Advertisement

ಡ್ರ್ಯಾಗನ್‌ ಫ್ರೂಟ್‌ ರಾಜಧಾನಿ!

06:37 AM Jan 24, 2019 | |

ಬೆಂಗಳೂರು: ಸಾಮಾನ್ಯವಾಗಿ ಹೈಟೆಕ್‌ ಮಳಿಗೆಗಳಲ್ಲಿ ಕಾಣಸಿಗುವ “ಡ್ರ್ಯಾಗನ್‌ ಹಣ್ಣು’ಗಳ ಉತ್ಪಾದನೆಯಲ್ಲಿ ಕರ್ನಾಟಕವು ಅದರಲ್ಲೂ ಬೆಂಗಳೂರು ಇಡೀ ದೇಶಕ್ಕೆ ರಾಜಧಾನಿಯಾಗುವತ್ತ ದಾಪುಗಾಲಿಡುತ್ತಿದೆ. 

Advertisement

ಕೇವಲ ಎರಡು ವರ್ಷಗಳ ಅಂತರದಲ್ಲಿ ರಾಜ್ಯದ ಸುಮಾರು 500 ಎಕರೆ ವ್ಯಾಪ್ತಿಯಲ್ಲಿ ಇದು ವಿಸ್ತರಿಸಿದ್ದು, ರಾಷ್ಟ್ರೀಯ ತೋಟಗಾರಿಕಾ ಮೇಳದಲ್ಲಿ ಒಂದೇ ದಿನದಲ್ಲಿ ಎರಡು ಸಾವಿರ ಡ್ರ್ಯಾಗನ್‌ ಹಣ್ಣಿನ ಗಿಡಗಳು ಮಾರಾಟವಾಗಿವೆ. ಈ ಹಣ್ಣುಗಳನ್ನು ಬೆಳೆಯಲಿಕ್ಕಾಗಿಯೇ ಐಐಎಚ್‌ಆರ್‌ನ ಕೇಂದ್ರೀಯ ತೋಟಗಾರಿಕಾ ಸಂಶೋಧನಾ ಕೇಂದ್ರ ಎರಡು ಮಾದರಿಗಳನ್ನು ಅಭಿವೃದ್ಧಿಪಡಿಸಿದೆ. 

ಸಿಮೆಂಟ್‌ ಕಂಬಗಳನ್ನು ನೆಟ್ಟು ಅದರ ಮೇಲೆ ಟೈರ್‌ಗಳನ್ನು ಅಳವಡಿಸಿ ಅದರ ಸುತ್ತಲೂ ಡ್ರ್ಯಾಗನ್‌ ಗಿಡಗಳನ್ನು ಬೆಳೆಸಬಹುದು. ಅದೇ ರೀತಿ, ನಗರದಾದ್ಯಂತ ಇತ್ತೀಚಿನ ದಿನಗಳಲ್ಲಿ ಮೇಲ್ಛಾವಣಿಯಲ್ಲಿ ತರಕಾರಿ ಬೆಳೆಯುವ ಟ್ರೆಂಡ್‌ ಹೆಚ್ಚುತ್ತಿದ್ದು, ಅದಕ್ಕೆ ಪರ್ಯಾಯವಾಗಿ ಡ್ರ್ಯಾನ್‌ ಹಣ್ಣುಗಳನ್ನೂ ಬೆಳೆಯಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸುಲಭವಾಗಿ ಬೆಳೆಸಬಹುದಾದ ಮಾದರಿಯನ್ನು ಪರಿಚಯಿಸಲಾಗಿದೆ.

ಇದರಿಂದ ವೆಚ್ಚ ಕಡಿಮೆ ಆಗುವುದರ ಜತೆಗೆ ನಿರ್ವಹಣೆ ಕೂಡ ಸುಲಭ. ಪ್ರಸ್ತುತ ಬೆಳೆಗಾರರ ಆಸಕ್ತಿ ನೋಡಿದರೆ, ದೇಶಕ್ಕೆ ಅತಿಹೆಚ್ಚು ಡ್ರ್ಯಾಗನ್‌ ಹಣ್ಣುಗಳನ್ನು ಪೂರೈಸುವ ಕೇಂದ್ರವಾಗಿ ಕರ್ನಾಟಕ ಹೊರಹೊಮ್ಮುವ ಎಲ್ಲ ಸಾಧ್ಯತೆಗಳಿವೆ ಎಂದು ಹಿರೇಹಳ್ಳಿಯ ಕೇಂದ್ರೀಯ ತೋಟಗಾರಿಕಾ ಸಂಶೋಧನಾ ಕೇಂದ್ರದ ಮುಖ್ಯಸ್ಥ ಮತ್ತು ಪ್ರಧಾನ ವಿಜ್ಞಾನಿ ಡಾ.ಜಿ.ಕರುಣಾಕರನ್‌ ತಿಳಿಸುತ್ತಾರೆ. 

ಸ್ಮಾಟ್‌ಫ‌ುಡ್‌ ಆಯ್ತು; ಸ್ಮಾರ್ಟ್‌ಫ್ರುಟ್‌ ಬಂತು!: ಯಾಕೆಂದರೆ ಸ್ಮಾರ್ಟ್‌ ಫ‌ುಡ್‌ ಮಾದರಿಯಲ್ಲಿ ಇತ್ತೀಚೆಗೆ ಸ್ಮಾರ್ಟ್‌ ಫ್ರುಟ್‌ ಹೆಚ್ಚು ಜನಪ್ರಿಯಗೊಳ್ಳುತ್ತಿದೆ. ಇದೇ ಕಾರಣಕ್ಕೆ ಬೆಳೆಗಾರರು, ಉದ್ಯಮಿಗಳು ಮತ್ತು ಗ್ರಾಹಕರು ಮೂವರೂ ಈಗ ಇದರ ಹಿಂದೆಬಿದ್ದಿದಾರೆ. ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದೆ.

Advertisement

ಡ್ರ್ಯಾಗನ್‌ ಫ್ರುಟ್‌ ರೋಗ ನಿರೋಧಕ ಶಕ್ತಿ ವೃದ್ಧಿಗೆ ಪೂರಕ ಅಂಶಗಳಿದ್ದು, ಹೃದಯದೊತ್ತಡ ಮತ್ತು ಮಧುಮೇಹಿಗಳಿಗೆ ಹೇಳಿಮಾಡಿಸಿದ್ದಾಗಿದೆ. ಜಿಂಕ್‌, ಪಾಸ್ಪರಸ್‌, ಕ್ಯಾಲಿಯಂ, ಮ್ಯಾಗ್ನೇಷಿಯಂನಂತಹ ಪೋಷಕಾಂಶಗಳನ್ನು ಒಳಗೊಂಡಿದ್ದು, ಸಕ್ಕರೆ ಅಂಶ ಕಡಿಮೆ ಇರುತ್ತದೆ. ಬೆಂಗಳೂರು, ತುಮಕೂರು, ಚಿಕ್ಕಬಳ್ಳಾಪುರ, ಚಾಮರಾಜನಗರ, ಬಾಗಲಕೋಟೆ, ವಿಜಯಪುರ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಬೆಳೆಯಲಾಗುತ್ತಿದೆ.

ಕೆಜಿಗೆ 150ರಿಂದ 180 ರೂ. ಮಾರುಕಟ್ಟೆ ಬೆಲೆ. ಹೆಚ್ಚು ಜನಪ್ರಿಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಕೇಂದ್ರವು ಹೊಸ ಮಾದರಿಗಳನ್ನು ಪರಿಚಯಿಸಿದೆ. ಅದರಂತೆ ಈಗಿರುವ ಪದ್ಧತಿಯಲ್ಲಿ ಡ್ರ್ಯಾಗನ್‌ ಫ್ರುಟ್‌ ಜಮೀನಿನಲ್ಲಿ ಬೆಳೆಯಲು ಎಕರೆಗೆ 5 ಲಕ್ಷ ರೂ. ಖರ್ಚಾಗುತ್ತದೆ.

ನಾವು ಅಭಿವೃದ್ಧಿಪಡಿಸಿದ ಮಾದರಿಯಿಂದ ಒಂದೂವರೆಯಿಂದ ಎರಡು ಲಕ್ಷ ರೂ. ಉಳಿತಾಯ ಆಗುತ್ತದೆ. ಎಕರೆಗೆ 450 ಕಂಬಗಳನ್ನು ಹಾಕಬಹುದು. ಮೊದಲ ವರ್ಷ ಒಂದು ಗಿಡದಲ್ಲಿ ಹತ್ತು ಹಣ್ಣುಗಳು ಬರುತ್ತವೆ. ಎರಡು ಹಣ್ಣು ಒಂದು ಕೆಜಿ ತೂಗುತ್ತವೆ. ಈ ಮಾದರಿಗಾಗಿ ಸಿಮೆಂಟ್‌ನ ಕಂಬ, ನಾಲ್ಕುಚಕ್ರ ವಾಹನಗಳ ಟೈರ್‌, ಕಬ್ಬಿಣದ ಸರಳುಗಳು ಸಾಕು ಎಂದು ವಿವರಿಸಿದರು. 

ಟೆರೇಸ್‌ನಲ್ಲೂ ಬೆಳೆಯಬಹುದು: ಅದೇ ರೀತಿ, ನಗರದಲ್ಲಿ ಮೇಲ್ಛಾವಣಿಯಲ್ಲೂ ಇದನ್ನು ಬೆಳೆಯಬಹುದು. ಇದಕ್ಕಾಗಿ 10ರಿಂದ 12 ಎಂಎಂ ಕಬ್ಬಿಣದ ಸರಳು, 4-5 ಅಡಿ ಎತ್ತರದ ಪಿವಿಸಿ ಪೈಪ್‌ ಮತ್ತು ಬಕೆಟ್‌ ಅನ್ನು ಹೋಲುವ ಡ್ರಮ್‌ಗೆ ಜೋಡಿಸಿ, ಪೈಪ್‌ನಲ್ಲಿ ಕಾಂಕ್ರೀಟ್‌ ತುಂಬಲಾಗಿರುತ್ತದೆ. ಒಂದು ಕಂಬದಲ್ಲಿ ಎರಡು ಡ್ರ್ಯಾಗನ್‌ ಗಿಡಗಳನ್ನು ಬೆಳೆಯಬಹುದು.

ಇದನ್ನು ಒಂದು ಕಡೆಯಿಂದ ಮತ್ತೂಂದು ಕಡೆ ಸಾಗಿಸುವುದು ಕೂಡ ಸುಲಭ. 15 ಕೆಜಿ ಸಾಮರ್ಥ್ಯ ಹೊಂದಿದೆ. ಗಿಡ ಸೇರಿದಂತೆ ಒಂದು ಯೂನಿಟ್‌ಗೆ 500 ರೂ. ಆಗುತ್ತದೆ. ಮೊದಲ 15 ತಿಂಗಳಲ್ಲಿ ಒಂದು ಗಿಡದಿಂದ 5ರಿಂದ 6 ಹಣ್ಣುಗಳನ್ನು ಬಿಡುತ್ತದೆ. ಎರಡನೇ ವರ್ಷ ಇದು ಡಬಲ್‌ ಆಗುತ್ತದೆ. ಇದಲ್ಲದೆ, ಹಲಸು ಮತ್ತು ಅವಕಡ ಕೂಡ ಹೆಚ್ಚು ಜನಪ್ರಿಯಗೊಳ್ಳುತ್ತಿವೆ ಎಂದು ಮಾಹಿತಿ ನೀಡಿದರು. 

ವಿವರಕ್ಕೆ ಮೊ: 94832 33804 ಸಂಪರ್ಕಿಸಬಹುದು.  

ಬಂದಿದೆ ಡಿಶ್‌ ಕುಕರ್‌!: ಮನೆಯ ಮೇಲೆ ಬುಟ್ಟಿ ಆಕಾರ ಡಿಶ್‌ ಅಳವಡಿಸಿದರೆ ಟಿವಿಯಲ್ಲಿ ಹತ್ತಾರು ಚಾನೆಲ್‌ಗ‌ಳು ಬರುತ್ತವೆ. ಆದರೆ, ಈ ಡಿಶ್‌ ಬುಟ್ಟಿಯನ್ನು ಹಾಕಿ ನೀವು ಎಲ್ಲ ಪ್ರಕಾರದ ಅಡಿಗೆ ಮಾಡಬಹುದು! ಇದರ ಹೆಸರು ಡಿಶ್‌ ಕುಕರ್‌. ಹೆಸರೇ ಸೂಚಿಸುವಂತೆ ಇದು ಡಿಶ್‌ ಬುಟ್ಟಿಯನ್ನು ಹೋಲುತ್ತದೆ. ಸ್ಟೇನ್‌ಲೆಸ್‌ ಸ್ಟೀಲ್‌ ಪ್ಯಾನೆಲ್‌ಗ‌ಳನ್ನು ಈ ಬುಟ್ಟಿಯಲ್ಲಿ ಜೋಡಿಸಲಾಗಿದ್ದು, ಚಿಕ್ಕಗಾತ್ರದ ಕಬ್ಬಿಣದ ಕಂಬಿಗಳನ್ನು ಎರಡೂ ಕಡೆ ಅಳವಡಿಸಲಾಗಿದೆ.

ಸೂರ್ಯನ ಕಿರಣಗಳು ಒಂದೇ ಕಡೆ ಕೇಂದ್ರೀಕೃತವಾಗುವಂತೆ ಬುಟ್ಟಿಯನ್ನು ತಿರುಗಿಸಿದರೆ ಸಾಕು, ನಡುವೆ ಇಟ್ಟ ಕುಕ್ಕರ್‌ ಕೆಲವೇ ಕ್ಷಣಗಳಲ್ಲಿ ಸೀಟಿ ಹೊಡೆಯುತ್ತದೆ. ಹೆಸರಘಟ್ಟದಲ್ಲಿ ಐಐಎಚ್‌ಆರ್‌ ಹಮ್ಮಿಕೊಂಡ ಮೂರು ದಿನಗಳ ರಾಷ್ಟ್ರೀಯ ತೋಟಗಾರಿಕಾ ಮೇಳದಲ್ಲಿ ಇದನ್ನು ಕಾಣಬಹುದು. 

ತುಮಕೂರಿನ ನುಸಿಫೆರಾ ನವೀಕರಿಸಬಹುದಾದ ಇಂಧನ ವ್ಯವಸ್ಥೆ (Nucifera Renewable Energy Systems) ಇದನ್ನು ಅಭಿವೃದ್ಧಿಪಡಿಸಿದ್ದು, ಈಗಾಗಲೇ ಸಾವಿರಕ್ಕೂ ಅಧಿಕ ಯೂನಿಟ್‌ಗಳನ್ನು ರಾಜ್ಯಾದ್ಯಂತ ಮಾರಾಟ ಮಾಡಿದೆ. ಇದರ ಬೆಲೆ 5,800 ರೂ. ಫಾರ್ಮ್ಹೌಸ್‌, ಜಮೀನು, ದೂರದ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವವರಿಗೆ ಇದು ಹೇಳಿಮಾಡಿಸಿದ್ದಾಗಿದೆ. 

ಅನ್ನ, ಸಾಂಬಾರು, ಪಲ್ಯ ಹೀಗೆ ಎಲ್ಲ ಪ್ರಕಾರದ ಅಡಿಗೆಯನ್ನೂ ಇದರಲ್ಲಿ ತಯಾರಿಸಬಹುದು. ಈ ಶಾಖದಲ್ಲಿ ಕುಕ್ಕರ್‌ನಲ್ಲಿ ಅನ್ನ ತಯಾರಾಗಲು ಗ್ಯಾಸ್‌ಗಿಂತ ಆರೇಳು ನಿಮಿಷ ಹೆಚ್ಚು ಸಮಯ ಹಿಡಿಯುತ್ತದೆ. ಇದರ 4 ಅಡಿ ಅಗಲ ಇದ್ದು, ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಇದರಲ್ಲಿ ಅಡಿಗೆ ತಯಾರಿಸಬಹುದು ಎಂದು ಕಂಪೆನಿಯ ಸುರೇಂದ್ರ ತಿಳಿಸಿದರು. 

ವಿಶ್ವದ ಅತಿದೊಡ್ಡ ಸೀಬೆಕಾಯಿ!: ಒಂದು ಸೀಬೆಕಾಯಿ ಎಷ್ಟು ತೂಗುತ್ತದೆ? 250 ಗ್ರಾಂ? ಅಬ್ಬಬ್ಟಾ ಎಂದರೆ ಅರ್ಧ ಕೆಜಿ. ಆದರೆ, ಖಾಸಗಿ ಕಂಪೆನಿಯೊಂದು ಅಭಿವೃದ್ಧಿಪಡಿಸಿದ ಸೀಬೆಕಾಯಿ ಬರೋಬ್ಬರಿ ಎರಡೂವರೆ ಕೆಜಿ ತೂಗುತ್ತದೆ! ಹೌದು, ವಿಶ್ವದ ಅತಿದೊಡ್ಡ ಗಾತ್ರದ ಸೀಬೆಕಾಯಿಯನ್ನು ಛತ್ತೀಸ್‌ಗಡ ಮೂಲದ ಈ ವಿಎನ್‌ಆರ್‌-ಬಿಐಎಚ್‌ಐ ಅಭಿವೃದ್ಧಿಪಡಿಸಿದೆ.

ಹೆಸರಘಟ್ಟದ ಐಐಎಚ್‌ಆರ್‌ ಹಮ್ಮಿಕೊಂಡ ರಾಷ್ಟ್ರೀಯ ತೋಟಗಾರಿಕೆ ಮೇಳದಲ್ಲಿ ಈ ಕಂಪೆನಿಯು ಮಳಿಗೆಯನ್ನು ತೆರೆದಿದೆ. ಅಲ್ಲಿ ವಿವಿಧ ಗಾತ್ರದ ಸೀಬೆಕಾಯಿಯನ್ನು ಪ್ರದರ್ಶನಕ್ಕಿಡಲಾಗಿದೆ. ಕನಿಷ್ಠ 300 ಗ್ರಾಂನಿಂದ 1 ಕೆಜಿವರೆಗಿನ ಸೀಬೆಕಾಯಿ ಬೆಳೆಯುವ ಹೈಬ್ರಿಡ್‌ ತಳಿಯನ್ನು ಹೊರತಂದಿದ್ದು, ಕರ್ನಾಟಕ ಸೇರಿದಂತೆ ದೇಶಾದ್ಯಂತ ಈ ತಳಿ ರೈತರ ಗಮನಸೆಳೆದಿದೆ.

ಈ ಗಜಗಾತ್ರದ ಸೀಬೆಕಾಯಿಗಳು ಹೆಚ್ಚಾಗಿ ರಫ್ತಾಗುತ್ತವೆ. ಹೆಚ್ಚಾಗಿ ಗಲ್ಫ್ ದೇಶಗಳಿಗೆ ಪೂರೈಕೆಯಾಗುತ್ತವೆ. ಇವುಗಳ ಬೆಲೆ ಕೆಜಿಗೆ 120 ರೂ. ಹಣ್ಣುಗಳಲ್ಲಿ ಬೀಜಗಳು ತುಂಬಾ ಕಡಿಮೆ. ಪ್ರತಿ ಗಿಡದಲ್ಲಿ 30ರಿಂದ 50 ಕೆಜಿ ಇಳುವರಿ ಬರುತ್ತದೆ ಎಂದು ತಾಂತ್ರಿಕ ಮಾರುಕಟ್ಟೆ ಕಾರ್ಯನಿರ್ವಾಹಕ ಆಶಿಶ್‌ ತಿಳಿಸಿದರು.

* ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next