Advertisement

ಡಾ|ಟಿಎಂಎ ಪೈ ಆಸ್ಪತ್ರೆ ಸಾಧನೆ: ಕೋವಿಡ್ ಸೋಂಕಿತ 50 ಗರ್ಭಿಣಿಯರಿಗೆ ಯಶಸ್ವಿ ಹೆರಿಗೆ

10:51 PM Oct 08, 2020 | mahesh |

ಉಡುಪಿ: ಕೋವಿಡ್‌ -19 ಸೋಂಕಿನಿಂದ ಬಳಲುತ್ತಿರುವ 50 ಗರ್ಭಿಣಿ ಮಹಿಳೆಯರ ಯಶಸ್ವಿ ಹೆರಿಗೆಗಳನ್ನು ನಡೆಸುವಲ್ಲಿ ಉಡುಪಿ ಡಾ| ಟಿಎಂಎ ಪೈ ಆಸ್ಪತ್ರೆಯು ಮಹತ್ವದ ಮೈಲಿಗಲ್ಲು ಸಾಧಿಸಿದೆ. ಎಪ್ರಿಲ್‌ 1ರಿಂದ ಡಾ| ಟಿಎಂಎ ಪೈ ಆಸ್ಪತ್ರೆಯನ್ನು ಕೊರೊನಾ ಚಿಕಿತ್ಸೆಗಾಗಿ ಮೀಸಲಿರಿಸಲಾಗಿತ್ತು. ಮೇ 27ರಂದು ಮೊದಲ ಹೆರಿಗೆಯಾದರೆ ಅ. 3ರಂದು 50ನೇ ಹೆರಿಗೆ ನಡೆದಿದೆ.

Advertisement

ಇತ್ತೀಚಿನ ಅಧ್ಯಯನಗಳಿಂದ ನವಜಾತ ಶಿಶುಗಳಿಗೆ ಕೋವಿಡ್‌ -19 ಸೋಂಕಿನ ಅಪಾಯವಾಗುವ ಸಂಭವಗಳು ಇರುವುದರಿಂದ ಶಿಶುವನ್ನು ಕೋವಿಡ್‌ನಿಂದ ಮುಕ್ತಗೊಳಿಸಲು ಆಸ್ಪತ್ರೆಯು ಕಠಿನ ಕ್ರಮಗಳನ್ನು ಕೈಗೊಂಡಿತ್ತು.

50 ಹೆರಿಗೆಗಳಲ್ಲದೆ ಮೂರು, ಆರು, ಏಳು ತಿಂಗಳು ವಿವಿಧ ಅವಧಿಯ 150ಕ್ಕೂ ಹೆಚ್ಚು ಗರ್ಭಿಣಿಯರು ಕೊರೊನಾ ಸೋಂಕಿತರಾಗಿ ಸೇರಿ ಚಿಕಿತ್ಸೆ ಪಡೆದುಕೊಂಡು ಹೆರಿಗೆಗಿಂತ ಮೊದಲು ಆರೋಗ್ಯವಂತರಾಗಿ ಮರಳಿದ್ದಾರೆ. ಒಬ್ಬರಿಗಷ್ಟೇ ಐಸಿಯು ಹಾಸಿಗೆ ಬೇಕಾಗಿತ್ತು.

ವಿಶೇಷ ಕಾಳಜಿ
ಎಲ್ಲ ಹೆರಿಗೆಗಳು ತ್ರಾಸದಾಯಕವಾಗಿರಲಿಲ್ಲ. ನವಜಾತ ಶಿಶುಗಳು ಮತ್ತು ತಾಯಂದಿರ ಬಗ್ಗೆ ವಿಶೇಷ ಕಾಳಜಿ ತೋರಲಾಗುತ್ತಿತ್ತು ಎಂದು ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ| ಶಶಿಕಲಾ ಕೆ. ಭಟ್‌ ಹೇಳಿದ್ದಾರೆ.

ಸಂಪೂರ್ಣ ಮೌಲ್ಯಮಾಪನ
ತಾಯಿ ಮತ್ತು ಮಗು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಸೋಂಕಿನ ಸಮಯದಲ್ಲಿ ಹೆಚ್ಚುವರಿ ಪ್ರಯತ್ನಗಳು ಬೇಕಾಗುತ್ತವೆ. ಕಟ್ಟುನಿಟ್ಟಾದ ಸೋಂಕು ನಿಯಂತ್ರಣ ಮುನ್ನೆಚ್ಚರಿಕೆಗಳು ಮತ್ತು ರೋಗಿಗಳ ಆರೈಕೆ ನಿಯಮಾವಳಿಗಳೊಂದಿಗೆ ವೈದ್ಯರು ಮತ್ತು ಸಿಬಂದಿ ಎಲ್ಲ ಹೆರಿಗೆ ಮತ್ತು ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ. ನಿಯಮಾವಳಿ ಪ್ರಕಾರ ಎಲ್ಲ ರೋಗಿಗಳನ್ನು ಸಂಪೂರ್ಣವಾಗಿ ಮೌಲ್ಯಮಾಪನ ಮಾಡಲಾಗಿದೆ. ಜಿಲ್ಲಾಡಳಿತ ಮತ್ತು ಸರಕಾರದ ಸಕ್ರಿಯ ಬೆಂಬಲದೊಂದಿಗೆ ನಾವು ಕೋವಿಡ್‌ -19 ರೋಗಿಗಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಯನ್ನು ಅರ್ಪಿಸಿದ್ದೇವೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಶಶಿಕಿರಣ ಉಮಾಕಾಂತ್‌ ಪ್ರತಿಕ್ರಿಯೆ ನೀಡಿದ್ದಾರೆ.

Advertisement

1,250 ಸೋಂಕಿತರಿಗೆ ಚಿಕಿತ್ಸೆ
ಡಾ| ಟಿಎಂಎ ಪೈ ಆಸ್ಪತ್ರೆ 150 ಹಾಸಿಗೆಗಳ ಸಾಮರ್ಥ್ಯ ಹೊಂದಿದ್ದು, ಕೋವಿಡ್‌ ಚಿಕಿತ್ಸೆಗೆ ಮೀಸಲಿಡಲಾಗಿದೆ. 8 ತೀವ್ರ ನಿಗಾ ಘಟಕಗಳು, 10 ಎಚ್‌ಡಿಯು ಹಾಸಿಗೆಗಳು, 50 ಹಾಸಿಗೆಗಳ ಖಾಸಗಿ ಕೊಠಡಿಗಳು ಮತ್ತು 82 ಸಾಮಾನ್ಯ ವಾರ್ಡಿನ ಹಾಸಿಗೆಗಳ ಸೌಲಭ್ಯವಿದೆ. ಎಪ್ರಿಲ್‌ 1ರಿಂದ ಇದುವರೆಗೆ 1,250 ಸೋಂಕಿತ ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಸೋಂಕಿತರಲ್ಲಿಯೂ ಗಂಭೀರ ಸ್ಥಿತಿಯ ರೋಗಿಗಳನ್ನು ಮಾತ್ರ ಇಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡುತ್ತಿರುವುದು ಉಲ್ಲೇಖನೀಯ.

Advertisement

Udayavani is now on Telegram. Click here to join our channel and stay updated with the latest news.

Next