ಕುಂದಾಪುರ: ಮಣಿಪಾಲದ ಡಾ| ಟಿ.ಎಂ.ಎ. ಪೈ ಫೌಂಡೇಶನ್ ವರ್ಷಂಪ್ರತಿ ನೀಡುವ ಡಾ| ಟಿ.ಎಂ.ಎ. ಪೈ ವಿಶಿಷ್ಟ ಕೊಂಕಣಿ ಸಾಧಕ ಪುರಸ್ಕಾರವನ್ನು ಕುಂದಾಪುರ ಉಪ್ಪಿನಕುದ್ರುವಿನ ಗೊಂಬೆಯಾಟದ ಸೂತ್ರಧಾರ ಭಾಸ್ಕರ ಕೊಗ್ಗ ಕಾಮತ್ ಹಾಗೂ ಡಾ| ಎಚ್. ಶಾಂತಾರಾಮ್ ಯಕ್ಷಗಾನ ಪ್ರಶಸ್ತಿಯನ್ನು ಸಾಲಿಗ್ರಾಮ ಯಕ್ಷಗಾನ ಮೇಳದ ವೇಷಧಾರಿ ಶಶಿಕಾಂತ ಶೆಟ್ಟಿ ಕಾರ್ಕಳ ಅವರಿಗೆ ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನ ಆರ್. ಎನ್. ಶೆಟ್ಟಿ ಸಭಾಂಗಣದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ನೀಡಿ ಗೌರವಿಸಲಾಯಿತು.
ಕುಂದಾಪುರದ ಭಂಡಾರ್‌ಕಾರ್ಸ್ ಕಾಲೇಜಿನ ವತಿಯಿಂದ 42 ನೇ ವರ್ಷದ ರಾಜ್ಯೋತ್ಸವ ತಾಳಮದ್ದಲೆ, ಯಕ್ಷಗಾನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಈ ಸಮ್ಮಾನ ನಡೆಯಿತು. ಗೌರವ ಸ್ವೀಕರಿಸಿ ಮಾತನಾಡಿದ ಭಾಸ್ಕರ ಕಾಮತ್ ಅವರು ಡಾ| ಟಿ. ಎಂ.ಎ. ಪೈ ಅವರ ವ್ಯಕ್ತಿತ್ವ ಭಾರತರತ್ನಕ್ಕಿಂತಲೂ ಮಿಗಿಲು. ಈ ಮಹೋನ್ನತ ಪ್ರಶಸ್ತಿಯು ನನ್ನ ಗೊಂಬೆಯಾಟದ ಕಲಾ ಪ್ರಕಾರದಲ್ಲಿ ದುಡಿಯುತ್ತಿರುವ ಎಲ್ಲ ಕಲಾವಿದರಿಗೂ ಸಂದ ಗೌರವ. ಉಪ್ಪಿನಕುದ್ರವಿನಲ್ಲಿರುವ ಗೊಂಬೆಯಾಟಕ್ಕೆ ಹಲವು ಅಡೆ-ತಡೆಗಳು ಎದುರಾಗಿರುವುದು ಶೋಚನೀಯ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ಡಾ| ಎಚ್. ಶಾಂತಾರಾಮ್ ಯಕ್ಷಗಾನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಯಕ್ಷ ಪಾತ್ರಧಾರಿ ಶಶಿಕಾಂತ್ ಶೆಟ್ಟಿ ಅವರು, ಈ ಪ್ರಶಸ್ತಿಯು ಯಕ್ಷ ಲೋಕದಲ್ಲಿ ಹಲವಾರು ವರ್ಷ ಜೀವನ ಸವೆಸಿದ ಅನೇಕ ದಿವ್ಯ ಚೇತನಗಳಿಗೆ ಸಂದ ಗೌರವ ಎಂದರು.
ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಆಡಳಿತಾಧಿಕಾರಿ ಡಾ| ಎಚ್. ಶಾಂತಾರಾಮ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಉದಯೋನ್ಮುಖ ಕಲಾವಿದರನ್ನು ಗುರುತಿಸಿ, ಗೌರವಿಸಿ, ಬೆನ್ನು ತಟ್ಟಿ ಪ್ರೋತ್ಸಾಹಿಸುವುದರಿಂದ ಕಲಾಪ್ರೌಢಿಮೆ ಬೆಳೆಯುತ್ತದೆ. ಕಲೆ, ಕಲಾಕ್ಷೇತ್ರ, ಸಂಸ್ಥೆಯನ್ನು ಕಟ್ಟಿಬೆಳೆಸುವುದು ಸುಲಭವಲ್ಲ. ಕಲೆ, ಸಂಸ್ಥೆಗಳು ಇಡೀ ಸಮಾಜಕ್ಕೆ ಸೇರಿರುವುದು ಎನ್ನುವ ಮನೋಭಾವ ಕಡಿಮೆಯಾಗುತ್ತಿರುವುದು ಖೇದನೀಯ ಎಂದರು. ಕಾಲೇಜಿನ ವಿಶ್ವಸ್ತರಾದ ರಾಜೇಂದ್ರ ತೋಳಾರ್ ಉಪಸ್ಥಿತರಿದ್ದರು.
ಸಾಲಿಗ್ರಾಮ ಮೇಳದ ವ್ಯವಸ್ಥಾಪಕ ಪಳ್ಳಿ ಕಿಶನ್ ಹೆಗ್ಡೆ, ರಂಜಿತ್ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ| ಎನ್. ಪಿ. ನಾರಾಯಣ ಶೆಟ್ಟಿ ಸ್ವಾಗತಿಸಿ, ಜಿ.ಎಂ. ಗೊಂಡ ವಂದಿಸಿದರು. ಡಾ| ರಮೇಶ್ ಚಿಂಬಾÛಕರ್ ಕಾರ್ಯಕ್ರಮ ನಿರೂಪಿಸಿದರು.