ಚನ್ನರಾಯಪಟ್ಟಣ: ತಾಲೂಕಿನ ಬಾಗೂರು ಹೋಬಳಿ ಯಲ್ಲಿರುವ ನವಿಲೆ ಸುರಂಗದ ನಿರ್ಗಮದ್ವಾರವನ್ನು ಶಾಸಕರು, ಹಾಗೂ ಸಂಸದರೊಂದಿಗೆ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಭಾನುವಾರ ವೀಕ್ಷಣೆ ಮಾಡಿದರು.
ಈ ವೇಳೆ ಸ್ಥಳದಲ್ಲಿದ್ದ ನೀರಾವರಿ ಇಲಾಖೆ ಮುಖ್ಯ ಅಭಿಯಂತರ ಬಾಲಕೃಷ್ಣ ಮಾತನಾಡಿ, ತುಮಕೂರಿಗೆ 25.3 ಟಿಎಂಸಿ ನೀರು ಹರಿಸಲು ನಿಗದಿಯಾಗಿದ್ದು ಇದರಂತೆ ಅಣೆಕಟ್ಟೆಯಲ್ಲಿ ಅಗತ್ಯ ಇರುವಷ್ಟು ನೀರನ್ನು ಹರಿಸಲಾಗುತ್ತಿದೆ. ಗೊರೂರು ಅಣೆಕಟ್ಟೆಯಿಂದ ವಡ್ಡರಹಳ್ಳಿ ಜಾಕ್‌ವೆಲ್ ವರೆಗೆ ಹೇಮಾವತಿ ಎಡದಂಡೆ ನಾಲೆ ಆಧುನಿಕರ ಮಾಡಲಾಗಿದ್ದು ನೀರು ಸರಾಗವಾಗಿ ಹರಿಯುತ್ತಿದೆ ಎಂದು ಹೇಳಿದರು.
ಸಕಾಲಕ್ಕೆ ನೀರು ಹರಿಸಿ: ತುಮಕೂರಿಗೆ ನೀರು ಬಿಡುವ ವಿಷಯವನ್ನು ಜ್ವಲಂತ ಸಮಸ್ಯೆ ಮಾಡಿ ಕೊಳ್ಳುವುದು ಬೇಡ ಈ ಹಿಂದೆ ತಿಳಿಸಿರುವಂತೆ ನೀರು ಬಿಡಬೇಕು. ಚನ್ನರಾಯಪಟ್ಟಣ ತಾಲೂಕು ಹಾಗೂ ಮಂಡ್ಯ ಜಿಲ್ಲೆಗೆ ಎಷ್ಟು ನೀರು ಮೀಸಲಿದೆ ಅದನ್ನು ನಾವು ಎಂದಿಗೂ ಕೇಳುವುದಿಲ್ಲ. ಮಳೆ ಬಂದ ಮೇಲೆ ಸಕಾಲಕ್ಕೆ ನೀರು ಹರಿಸುವ ಮೂಲಕ ಎಲ್ಲಾ ಜನರಿಗೆ ಸಮರ್ಪಕವಾಗಿ ನೀರು ನೀಡುವ ಕೆಲಸ ಅಧಿಕಾರಿ ಗಳು ಮಾಡಬೇಕು, ಜನಪ್ರತಿನಿಧಿಗಳ ಮಾತು ಕೇಳಿ ತಮ್ಮ ಕೆಲಸಕ್ಕೆ ಕುತ್ತು ತಂದುಕೊಳ್ಳಬೇಡಿ ಎಂದು ಸೂಚಿಸಿದರು.
ಅಧಿಕಾರಿ ವಿರುದ್ಧ ಸಂಸದರ ಆರೋಪ: ಅಧಿಕಾರಿ ಗಳು ಮಾಹಿತಿ ನೀಡುವಾಗ ಮಾತಿನ ಮಧ್ಯ ಪ್ರವೇಶ ಮಾಡಿದ ತುಮಕೂರು ಸಂಸದ ಬಸವರಾಜು ಈ ಅಧಿಕಾರಿ ಆರು ವರ್ಷ ಹಾಸನ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿದ್ದರು ಹಾಗಾಗಿ ತಮಗೆ ತಪ್ಪು ಮಾಹಿತಿ ನೀಡು ತ್ತಿದ್ದಾರೆ. ದಾಖಲೆಯಲ್ಲಿ ಇರುವಷ್ಟು ನೀರು ಒಂದು ವರ್ಷವೂ ಹರಿದಿಲ್ಲ. ಸುರಂಗದ ಬಾಗಿಲಿಗೆ ಬೇಕೆಂತಲೇ ಬಂಡೆ ಹಾಕಿದ್ದಾರೆ. ಇಲ್ಲಿಂದೆ ಮುಂದೆ ನೀರು ಹರಿಯುತ್ತಿಲ್ಲ ನಾಲೆಯಲ್ಲಿ ಗಿಡ ಗಂಟೆ ಬೆಳೆದು ಹೂಳು ತುಂಬಿದ್ದರೂ ಸ್ವಚ್ಛಗೊಳಿಸಿಲ್ಲ ಎಂದು ಅಧಿಕಾರಿಯನ್ನು ತರಾಟೆಗೆ ತೆಗೆದು ಕೊಂಡರು.
ಮುಖ್ಯ ಅಭಿಯಂತ ಬಾಲಕೃಷ್ಣ ಉತ್ತರಿಸಿ ಯಾವುದೇ ಜಿಲ್ಲೆಯಲ್ಲಿ ಸೇವೆ ಸಲ್ಲಿಸಲಿ ಹಾಗಂದ ಮಾತ್ರಕ್ಕೆ ದಾಖಲೆ ಸೃಷ್ಟಿಸುತ್ತಿಲ್ಲ, ನಾಲ್ಕು ವರ್ಷ ಮಳೆ ಬಾರದ ಕಾರಣ ನೀರು ಹರಿಸಿಲ್ಲ, ಕಳೆದ ವರ್ಷ ಉತ್ತಮವಾಗಿ ಮಳೆಯಾಗಿದ್ದು ನೀರು ಹರಿಸಿದ್ದೇವೆ ಎಂದರಲ್ಲದೆ ಎಇಇ ಅರಸು ಅವರನ್ನು ಕರೆಸಿ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಸಂಪೂರ್ಣ ವಿವರನ್ನು ತಿಳಿಸುವಂತೆ ಆದೇಶಿಸಿದರು.
ತುಮಕೂರು ಸಂಸದ ಬಸವರಾಜು, ಶಾಸಕರಾದ ಸೊಗಡು ಶಿವಣ್ಣ, ಸುರೇಶ್, ನಾಗೇಶ್, ಪ್ರೀತಂ ಜೆ.ಗೌಡ, ಬಿಜೆಪಿ ಹಾಸನ ಜಿಲ್ಲಾಧ್ಯಕ್ಷ ನವಿಲೆ ಅಣ್ಣಪ್ಪ, ತಾಲೂಕು ಅಧ್ಯಕ್ಷ ಶಿವನಂಜೇಗೌಡ, ನಾಗರಾಜು, ಗಂಗಾಧರ್ ಮುಂತಾದವರು ಉಪಸ್ಥಿತರಿದ್ದರು.