ಮಣಿಪಾಲ: ಭವಿಷ್ಯದಲ್ಲಿ ಅಥವಾ ಮುಂದಿನ ಒಂದೆರಡು ದಶಕಗಳಲ್ಲಿ ದೇಶವೊಂದು ಜಾಗತಿಕ ಶಕ್ತಿ ಯಾಗಿ ಹೊರಹೊಮ್ಮಬೇಕಾದರೆ ತಂತ್ರಜ್ಞಾನದ ಜತೆಗೆ ನೆರೆಯ ರಾಷ್ಟ್ರಗಳೊಂದಿಗೆ ಜಾಣ್ಮೆಯ ನಡೆ ಅತಿ ಮುಖ್ಯವಾಗುತ್ತದೆ ಎಂದು ರಾಷ್ಟ್ರೀಯ ಭದ್ರತೆಯ ನಿವೃತ್ತ ಉಪ ಸಲಹೆಗಾರ ಹಾಗೂ ರಷ್ಯಾ, ಬಾಂಗ್ಲಾದೇಶದ ಮಾಜಿ ರಾಯಭಾರಿ ಪಂಕಜ್ ಸರನ್ ಹೇಳಿದರು.
ಮಾಹೆ ವಿ.ವಿ.ಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್‌ನ ಜಿಯೋಪೊಲಿಟಿಕ್ಸ್ ಆ್ಯಂಡ್ ಇಂಟರ್‌ನ್ಯಾಶನಲ್ ರಿಲೇಶನ್, ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಕಮ್ಯೂನಿಕೇಶನ್ (ಎಂಐಸಿ) ಹಾಗೂ ಇಂಡಿಯನ್ ಕೌನ್ಸಿಲ್ ಆಫ್ ವರ್ಲ್ಡ್ ಅಫೇರ್ನ ಸಹಯೋಗದಲ್ಲಿ ಡಾ| ಟಿಎಂಎ ಪೈ ಅವರ 125ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಎಂಐಸಿ ಸಭಾಂಗಣದಲ್ಲಿ ಹಮ್ಮಿಕೊಂಡಿರುವ 2 ದಿನಗಳ “ಇಂಡಿಯಾ ಆ್ಯಂಡ್ ಇಂಟರ್‌ನ್ಯಾಶನಲ್ ಸೆಕ್ಯೂರಿಟಿ, ಪೀಸ್ ಆ್ಯಂಡ್ ಮೀಡಿಯಾ ಸಮ್ಮೇಳನದ ಸಮಾರೋಪದಲ್ಲಿ ಮಂಗಳವಾರ ಅವರು ಮಾತನಾಡಿದರು.
ಪ್ರಸ್ತುತ ಭಾರತ, ಅಮೆರಿಕ, ರಷ್ಯಾ, ಚೀನ ಸಹಿತ ಎಲ್ಲ ದೇಶಗಳಿಗೂ ನೆರೆಯ ರಾಷ್ಟ್ರಗಳೊಂದಿಗೆ ಸಂಬಂಧ ವೃದ್ಧಿ ಹಾಗೂ ನಿರ್ವಹಣೆ ಅತಿ ಮುಖ್ಯವಾಗಿದೆ. ನೆರೆಯ ದೇಶಗಳ ವಿವಿಧ ಅಧ್ಯಯನ, ಜ್ಞಾನ ಮಾಹಿತಿ ಪಡೆಯಬೇಕಾಗುತ್ತದೆ ಎಂದರು.
ರಷ್ಯ-ಯುಕ್ರೇನ್ ಯುದ್ಧಕ್ಕೆ ಸಂಬಂಧಿಸಿದಂತೆ ಭಾರತವು ತತ್‌ಕ್ಷಣವೇ ರಷ್ಯದಿಂದ ದೂರವಾಗಲು ಸಾಧ್ಯವಿಲ್ಲ. ಇಂತಹ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ನಿರ್ವಹಣೆ ಮಾಡಬೇಕಾ ಗುತ್ತದೆ ಎಂದು ವಿಶ್ಲೇಷಿಸಿದರು.
ಕುಲಸಚಿವ ಡಾ| ಗಿರಿಧರ ಕಿಣಿ ಸಮ್ಮೇಳನದ ಮಹತ್ವ ತಿಳಿಸಿದರು.
ಎಂಐಸಿ ನಿರ್ದೇಶಕಿ ಡಾ| ಪದ್ಮಾರಾಣಿ, ನಿವೃತ್ತ ಐಎಎಸ್ ಅಧಿಕಾರಿ ಪ್ರಭಾ ರಾವ್, ಮಾಹೆ ಡಿಜಿಐಆರ್ ಚೀನಾ ಸ್ಟಡೀ ಸೆಂಟರ್‌ನ ಮುಖ್ಯಸ್ಥ ಡಾ| ಶೇಷಾದ್ರಿ ಚಾರಿ, ಜಿಸಿಪಿಎಎಸ್ ಮುಖ್ಯಸ್ಥ ಪ್ರೊ| ವರದೇಶ ಹಿರೇಗಂಗೆ ಉಪಸ್ಥಿತರಿದ್ದರು. ಡಿಜಿಐಆರ್ ಮುಖ್ಯಸ್ಥೆ ಪ್ರೊ| ಕೆ.ಪಿ. ವಿಜಯಲಕ್ಷ್ಮೀ ವಂದಿಸಿದರು.