Advertisement

ಡಾ|ಸುಭದ್ರಮ್ಮ ಅನುಪಮ ಅಭಿನೇತ್ರಿ

12:15 PM May 29, 2018 | |

ಬಳ್ಳಾರಿ: ಸುಮಧುರ ಕಂಠಸಿರಿಯಿಂದ ಗ್ರಾಮೀಣ ಪ್ರದೇಶಗಳ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದ ಅನುಪಮ ಅಭಿನೇತ್ರಿ ನಾಡೋಜ ಡಾ. ಸುಭದ್ರಮ್ಮ ಮನ್ಸೂರ್‌ ಅವರು, ಖ್ಯಾತ ಗಾಯಕರಾದ ಲತಾ ಮಂಗೇಶ್ಕರ್‌, ಆಶಾ ಭೋಂಸ್ಲೆ ಅವರಿಗೆ ಸರಿ ಸಮಾನರು ಎಂದು ಹಿರಿಯ ಪತ್ರಕರ್ತ ಗುಡಿಹಳ್ಳಿ ನಾಗರಾಜ್‌ ಅಭಿಪ್ರಾಯಪಟ್ಟರು.

Advertisement

ನಗರದ ರಾಘವ ಕಲಾಮಂದಿರದಲ್ಲಿ ಗಾನಕೋಗಿಲೆ, ಅನುಪಮ ಅಭಿನೇತ್ರಿ ಸುಭದ್ರಮ್ಮ ಮನ್ಸೂರು ಅವರು 80ರ ವಸಂತಕ್ಕೆ ಕಾಲಿಟ್ಟ ಸಂದರ್ಭದಲ್ಲಿ ನಾಗರಿಕ ಅಭಿನಂದನಾ ಸಮಿತಿಯಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಅಮೃತಾಭಿನಂದನೆ ಕಾರ್ಯಕ್ರಮದಲ್ಲಿ ಸುಭದ್ರಮ್ಮರ ಕುರಿತು ಅವರು ಗುಣಗಾನ ಮಾಡಿದರು.

ಗ್ರಾಮೀಣ ಪ್ರದೇಶದ ಅತ್ಯಂತ ಬೇಡಿಕೆಯ ಕಲಾವಿದೆಯಾಗಿದ್ದ ಸುಭದ್ರಮ್ಮ ಮನ್ಸೂರ್‌ ಅವರು, ಅಪ್ರತಿಮ ಗಾಯಕಿಯೂ ಆಗಿದ್ದರು. ಆದರೆ ಅವರಿಗೆ ದೊರೆಯಬೇಕಾದ ಮನ್ನಣೆ ದೊರೆಯಲಿಲ್ಲ. ವೃತ್ತಿ ರಂಗಭೂಮಿಯ ಹಿರಿಯ ಕಲಾವಿದರ ಕುರಿತು ನಮ್ಮ ಬಳಿ ಸಾಕಷ್ಟು ದಾಖಲೆಗಳಿಲ್ಲ. ಇದು ನಿಜಕ್ಕೂ ವಿಷಾದನೀಯ. ನಮ್ಮ ಗ್ರಾಮೀಣ ಹಿನ್ನೆಲೆಯ ಕಲಾವಿದರು ಪ್ರಚಾರಕ್ಕೆ ಬಾರದ ಪ್ರತಿಭೆಗಳು ಎಂದರು.

ಸಾಕಷ್ಟು ವೃತ್ತಿ ರಂಗಭೂಮಿಯ ಕಲಾವಿದರು ನಿರ್ಲಕ್ಷಿತ ಕಲಾವಿದರು. ನಮ್ಮ ಪತ್ರಿಕಾ ಮಾಧ್ಯಮಗಳು ಇಂತಹ ಮಹಾನ್‌ ಕಲಾವಿದರ ಕುರಿತು ಲೇಖನಗಳನ್ನು ಪ್ರಕಟಿಸಿಲ್ಲ. ಇದೊಂದು ನ್ಯೂನತೆ. ಸುಭದ್ರಮ್ಮನವರ ಸಾಧನೆಯ ಹಿಂದೆ ಸುದೀರ್ಘ‌ ತಪಸ್ಸಿದೆ. ಕಲಿಯುವ ತುಡಿತವಿದೆ. ಅವರು, ಸಾಕಷ್ಟು ಘನತೆ, ಗಾಂಭೀರ್ಯದಿಂದ ಜೀವಿಸಿದ್ದಾರೆ. ಅವರ ನಡೆ-ನುಡಿಗಳು ರಂಗಭೂಮಿಯ ಇತರ ನಟಿಯರಿಗೆ ಅನುಕರಣೀಯವಾಗಿದ್ದವು. ಚಂದ್ರಶೇಖರ ಗವಾಯಿಗಳ ಬಳಿ ತಡವಾಗಿಯಾದರೂ ಶಾಸ್ತ್ರೀಯ ಸಂಗೀತವನ್ನು ಕಲಿತು, ರಂಗಭೂಮಿಯಲ್ಲಿ ಮೇರು ವ್ಯಕ್ತಿತ್ವದ ವೃತ್ತಿ ಕಲಾವಿದೆಯಾಗಿ ಮೆರೆದರು ಎಂದರು.

ಹಿರಿಯ ಪತ್ರಕರ್ತೆ ಡಾ| ಆರ್‌.ಪೂರ್ಣಿಮಾ ಮಾತನಾಡಿ, ಡಾ| ಸುಭದ್ರಮ್ಮನವರು ಸಾಂಸ್ಕೃತಿಕ ಲೋಕದ ಐಕಾನ್‌ ಆಗಿದ್ದಾರೆ. ಅವರು ವೃತ್ತಿ ರಂಗಭೂಮಿ ನಟಿಯಾಗಿ 21 ಕಂಪನಿಗಳಲ್ಲಿ ಆಹ್ವಾನದ ಮೇರೆಗೆ ನಾಟಕಗಳಲ್ಲಿ ಅಭಿನಯಿಸಿ ಕಲಾ ರಸಿಕರ ಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ ಎಂದು ಬಣ್ಣಿಸಿದರು. 

Advertisement

ಮಹಿಳಾ ಸಾಧಕಿಯರನ್ನು ದಾಖಲೀಕರಿಸುವ ಪ್ರಯತ್ನ ಅತ್ಯಂತ ಕಡಿಮೆಯಿದ್ದು, ಅದು ವ್ಯವಸ್ಥಿತವಾಗಿ ನಡೆಯಬೇಕಿದೆ. ತಂತ್ರಜ್ಞಾನ ಯುಗದಲ್ಲಿರುವ ನಾವು, ಸುಭದ್ರಮ್ಮ ಅವರ ನಾಟಕಗಳ ದೃಶ್ಯ, ಗೀತ ಗಾಯನಗಳನ್ನು ಧ್ವನಿ ಮುದ್ರಿಸಿ ಚಿತ್ರೀಕರಣ ಮಾಡಬಹುದಾಗಿತ್ತು. ಅದು ಆಗಲಿಲ್ಲ. ಆದರೆ, ಈ ನಿಟ್ಟಿನಲ್ಲಿ ಸುಭದ್ರಮ್ಮನವರ ಧ್ವನಿಯಲ್ಲಿ ರಂಗ ಗೀತೆಗಳನ್ನು ದಾಖಲಿಸಿರುವುದು ಶ್ಲಾಘನೀಯ ಎಂದರು.

ನಾಗರಿಕ ಸನ್ಮಾನ ಸ್ವೀಕರಿಸುವ ಮುನ್ನ ಸುಭದ್ರಮ್ಮ ಮನ್ಸೂರು ಮಾತನಾಡಿ, ಗ್ರಾಮೀಣ ಕ್ಷೇತ್ರದ ಪ್ರೇಕ್ಷಕರಿಂದ ನಾನು ಗುರುತಿಸಿಕೊಂಡು ಇಷ್ಟು ಬೆಳೆಯುವಂತಾಯಿತು. ನನ್ನ ಜೀವನದ ಸಾಧನೆಯಲ್ಲಿ ಅನೇಕ ಮಹನೀಯರ ಕಾಣಿಕೆ ಇದೆ ಎಂದರು. 

ಸಮಿತಿಯ ಗೌರವಾಧ್ಯಕ್ಷ ಬಿ.ಸಿದ್ಧನಗೌಡ ಅಧ್ಯಕ್ಷತೆ ವಹಿಸಿದ್ದರು. ಕೊನೆಯಲ್ಲಿ ಸುಭದ್ರಮ್ಮ ಮನ್ಸೂರು ಅವರನ್ನು ಸನ್ಮಾನಿಸಲಾಯಿತು. ಕಲ್ಯಾಣಿ ಪ್ರಾರ್ಥಿಸಿದರು. ಕಪ್ಪಗಲ್ಲು ಪ್ರಭುದೇವ ಪ್ರಾಸ್ತಾವಿಕ ಮಾತನಾಡಿದರು. ಅಡವಿ ಸ್ವಾಮಿ ನಿರ್ವಹಿಸಿದರು

Advertisement

Udayavani is now on Telegram. Click here to join our channel and stay updated with the latest news.

Next