ಬೆಳ್ತಂಗಡಿ: ಕಲಾ ಮಾಧ್ಯಮದ ಮೂಲಕ ಭಾವನೆಗಳನ್ನು ತುಂಬಿ ಅಭಿವ್ಯಕ್ತ ಪಡಿಸಲು ಅವಕಾಶ ವಿದೆ. ಯಕ್ಷಗಾನದಲ್ಲಿ ಸಂದಭೋìಚಿತ ಕಲೆಯ ರಸೋತ್ಪತ್ತಿ ಮಾಡುವ ಶ್ರೇಷ್ಠ ಕಲಾವಿದರಿರುವುದರಿಂದಲೇ ಇಂದಿಗೂ ಯಕ್ಷ ಪರಂಪರೆ ಜೀವಂತವಾಗಿ ಉಳಿದಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.ಡಿ. ವೀರೇಂದ್ರ ಹೆಗ್ಗಡೆ,ಕರ್ನಾಟಕ ಯಕ್ಷಗಾನ ಅಕಾಡೆಮಿ
ಕರ್ನಾಟಕ ಯಕ್ಷಗಾನ ಅಕಾಡೆಮಿ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಸಂಯೋಜನೆಯೊಂದಿಗೆ ಕುರಿಯ ವಿಠಲ ಶಾಸ್ತ್ರಿ ಯಕ್ಷಗಾನ ಪ್ರತಿಷ್ಠಾನದ ವತಿಯಿಂದ ಉಜಿರೆಯ ಶ್ರೀ ಸಿದ್ಧವನ ಗುರುಕುಲದಲ್ಲಿ ಶನಿವಾರ, ರವಿವಾರ ಆಯೋಜಿಸಿರುವ ಯಕ್ಷಗಾನ ಹಾಸ್ಯ ಪರಂಪರೆ – ಪ್ರಾತ್ಯಕ್ಷಿಕೆ ಮತ್ತು ದಾಖಲೀಕರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜನರನ್ನು ನಗಿಸುವುದು ಮಾತ್ರವೇ ಹಾಸ್ಯಗಾರನ ಉದ್ದೇಶವಾಗದೆ ಪಾತ್ರ ಹಾಗೂ ವೇದಿಕೆಯ ಗೌರವ ಹೆಚ್ಚಿಸುವುದು ಆತನಲ್ಲಿರುವ ಪ್ರೌಢಿಮೆ ಎಂದರು.
ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎ. ಹೆಗಡೆ ಮಾತನಾಡಿ, ಯಕ್ಷಗಾನದಲ್ಲಿ ಹಾಸ್ಯಕ್ಕೆ ಅದರದ್ದೇ ಆದ ಮಹತ್ವವಿದೆ. ಆದರೂ ಅದಕ್ಕೆ ಪ್ರಾತಿನಿಧ್ಯ ದೊರಕಿಲ್ಲ, ಮುಂದಿನ ತಲೆಮಾರಿಗೆ ಹಾಸ್ಯ ಪರಂಪರೆಯ ಸ್ಪಷ್ಟ ಚಿತ್ರಣ ನೀಡಲು ಈ ದಾಖಲೀಕರಣ ಅತ್ಯಗತ್ಯ ಎಂದರು.
ಹಿರಿಯ ಕಲಾವಿದರಾದ ಪೆರುವಡಿ ನಾರಾಯಣ ಭಟ್, ಗೋವಿಂದ ಭಟ್ ಉಪಸ್ಥಿತರಿದ್ದರು. ಎರಡು ದಿನಗಳಲ್ಲಿ ಸುಮಾರು 30 ಯಕ್ಷಗಾನ ಪರಂಪರೆ ಹಾಸ್ಯ ಪಾತ್ರಗಳ ಪ್ರಾತ್ಯಕ್ಷಿಕೆ ನಡೆಯಲಿದೆ.
ಕುರಿಯ ವಿಠಲ ಶಾಸ್ತ್ರಿ ಪ್ರತಿಷ್ಠಾನದ ಸಂಚಾಲಕ ಉಜಿರೆ ಅಶೋಕ್ ಭಟ್ ಪ್ರಸ್ತಾವನೆಗೈದರು. ಎಸ್‌ಡಿಎಂ ಕಾಲೇಜಿನ ಪ್ರಾಶುಂಪಾಲ ಪ್ರೊ| ಎಸ್. ಸತೀಶ್ಚಂದ್ರ ಸ್ವಾಗತಿಸಿ, ಯಕ್ಷಗಾನ ಅಕಾಡೆಮಿ ಸದಸ್ಯ ಸಂಚಾಲಕಿ ಆರತಿ ಪಟ್ರಮೆ ವಂದಿಸಿದರು. ಪದ್ಮನಾಭ ಕೆ.ವಿ. ನಿರ್ವಹಿಸಿದರು.