Advertisement

ಡಾ|ರಾಜ್‌ ಹುಟ್ಟುಹಬ್ಬದಂದು ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ

03:45 AM Apr 21, 2017 | Team Udayavani |

ಬೆಂಗಳೂರು: ಡಾ ರಾಜ್‌ಕುಮಾರ್‌ ಅವರ ಹುಟ್ಟುಹಬ್ಬವಾದ ಏಪ್ರಿಲ್‌ 24 ರಂದು ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭ ನಡೆಯಲಿದ್ದು, ಈ ಸಂದರ್ಭದಲ್ಲಿ 2016ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ.

Advertisement

2016ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಇತ್ತೀಚೆಗೆ ಘೋಷಿಸಲಾಗಿದ್ದು, ಅಚ್ಯುತ್‌ ಕುಮಾರ್‌ ಮತ್ತು ಶ್ರುತಿ ಹರಿಹರನ್‌ ಅವರು “ಅಮರಾವತಿ’ ಮತ್ತು “ಬ್ಯೂಟಿಫ‌ುಲ್‌ ಮನಸುಗಳು’ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟ ಮತ್ತು ನಟಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಚಿತ್ರರಂಗಕ್ಕೆ ಸಲ್ಲಿಸಿರುವ ಜೀವಿತಾವಧಿ ಸಾಧನೆಗಾಗಿ ಹಿರಿಯ ನಟಿ ಆದವಾನಿ ಲಕ್ಷ್ಮೀದೇವಿ ಅವರಿಗೆ ಡಾ|ರಾಜಕುಮಾರ್‌ ಪ್ರಶಸ್ತಿ, ಹಿರಿಯ ನಿರ್ದೇಶಕ ಕೆ.ವಿ. ರಾಜು ಅವರಿಗೆ ಪುಟ್ಟಣ್ಣ ಕಣಗಾಲ್‌ ಪ್ರಶಸ್ತಿ ಮತ್ತು ಚಿನ್ನಪ್ಪ ಅವರಿಗೆ ಡಾ. ವಿಷ್ಣುವರ್ಧನ್‌ ಪ್ರಶಸ್ತಿಯನ್ನು ಇದೇ ಸಂದರ್ಭದಲ್ಲಿ ನೀಡಲಾಗುತ್ತಿದೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಈ ಸಮಾರಂಭವನ್ನು ಆಯೋಜಿಸಲಾಗಿದ್ದು ಏ.24ರಂದು ಸಂಜೆ 6ಕ್ಕೆ ನಗರದ ವಸಂತನಗರದ ಡಾ.ಬಿ.ಆರ್‌. ಅಂಬೇಡ್ಕರ್‌ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ಸಮಾರಂಭದ ಅಧ್ಯಕ್ಷತೆಯನ್ನು ನಗರಾಭಿವೃದ್ಧಿ ಹಾಗೂ ಹಜ್‌ ಸಚಿವ ರೋಷನ್‌ ಬೇಗ್‌ ವಹಿಸಲಿದ್ದಾರೆ. ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್‌, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಮಹಾಪೌರರಾದ ಜಿ. ಪದ್ಮಾವತಿ, ವಿಧಾನ ಪರಿಷತ್‌ ಸದಸ್ಯರಾದ ಪುಟ್ಟಸ್ವಾಮಿ, ಶರವಣ, ಡಾ. ಜಯಮಾಲ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಸಾ.ರಾ. ಗೋವಿಂದು, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಎಸ್‌.ವಿ. ರಾಜೇಂದ್ರ ಸಿಂಗ್‌ ಬಾಬು ಮುಂತಾದವರು ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next