Advertisement

ಮನೆಗೆ ನುಗ್ಗುತ್ತದೆ ಚರಂಡಿ ನೀರು; ನರಕಯಾತನೆ

07:38 PM Aug 18, 2021 | Team Udayavani |

ಕುಂದಾಪುರ:  ಇಲ್ಲಿನ ಪುರಸಭೆ ವ್ಯಾಪ್ತಿಯಲ್ಲಿ ಚರ್ಚ್‌ರೋಡ್‌ನ‌ಲ್ಲಿ ಮುಂದೆ ಸಾಗಿದಾಗ ಸಿಗುವ ಕೆಲವು ಮನೆಗಳಿಗೆ ಚರಂಡಿ ನೀರು ಸದಾ ನುಗ್ಗುತ್ತಿರುತ್ತದೆ. ಮಳೆ ಬಂದಾಗ ಅಂಗಳದ ತುಂಬೆಲ್ಲ ಕೊಳಚೆ ನೀರು. ವಾಸನೆ, ಸೊಳ್ಳೆ, ನರಕಯಾತನೆ. ಚರಂಡಿ ಹೂಳು ತೆಗೆಯದೆ, ಕಾಂಕ್ರಿಟ್‌ ಚರಂಡಿ ಇಲ್ಲದೆ ನೀರು ಉಕ್ಕಿ ಹರಿಯುತ್ತಿರುತ್ತದೆ.

Advertisement

ಹೃದ್ರೋಗಿ ಮರಣ :

ಆಂಜನೇಯ ಗ್ಯಾಸ್‌ ಏಜೆನ್ಸಿ ಎದುರಿನ ಭಾಗದ ಕೆಲವು ಮನೆಗಳಿಗೆ ಸರಿಯಾದ ರಸ್ತೆ ಇಲ್ಲ. ಗದ್ದೆಬದುವಿನ ಕಾಲುದಾರಿಯಷ್ಟೇ ಇದೆ. ಅಥವಾ ಬೇರೆಯವರ ಮನೆಯ ಕಂಪೌಂಡ್‌ ಹಾರಿ ಹೋಗಬೇಕು. ರಾಧಾ ಶೆಟ್ಟಿಗಾರ್‌ ಅವರು ಹೇಳುವಂತೆ, ನನ್ನ ಪತಿ ಕೃಷ್ಣ ಶೆಟ್ಟಿಗಾರ್‌ ಅವರಿಗೆ ಅಪವೇಳೆಯಲ್ಲಿ ಹೃದಯಾಘಾತವಾಗಿತ್ತು. ಕರೆದೊಯ್ಯಲು ಕಷ್ಟವಾಯಿತು. ಆ್ಯಂಬುಲೆನ್ಸ್‌ ಬರಲು ದಾರಿ ಇರಲಿಲ್ಲ. ಇತರ ಸಣ್ಣ ಪುಟ್ಟ ವಾಹನಗಳೂ ಬರುವಂತಿಲ್ಲ. ದ್ವಿಚಕ್ರ ವಾಹನಗಳೂ ಈ ಭಾಗದ ಮನೆಗಳಿಗೆ ಬರಲು ಸಾಧ್ಯವಿಲ್ಲ. ಸಕಾಲದಲ್ಲಿ ಚಿಕಿತ್ಸೆ ದೊರೆಯದೆ ಅವರು ವಿಧಿವಶರಾದರು ಎನ್ನುತ್ತಾರೆ.

ತೋಡು ನೀರು :

ಇಲ್ಲಿನ ಹತ್ತಾರು ಮನೆಗಳ ಎದುರು ಸಣ್ಣ ತೋಡು ಹರಿಯುತ್ತದೆ. ಈ ತೋಡು ಮುಂದೆ ಕುಂದೇಶ್ವರದಿಂದ ಬಂದು ಮದ್ದುಗುಡ್ಡೆ ಕಡೆಗೆ ಹರಿಯುವ ತೋಡಿಗೆ ಸೇರುತ್ತದೆ. ಈ ಹಿಂದೆ ಕೃಷಿ ಚಟುವಟಿಕೆ ನಡೆಯುತ್ತಿದ್ದಾಗ ಈ ತೋಡಿನ ಹೂಳು ತೆಗೆದು ಮಣ್ಣು ಸವರಿ ಸ್ವತ್ಛಗೊಳಿಸಲಾಗುತ್ತಿತ್ತು. ನೀರು ಸರಾಗವಾಗಿ ಹರಿಯುತ್ತಿತ್ತು. ಕಳೆದ ಹತ್ತನ್ನೆರಡು ವರ್ಷಗಳಿಂದ ಕೃಷಿ ಚಟುವಟಿಕೆ ನಡೆಯದ ಹಿನ್ನೆಲೆಯಲ್ಲಿ ತೋಡಿನ ಹೂಳು ತೆಗೆದಿಲ್ಲ. ಪರಿಣಾಮ ನೀರು ಸರಾಗವಾಗಿ ಹರಿಯುತ್ತಿಲ್ಲ. ಖಾಸಗಿ ಜಾಗದಲ್ಲಿ ನೀರು ಹರಿಯುತ್ತಿದ್ದರೂ ಕೆಲವು ಮನೆಗಳ ಕೊಳಚೆ ನೀರು ಈ ಮೂಲಕ ಸಾಗುವ ಕಾರಣ ಪರಿಹಾರ ಅನಿವಾರ್ಯ ಎಂಬ ಸ್ಥಿತಿ ಬಂದಿದೆ.

Advertisement

ಮನೆಯಂಗಳಕ್ಕೆ :

ಮಳೆಗಾಲದಲ್ಲಿ ನೀರಿನ ಹರಿವು ಹೆಚ್ಚಾದಾಗ ಮನೆಯಂಗಳಕ್ಕೆ ನೀರು ನುಗ್ಗುತ್ತದೆ. ಆಗ ಬೇರೆ ಬೇರೆ ಪ್ರದೇಶದ ಕೊಳಚೆ ನೀರು ಬಂದು ನಿಲ್ಲುತ್ತದೆ. ಪರಿಣಾಮ ದುರ್ವಾಸನೆ. ಉತ್ಪತ್ತಿಯಾಗುವ ಭಾರೀ ಗಾತ್ರದ ಸೊಳ್ಳೆಗಳು. ಅದು ಇಲ್ಲಿನ ನಿವಾಸಿಗಳನ್ನು ಮತ್ತಷ್ಟು ಭಯಭೀತರನ್ನಾಗಿಸಿದೆ. ಕೆಲವು ಮನೆಯವರು ಸ್ವಯಂ ಆಗಿ ತಡೆಗೋಡೆ ಮಾಡಿಕೊಂಡಿದ್ದಾರೆ. ಇನ್ನು ಕೆಲವು ಮನೆಯವರು ಸರಕಾರದ ಪರಿಹಾರಕ್ಕಾಗಿ ಕಾಯುತ್ತಿದ್ದಾರೆ! ಕುಡಿಯುವ ನೀರಿನ ಬಾವಿಗೂ ಈ ನೀರಿನಿಂದಾಗಿ ತೊಂದರೆಯಾಗಿದೆ. ಶುದ್ಧ ನೀರೇ ದೊರೆಯದೇ ಪುರಸಭೆ ನೀರಿನ ಮೊರೆ ಹೋಗಿದ್ದಾರೆ.

ಸ್ಪಂದನ :

ಪುರಸಭೆ ಈ ಸಮಸ್ಯೆಯನ್ನು ಕಂಡು ಕಣ್ಣು ಮುಚ್ಚಿ ಕೂತಿಲ್ಲ. ಮುಖ್ಯಾಧಿಕಾರಿ, ಸದಸ್ಯರು ಭೇಟಿ ನೀಡಿದ್ದಾರೆ. ತಹಶೀಲ್ದಾರ್‌ ಭೇಟಿ ನೀಡಿದ್ದಾರೆ. ಆದರೆ ಖಾಸಗಿ ಜಾಗ ಆದ ಕಾರಣ ಸಮಸ್ಯೆ ಪರಿಹಾರಕ್ಕೆ ಯಾವ ರೀತಿಯ ಪ್ರಯತ್ನ ನಡೆಸುವುದು ಎನ್ನುವ ಗೊಂದಲದಲ್ಲಿ ಆಡಳಿತ ಇದೆ.

ಜಾಗದ ತಕರಾರು :

ಇಲ್ಲಿಗೆ ರಸ್ತೆ ಮಾಡಲು ಸ್ವಲ್ಪ  ತಕರಾರು ಇದೆ ಎನ್ನಲಾಗಿದೆ. ಇನ್ನಷ್ಟು ಜಾಗ ಖಾಸಗಿ ವಶದಲ್ಲಿದೆ. ಆದ್ದರಿಂದ ಸೌಹಾರ್ದ ಪರಿಹಾರವೇ ಇಲ್ಲಿಗೆ ಪರಿಹಾರ ಎಂದು ಕೂಡಾ ಹೇಳಲಾಗುತ್ತಿದೆ.  ಜಾಗದ ಮಾಲಕರು ತೋಡು ಅಥವಾ ಯಾವುದೇ ಕಾಮಗಾರಿ ನಡೆಸಲು ಕೃಷಿ ಜಮೀನನಲ್ಲಿ ಕಾಮಗಾರಿ ನಡೆಸಲು ಕೂಡಾ ಕಾನೂನಿನ ತೊಡಕು ಇದ್ದ ಕಾರಣ ಬಾಕಿಯಾಗಿದೆ ಎನ್ನಲಾಗಿದೆ.

ತಹಶೀಲ್ದಾರ್‌ ಪತ್ರ :

ಇಲ್ಲಿನ ನಿವಾಸಿ ಶಿವಕುಮಾರ್‌ ಶೆಟ್ಟಿಗಾರ್‌ ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದು ಅಲ್ಲಿಂದ ಬಂದ ಆದೇಶದಂತೆ ತಹಶೀಲ್ದಾರ್‌ ಪುರಸಭೆ ಮುಖ್ಯಾಧಿಕಾರಿಗೆ ಮಾ.19ರಂದು ಪತ್ರ ಬರೆದಿದ್ದಾರೆ.  ಅದರಂತೆ ಕಂದಾಯ ನಿರೀಕ್ಷಕರು ಸ್ಥಳ ಮಹಜರು ನಡೆಸಿದ್ದು ಅದರ ಆಧಾರದಲ್ಲಿ ತಹಶೀಲ್ದಾರ್‌ ಪತ್ರ ಬರೆದಿದ್ದಾರೆ. ನಿಯಮಾ ನುಸಾರ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.

ತೋಡು ಇರುವುದು ಖಾಸಗಿ ಜಾಗ ಆದ ಕಾರಣ ಪುರಸಭೆ ಮೂಲಕ ಕಾಮಗಾರಿ ನಡೆಸಲು ಕಾನೂನು ರೀತ್ಯಾ ತೊಡಕು ಇದೆ. ಪುರಸಭೆಗೆ ಸೇರಿದ ಜಾಗವಾದರೆ ಇಷ್ಟು ಸಮಯ ತಗುಲುತ್ತಿರಲಿಲ್ಲ. ಜಾಗದ ಮಾಲಕರ ಜತೆಗೆ ಮಾತುಕತೆ ನಡೆಸಿ ನಿವಾಸಿಗಳಿಗೆ ಸಮಸ್ಯೆಯಾಗದಂತೆ ಬಗೆಹರಿಸಲು ಯತ್ನಿಸಲಾಗುವುದು. -ಅಶ್ವಿ‌ನಿ ಪ್ರದೀಪ್‌, ಸದಸ್ಯರು, ಪುರಸಭೆ

Advertisement

Udayavani is now on Telegram. Click here to join our channel and stay updated with the latest news.

Next