ಭಾಲ್ಕಿ: ಸಮಾಜ ಸೇವೆಯನ್ನು ಉಸಿರಾಗಿಸಿಕೊಂಡಿರುವ ಡಾ| ವೀರೇಂದ್ರ ಹೆಗ್ಗಡೆ ಅವರು ರಾಷ್ಟ್ರ ಮತ್ತು ಸಮಾಜದ ಬಹುದೊಡ್ಡ ಸಂಪತ್ತು ಆಗಿದ್ದಾರೆ ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್‌ನ ಅಧ್ಯಕ್ಷ ಡಾ| ಬಸವಲಿಂಗ ಪಟ್ಟದ್ದೇವರು ಹೇಳಿದರು.
ತಾಲೂಕಿನ ಕರಡ್ಯಾಳ ಗ್ರಾಮದ ಚನ್ನಬಸವೇಶ್ವರ ಗುರುಕುಲದಲ್ಲಿ ಬುಧವಾರ ಆಯೋಜಿಸಿದ್ದ ಡಾ| ವೀರೇಂದ್ರ ಹೆಗ್ಗಡೆ ಅವರ 73ನೇ ಜನ್ಮದಿನ ಕಾರ್ಯಕ್ರಮದಲ್ಲಿ ದತ್ತು ಕೇಂದ್ರದ ಸುದೈವಿ (ಅನಾಥ) ಮಕ್ಕಳಿಗೆ ಸ್ವೇಟರ್, ಬೆಡ್‌ಶೀಟ್, ಚಾಪೆ ಇರುವ ಕಿಟ್ ವಿತರಿಸಿ ಅವರು ಮಾತನಾಡಿದರು. ಎಡದ ಕೈಯಲ್ಲಿ ಲಿಂಗ ಪೂಜೆ, ಬಲದ ಕೈಯಲ್ಲಿ ಜಂಗಮ ಪೂಜೆ ಎನ್ನುವ ಹಾಗೆ ಡಾ| ವೀರೇಂದ್ರ ಹೆಗ್ಗಡೆ ಅವರು ದೇವರ ಸೇವೆ ಜತೆಗೆ ಸಮಾಜದ ಸೇವೆಯನ್ನು ತಮ್ಮ ಬದುಕಾಗಿಸಿಕೊಂಡಿದ್ದಾರೆ. ಸಾವಿರಾರೂ ಸಂಘ-ಸಂಸ್ಥೆಗಳ ಚಟುವಟಿಕೆಗಳ ನಡುವೆಯು ಪರಿಶುದ್ಧ ವ್ಯಕ್ತಿತ್ವ, ಮನಸ್ಸು ಮೈಗೂಡಿಸಿಕೊಂಡು ದಿನದ 24 ಗಂಟೆಗಳ ಕಾಲ ನಿರ್ಲಿಪ್ತವಾಗಿ ಕೆಲಸ ಮಾಡುವ ಮೂಲಕ ಪ್ರತಿಯೊಬ್ಬರಿಗೂ ಮಾದರಿಯಾಗಿದ್ದಾರೆ ಎಂದು ಹೇಳಿದರು.
ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಡಾ| ವೀರೇಂದ್ರ ಹೆಗ್ಗಡೆ ಅವರು ಬಸವಾದಿ ಶರಣರ ಚಿಂತನೆಗಳು ತಮ್ಮ ಬದುಕಿನ ಭಾಗವಾಗಿಸಿಕೊಂಡಿದ್ದಾರೆ. ಸಮಾಜದಲ್ಲಿ ತುಳಿತಕ್ಕೆ ಒಳಾಗಾಗಿರುವ ಜನರನ್ನು ಮೇಲೆತ್ತುವ ಅವರು ಎಲ್ಲರಿಗೂ ಆದರ್ಶರಾಗಿದ್ದಾರೆ ಎಂದು ತಿಳಿಸಿದರು.
ಸದ್ಗುರು ವಿದ್ಯಾ ಸಂಸ್ಥೆಯ ಸಂಸ್ಥಾಪಕ ಸೋಮನಾಥ ಮುದ್ದಾ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಉಮರಬ್ಬ ಮಾತನಾಡಿದರು. ಭಾಲ್ಕಿ ತಾಲೂಕು ಯೋಜನಾಧಿಕಾರಿ ಮಹಾಂತೇಶ. ಎಸ್ ಅವರು ಧರ್ಮಸ್ಥಳ ಯೋಜನೆ ಬಡ ಜನರಿಗೆ ನೀಡುತ್ತಿರುವ ಯೋಜನೆಗಳನ್ನು ವಿವರಿಸಿದರು. ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್‌ನ ಕಾರ್ಯದರ್ಶಿ ಮಹಾಲಿಂಗ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಸಂಸ್ಥೆಯ ನಿರ್ದೇಶಕ ಸೋಮನಾಥಪ್ಪ ಅಷ್ಟೂರೆ, ಡಿವೈಎಸ್ಪಿ ಡಾ| ದೇವರಾಜ.ಬಿ, ಪ್ರಾಚಾರ್ಯ ಬಸವರಾಜ ಮೊಳಕೀರೆ, ಹುಮನಾಬಾದ್ ಯೋಜನಾಧಿಕಾರಿ ಸುರೇಶ, ಬಸವಕಲ್ಯಾಣ ಯೋಜನಾಧಿಕಾರಿ ಸೋಮನಾಥ, ಬೀದರ ಯೋಜನಾಧಿಕಾರಿ ರಮೇಶ ನಾಯಕ್, ಔರಾದ್ ಯೋಜನಾಧಿಕಾರಿ ಮಾಸ್ತಪ್ಪ, ಜಯಕ್ಕ ಗಾಂವಕರ್ ಇದ್ದರು.
ಡಾ| ವೀರೇಂದ್ರ ಹೆಗ್ಗಡೆ ಅವರು 73ನೇ ವಸಂತಕ್ಕೆ ಕಾಲಿಡುತ್ತಿರುವುದು ಸಂತಸದ ಸಂಗತಿ. ಅವರ ಸೇವೆ ರಾಷ್ಟ್ರಕ್ಕೆ ಅಗತ್ಯವಾಗಿದ್ದು, ಮುಂದಿನ ದಿನಗಳಲ್ಲಿ ಶತಮಾನೋತ್ಸವ ಆಚರಿಸಿಕೊಳ್ಳುವಂತಾಗಲಿ.
-ಡಾ| ಬಸವಲಿಂಗ ಪಟ್ಟದ್ದೇವರು, ಹಿರೇಮಠ ಸಂಸ್ಥಾನ, ಭಾಲ್ಕಿ