಬೇಸಗೆ ಕಾಲದಲ್ಲಿ ಕುಡಿಯುವ ನೀರಿಗೆ ತತ್ವಾರ ಇಲ್ಲಿನದ್ದು. ಎರಡು ಕೊಳವೆ ಬಾವಿ ಕೊರೆದರೂ ನೀರು ಸಿಕ್ಕಿಲ್ಲ. ಇದು ಎತ್ತರ ಪ್ರದೇಶವಾಗಿರುವ ಕಾರಣ ನಳ್ಳಿ ಸಂಪರ್ಕ ನೀರು ಎಲ್ಲ ಮನೆಗಳಿಗೆ ತಲುಪುತ್ತಿಲ್ಲ ಎನ್ನುವ ಆರೋಪ ಸ್ಥಳೀಯರದ್ದು.

ಕೆರೆಮೂಲೆ
ಈ ವಾರ್ಡ್‌ನಲ್ಲಿ ಚರಂಡಿ, ದಾರಿ ಸಮಸ್ಯೆ, ದುರಸ್ತಿಗೆ ಕಾದು ನಿಂತಿರುವ ಮನೆಗಳಿವೆ. ಹೆಚ್ಚಿನ ರಸ್ತೆಗಳು ಕಾಂಕ್ರೀಟ್ ಕಂಡಿವೆ. ಆದರೆ ಚರಂಡಿ ಇಲ್ಲದೆ ಮಳೆಗಾಲದಲ್ಲಿ ರಸ್ತೆಯೇ ಚರಂಡಿ ಆಗುತ್ತಿದೆ. ತ್ಯಾಜ್ಯದ ವಿಲೇ ಸಮರ್ಪಕವಾಗಿಲ್ಲದ ಕಾರಣ ಹಲವು ಮನೆಗಳಿಗೆ ತೊಂದರೆ ಉಂಟಾಗಿದೆ. ಪ. ಜಾತಿ ಕುಟುಂಬಕ್ಕೆ ಸೇರಿದ ಹಲವು ಮನೆಗಳು ದುರಸ್ತಿಗೆ ಕಾಯುತ್ತಿವೆ. ಆಶ್ರಯ ವಸತಿ ಯೋಜನೆಯಡಿ ಅರ್ಜಿ ಸಲ್ಲಿಸಿದ್ದರೂ ಅದಕ್ಕೆ ಸ್ಪಂದನೆ ಸಿಕ್ಕಿಲ್ಲ.

Advertisement

ದುಗಲಡ್ಕ ವಾರ್ಡ್‌
ಮೂಡೆಕಲ್ಲು ರಸ್ತೆಯ ಹಲವು ಭಾಗದಲ್ಲಿ ರಸ್ತೆ ಹದಗೆಟ್ಟಿದೆ. ಕಣಪಿ ಚೊಕ್ಕಾಡಿ ಸಂಪರ್ಕ ರಸ್ತೆ ಇದಾಗಿದ್ದು ಅಭಿವೃದ್ಧಿ ಅಗತ್ಯವು ಇದೆ. ದುಗ್ಗಲಾಯ ದೇವಸ್ಥಾನದ ಮುಂಭಾಗದ ಅರ್ಧ ಕಿ.ಮಿ. ರಸ್ತೆ ಡಾಮರು ಎದ್ದುಹೋಗಿದೆ. ಕೊಳಂಜಿಕೋಡಿ ರಸ್ತೆ ಅಭಿವೃದ್ಧಿ ಬೇಡಿಕೆ ಈಡೇರಿಲ್ಲ. ದುಗಲಡ್ಕದಲ್ಲಿ ಸಾರ್ವಜನಿಕ ಶೌಚಾಲಯ, ಕಂದಡ್ಕ ಸಿಆರ್‌ಸಿ ಕಾಲನಿಯಲ್ಲಿ ಸಮರ್ಪಕ ಚರಂಡಿ ನಿರ್ಮಾಣದ ಮೊದಲಾದ ಬೇಡಿಕೆಗಳ ಈಡೇರಿಕೆಗೆ ಈ ವಾರ್ಡ್‌ ಕಾಯುತ್ತಿದೆ.

ಕೊಯಿಕುಳಿ ವಾರ್ಡ್‌
ಕಳೆದ ಬಾರಿ ಅಧ್ಯಕ್ಷೆ ಪ್ರತಿನಿಧಿಸಿದ ವಾರ್ಡ್‌ ಇದು. ದುಗಲಡ್ಕ-ಕೊಡಿಯಾಬೈಲು-ಸುಳ್ಯ ರಸ್ತೆ ಶಾಸಕರ ಅನುದಾನದಿಂದ ಎರಡು ಕಡೆ ಕಾಂಕ್ರೀಟ್, ಉಳಿದೆಡೆ ಪ್ಯಾಚ್ ವರ್ಕ್‌ ಕಾಮಗಾರಿ ನಡೆದಿದೆ. ಗೋಂಟಡ್ಕ-ಕೆದ್ಕಾನ ರಸ್ತೆ ಅಭಿವೃದ್ಧಿ ಆಗಬೇಕಿದೆ. ದುಗಲಡ್ಕ-ಕೊಯಿಕುಳಿ ಶಾಲೆ ಸಂಪರ್ಕ ರಸ್ತೆ, ನೀರಬಿದಿರೆ-ಕೊಯಿಕುಳಿ ರಸ್ತೆ ಅಭಿವೃದ್ಧಿಗೆ ಸ್ಪಂದನೆ ಬೇಕಿದೆ. ನೀರಬಿದಿರೆ ಗುಡ್ಡದಲ್ಲಿ ನಗರದ ತ್ಯಾಜ್ಯ ಡಂಪ್‌ ಮಾಡುವ ಆತಂಕವು ಈ ವಾರ್ಡ್‌ನಲ್ಲಿದೆ.

ಬೂಡು
ಇಲ್ಲಿ ರಸ್ತೆ ಸಮಸ್ಯೆ ಕಡಿಮೆ. ಆದರೆ ಮಳೆ ನೀರು ಹೋಗುವ ಕಣಿಯಲ್ಲಿ ತ್ಯಾಜ್ಯ ನೀರು ಹರಿಯುವ ಸಮಸ್ಯೆ ಇದೆ. ಚರಂಡಿ ಇಲ್ಲದೆ ರಸ್ತೆಯೇ ತೋಡಾಗುತ್ತಿದೆ. ಎರಡು ದಿನಕೊಮ್ಮೆ ನಳ್ಳಿ ನೀರು ಪೂರೈಕೆ ಆಗುತ್ತಿದೆ. ಕಾಲನಿಗೆ ಕಸ ಸಂಗ್ರಹ ವಾಹನ ಬರುವುದು ಅಪರೂಪ ಅನ್ನುತ್ತಾರೆ ಸ್ಥಳೀಯರು.

ಕೇರ್ಪಳ
ಇಲ್ಲಿ ರಸ್ತೆ ಸಮಸ್ಯೆ ಕಡಿಮೆ. ಆದರೆ ಚರಂಡಿ ಸಮಸ್ಯೆ ಹೆಚ್ಚಾಗಿದೆ. ತಾಲೂಕು ಕಚೇರಿ ಮೂಲಕ ಕುರುಂಜಿಗುಡ್ಡೆ ತೆರಳುವ, ಭಸ್ಮಡ್ಕ ತಿರುವು, ಕುರುಂಜಿಗುಡ್ಡೆ ಒಳಾಂಗಣ ಕ್ರೀಡಾಂಗಣ ತಿರುವ ಪ್ರದೇಶಗಳಲ್ಲಿ ಚರಂಡಿ ಸಮಸ್ಯೆ ಇದೆ. ಬೇಸಗೆಯಲ್ಲಿ ನೀರಿನ ಸಮಸ್ಯೆ ಇದ್ದು, ಕೊಳವೆಬಾವಿ ಕೊರತೆ ಇದೆ. ಇದಕ್ಕೆ ಶಾಶ್ವತ ಪರಿಹಾರ ಬೇಕು ಅನ್ನುತ್ತಾರೆ ಸ್ಥಳೀಯರು.

ಅಂಬೆಟಡ್ಕ
ರಸ್ತೆ ಕಾಂಕ್ರೀಟ್, ಒಳಚರಂಡಿ ಸಮಸ್ಯೆ, ಕಂಪೌಂಡ್‌ ತಾಗಿಕೊಂಡು ವಿದ್ಯುತ್‌ ಕಂಬ ಮೊದಲಾದ ಸಮಸ್ಯೆಗಳು ಇಲ್ಲಿವೆ. ಬಾಳೆಮಕ್ಕಿ ಸರಕಾರಿ ಆಸ್ಪತ್ರೆ ಹಿಂಬದಿ, ಜೂನಿಯರ್‌ ಕಾಲೇಜು ಬಳಿ, ಸರಕಾರಿ ಶಾಲೆ ಬಳಿ, ಶ್ರೀರಾಂ ಪೇಟೆ ಬಲಭಾಗ ಕಸ್ಭಾಮೂಲೆ ಮೊದಲಾದ ವ್ಯಾಪ್ತಿಯನ್ನು ಈ ವಾರ್ಡ್‌ ಒಳಗೊಂಡಿದೆ.

ಜಟ್ಟಿಪಳ್ಳ, ಕಾನತ್ತಿಲ
ಒಳಚರಂಡಿ ತ್ಯಾಜ್ಯ ನೀರು ಜಟ್ಟಿಪಳ್ಳ ರಸ್ತೆಯಲ್ಲೇ ಹರಿಯುವ ಸಮಸ್ಯೆ ಇದೆ. ಇದಕ್ಕೆ ಶಾಶ್ವತ ಪರಿಹಾರ ಸಿಗದೆ ಮಳೆಗಾಲದಲ್ಲಿ ಇಲ್ಲಿ ಕೃತಕ ನೆರೆ ಉಂಟಾಗುತ್ತದೆ. ಬೊಳಿಯಮಜಲು, ಕೊಡಿಯಾಲಬೈಲು ಮೊದಲಾದೆಡೆ ಮನೆ, ರಸ್ತೆ ದುರಸ್ತಿ ಆಗಿಲ್ಲ. ಈ ಬಾರಿ ಹೊಸದಾಗಿ ರೂಪುಗೊಂಡಿರುವ ಕಾನತ್ತಿಲ್ಲ, ಬ್ರಹ್ಮರಗಯ ರಸ್ತೆ ಎಡಬದಿ, ನಡುಬೈಲು, ಮೊಗರ್ಪಣೆ ಮೊದಲಾದ ಪ್ರದೇಶಗಳಲ್ಲಿ ಚರಂಡಿ ಸಮಸ್ಯೆ ತಪ್ಪಿಲ್ಲ. ತ್ಯಾಜ್ಯ ನದಿಗೆ ಸೇರುವುದೇ ಇಲ್ಲಿನ ಬಹು ದೊಡ್ಡ ಸಮಸ್ಯೆ.

Advertisement

Udayavani is now on Telegram. Click here to join our channel and stay updated with the latest news.

Next