ಹೊಸದಿಲ್ಲಿ: ರಾಷ್ಟ್ರೀಯ ರೈಲು ಯೋಜನೆ (ಎನ್‌ಆರ್‌ಪಿ)ಯ ಕರಡು ನೀತಿಯನ್ನು ಭಾರತೀಯ ರೈಲ್ವೇಯು ಬಿಡುಗಡೆ ಮಾಡಿದೆ. 1101 ಪುಟಗಳ ಕರಡು ನೀತಿಯಲ್ಲಿ ರೈಲ್ವೇಯ ಪ್ರಮುಖ ಮಾರ್ಗಗಳು, ಹೈಸ್ಪೀಡ್ ರೈಲು ವ್ಯವಸ್ಥೆ ಮತ್ತು ಸರಕು ಕಾರಿಡಾರ್‌ಗಳ ಅಭಿವೃದ್ಧಿ ಮತ್ತು ಮೇಲ್ದರ್ಜೆಗೇರಿಸುವ ಉದ್ದೇಶ ಹಾಗೂ ಕಾರ್ಯತಂತ್ರಗಳ ಕುರಿತು ಪ್ರಸ್ತಾವಿಸಲಾಗಿದೆ.
ವಿಶೇಷವೆಂದರೆ, ಮುಂಬೈ-ಅಹ್ಮದಾಬಾದ್ ಬುಲೆಟ್ ರೈಲು ಹೊರತುಪಡಿಸಿ ಇನ್ನೂ 6 ಹೊಸ ಹೈಸ್ಪೀಡ್ ರೈಲು ಕಾರಿಡಾರ್ ನಿರ್ಮಾಣದ ಗುರಿ ಹಾಕಿಕೊಳ್ಳಲಾಗಿದ್ದು, ಅದರಲ್ಲಿ ಚೆನ್ನೈ-ಮೈಸೂರು ಹಾಗೂ ಹೈದರಾಬಾದ್-ಬೆಂಗಳೂರು ಬುಲೆಟ್ ರೈಲು ಯೋಜನೆಯೂ ಸೇರಿದೆ.
ಹೈದರಾಬಾದ್-ಬೆಂಗಳೂರು(618 ಕಿ.ಮೀ.) ಮತ್ತು ಚೆನ್ನೈ-ಬೆಂಗಳೂರು-ಮೈಸೂರು (462 ಕಿ.ಮೀ.) ಬುಲೆಟ್ ರೈಲು ಯೋಜನೆಯ ಕಾಮಗಾರಿಯನ್ನು ಕ್ರಮವಾಗಿ 2041 ಮತ್ತು 2051ರಲ್ಲಿ ಪೂರ್ಣಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ.
ಚೆನ್ನೈ-ಮೈಸೂರು ಬುಲೆಟ್ ರೈಲು: ಗಂಟೆಗೆ ಗರಿಷ್ಠ 350ಕಿ.ಮೀ. ವೇಗದಲ್ಲಿ ರೈಲು ಸಂಚರಿಸಲಿದ್ದು, 750 ಮಂದಿ ಪ್ರಯಾಣಿಸಬಹುದು. ಚೆನ್ನೈ(2 ನಿಲ್ದಾಣಗಳು), ಶ್ರೀಪೆರಂಬದೂರು, ಆರ್ಕೋಟ್, ವೆಲ್ಲೂರು, ಕಮ್ಮಸಂದ್ರ, ಬೆಂಗಳೂರು(2 ನಿಲ್ದಾಣಗಳು), ಮಂಡ್ಯ ಮತ್ತು ಮೈಸೂರಿನಲ್ಲಿ ರೈಲು ನಿಲುಗಡೆಯಾಗುವ ಸಾಧ್ಯತೆಯಿದೆ.
ಹಲವು ನಗರಗಳು-ಒಂದು ಕಾರಿಡಾರ್: ಮುಂಬಯಿ- ಹೈದರಾ ಬಾದ್ ಎಚ್‌ಎಸ್‌ಆರ್ ಲೈನ್ ಅನ್ನು ವಿಸ್ತರಣೆ ಮಾಡುವ ಮೂಲಕ ಹೈದರಾಬಾದ್ ಮತ್ತು ಬೆಂಗಳೂರು ನಡುವೆಯೂ ಹೆಚ್ಚುವರಿ ಹೆಸ್ಪೀಡ್ ರೈಲ್ವೇ ಲೈನ್ ಸ್ಥಾಪಿಸಲು ಯೋಜಿಸಲಾಗಿದೆ. ಇದು ಮುಂಬಯಿಯನ್ನು ಚೆನ್ನೈನೊಂದಿಗೆ ಸಂಪರ್ಕಿಸುವುದರ ಜತೆಗೆ, ಜಮ್ಮು, ಅಮೃತಸರ, ದಿಲ್ಲಿ, ಜೈಪುರ, ಅಹ್ಮದಾ ಬಾದ್, ಮುಂಬಯಿ, ಹೈದರಾಬಾದ್, ಬೆಂಗಳೂರು, ಚೆನ್ನೈಯನ್ನು ಕೂಡ ಎಚ್‌ಎಸ್‌ಆರ್ ಕಾರಿಡಾರ್‌ನೊಳಗೆ ತರುತ್ತದೆ. ಈ ಮೂಲಕ ಉತ್ತರ, ಪಶ್ಚಿಮ ಮತ್ತು ದಕ್ಷಿಣ ಭಾರತವು ಒಂದು ಹೈಸ್ಪೀಡ್ ರೈಲು ಕಾರಿಡಾರ್‌ನಲ್ಲಿ ಸಂಪರ್ಕ ಸಾಧಿಸಿದಂತಾಗುತ್ತದೆ.