Advertisement

Karnataka: ಇಂದು ಬರ ಮುಹೂರ್ತ?: ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ  ಸ್ಥಿತಿ ಪರಾಮರ್ಶೆ

12:42 AM Sep 13, 2023 | Team Udayavani |

ಬೆಂಗಳೂರು: ರಾಜ್ಯದಲ್ಲಿ ಮಳೆ ಕೊರತೆ ಕಾಡುತ್ತಿದ್ದು, ಸದ್ಯವೇ ಬರ ಘೋಷಣೆ ಆಗುವ ಸಾಧ್ಯತೆಗಳು ಇವೆ. ಇದರ ಮಧ್ಯೆ ಬರ ಎದುರಿಸಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್‌ ಮುಖ್ಯ ನಿರ್ವಹಣಾಧಿಕಾರಿಗಳಿಗೆ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

Advertisement

ಮಂಗಳವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿಗಳು ತಾಲೂಕುವಾರು ಬರ ಪರಿಸ್ಥಿತಿ ಬಗ್ಗೆ ವಿವರಣೆ ನೀಡಿದರು. ಬೆಳೆಹಾನಿ, ಕುಡಿಯುವ ನೀರಿನ ಸಮಸ್ಯೆ, ಮೇವಿನ ಕೊರತೆ ಸಹಿತ ಸಮಗ್ರ ಚರ್ಚೆ ನಡೆದಿದೆ. ಕೊನೆ ಕ್ಷಣದವರೆಗೂ ಕೇಂದ್ರದ ಮಾನದಂಡಗಳ ಸಡಿಲಿಕೆಗೆ ರಾಜ್ಯ ಸರಕಾರ ಪತ್ರ ವ್ಯವಹಾರ ಮುಂದುವರಿಸಲಿದೆ.

ಸದ್ಯದಲ್ಲೇ ಬರ ಘೋಷಣೆ

ಮಳೆ ಕೊರತೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಈ ವಾರವೇ ಬರ ಘೋಷಣೆಯಾಗುವ ಸಾಧ್ಯತೆಗಳು ಇವೆ. ಬುಧವಾರ ನಡೆಯುವ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಸಿಎಂ ಪರಿಸ್ಥಿತಿ ಅವಲೋಕನ ನಡೆಸಿ ತೀರ್ಮಾನ ಕೈಗೊಳ್ಳಲಿದ್ದಾರೆ.

ಕೇಂದ್ರ ಸರಕಾರದ ಮಾನದಂಡಗಳ ಅನುಸಾರ ಆ. 19ರ ವರೆಗೆ 53 ಹಾಗೂ ಸೆ. 2ರ ವರೆಗಿನ ಪರಿಸ್ಥಿತಿ ಆಧರಿಸಿ 83 ತಾಲೂಕುಗಳಲ್ಲಿ ಸೆ. 11ರೊಳಗಾಗಿ ಬೆಳೆಹಾನಿ ಸಮೀಕ್ಷೆ ಪೂರ್ಣಗೊಳಿಸುವಂತೆ ಸೂಚಿಸಲಾಗಿತ್ತು. ಈ ಕೆಲಸದಲ್ಲಿ ತಪ್ಪಾಗಕೂಡದು. ಈ ತಿಂಗಳ ಬಳಿಕ ಮತ್ತೆ ಬೆಳೆ ಸಮೀಕ್ಷೆಗೆ ಅವಕಾಶ ಇಲ್ಲ ಎಂದು ಸಿಎಂ ಎಚ್ಚರಿಕೆ ನೀಡಿದ್ದಾರೆ.

Advertisement

ನಕಲಿ ಭೂ ಮಂಜೂರಾತಿ ನೀಡಿದರೆ ಕ್ರಮ

ನಕಲಿ ಭೂಮಂಜೂರಾತಿ ನೀಡಿದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ತಾಲೂಕು ದಂಡಾಧಿಕಾರಿಗಳ ನ್ಯಾಯಾಲಯದಲ್ಲಿ 3 ತಿಂಗಳಿಗಿಂತ ಹೆಚ್ಚು ಅವಧಿಗೆ ಪ್ರಕರಣಗಳು ಬಾಕಿ ಇರಬಾರದು. ಜಿಲ್ಲಾಧಿಕಾರಿಗಳ ಬಳಿ ಸರಕಾರಿ ಜಮೀನು ಹಾಗೂ ಒತ್ತುವರಿ ಮಾಹಿತಿ ಲಭ್ಯವಿರಬೇಕು. ಒತ್ತುವರಿ ಗುರುತಿಸಲು ಆ್ಯಪ್‌ ಅಭಿವೃದ್ಧಿ ಪಡಿಸಲಾಗುತ್ತಿದೆ. ಒತ್ತುವರಿ ಗುರುತಿಸಿ, ತೆರವಿಗೆ ಕ್ರಮ ಕೈಗೊಳ್ಳಬೇಕು ಎಂದರು.

ಗ್ರಾಮ ಲೆಕ್ಕಿಗರು ಕೈಗೇ ಸಿಗುವುದಿಲ್ಲ: ಸಿಎಂ ಬೇಸರ

ಗ್ರಾಮ ಲೆಕ್ಕಿಗರು ಜನರ ಕೈಗೇ ಸಿಗುತ್ತಿಲ್ಲ  ಎಂದು ಮುಖ್ಯಮಂತ್ರಿ ಬೇಸರಿಸಿದ್ದಾರೆ. ಗ್ರಾಮ ಲೆಕ್ಕಿಗರು ಗ್ರಾ.ಪಂ.ಗಳಲ್ಲಿಯೇ ಇರು ವಂತೆ ಮಾಡಿ ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ. 16,850 ಗ್ರಾಮಗಳು ಪೋಡಿ ಮುಕ್ತವಾಗಿವೆ. ಉಳಿದೆಡೆಗಾಗಿ ಈ ಅಭಿಯಾನ ವನ್ನು ಮತ್ತೆ ಪ್ರಾರಂಭಿಸಲು ಸೂಚಿಸಿದರು.

ಪ್ರಗತಿ ಪರಿಶೀಲನೆಗೆ ಸೂಚನೆ

ಪ.ಜಾತಿ., ಪ. ಪಂಗಡದವರ ಮೇಲಿನ ದೌರ್ಜನ್ಯ ಪ್ರಕರಣಗಳ ಶಿಕ್ಷೆ ಪ್ರಮಾಣ ಕೇವಲ ಶೇ. 3.44ರಷ್ಟಿದೆ. ಈ ಕುರಿತು ಪ್ರತೀ ತಿಂಗಳು ಪ್ರಗತಿ ಪರಿಶೀಲನೆ ಮಾಡುವಂತೆ ಸಿಎಂ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.

ಗಣೇಶ ಹಬ್ಬದ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಪರಿಸರ ಹಾನಿಯಾಗದಂತೆ ಹಬ್ಬ ಆಚರಿಸಲು ಕ್ರಮ ಕೈಗೊಳ್ಳಿ. ಕೋಮುಶಕ್ತಿಗಳು ಕಾನೂನು ಸುವ್ಯವಸ್ಥೆ ಹಾಳು ಮಾಡದಂತೆ ಮುಂಜಾಗ್ರತೆ ವಹಿಸಿ. ಯಾವ ಧರ್ಮದವರಿಗೂ ತೊಂದರೆಯಾಗಬಾರದು.

ಸಿದ್ದರಾಮಯ್ಯ, ಮುಖ್ಯಮಂತ್ರಿ

 

 

 

Advertisement

Udayavani is now on Telegram. Click here to join our channel and stay updated with the latest news.

Next