Advertisement

ಸಿದ್ಧಗಂಗಾ ಶ್ರೀಗಳ ಆರೋಗ್ಯ ಸ್ಥಿರ

06:00 AM Dec 07, 2018 | Team Udayavani |

ತುಮಕೂರು: ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯದಲ್ಲಿ ಸ್ಥಿರತೆ ಕಂಡು ಬಂದಿದೆ. ಗುರುವಾರ ಎಂದಿನಂತೆ ಶ್ರೀಗಳು ಬೆಳಗ್ಗೆ ಮತ್ತು ಮಧ್ಯಾಹ್ನ ಇಷ್ಟಲಿಂಗ ಪೂಜೆ ಮಾಡಿ ಪ್ರಸಾದ ಸೇವಿಸಿ ಹಳೇ ಮಠದಲ್ಲಿ ಲವಲವಿಕೆಯಿಂದ ಇದು, ವಿಶ್ರಾಂತಿ ಪಡೆಯುತ್ತಿದ್ದಾರೆ. ರಾತ್ರಿ ಚೆನ್ನೈನ ವೈದ್ಯರ ತಂಡ ಮಠ ಆಗಮಿಸಿ ತಪಾಸಣೆ ನಡೆಸಿದೆ.

Advertisement

ಬುಧವಾರ ರಾತ್ರಿ 9.30ರ ಸುಮಾರಿಗೆ ಹಳೇಮಠದಲ್ಲಿ ಪೂಜೆ ನೆರವೇರಿಸಿ ಪ್ರಸಾದ ಸೇವಿಸಿ ವಿಶ್ರಾಂತಿ ಪಡೆಯುವ ವೇಳೆ ಶ್ರೀಗಳಿಗೆ ಜ್ವರ, ಹೃದಯ ಬಡಿತ ಕಾಣಿಸಿಕೊಂಡಿತು. ಇದರಿಂದ ಮಠದಲ್ಲಿ ಆತಂಕದ ವಾತಾವರಣ ಉಂಟಾಗಿತ್ತು. ತಕ್ಷಣ ಶ್ರೀಗಳ ಆರೋಗ್ಯ ನೋಡಿಕೊಳ್ಳುವ ಡಾ.ಪರಮೇಶ್ವರ್‌ ಮಠಕ್ಕೆ ಬಂದು ಶ್ರೀಗಳ ತಪಾಸಣೆ ನಡೆಸಿದರು. ನಂತರ ಬಿಜಿಎಸ್‌ ವೈದ್ಯ ಡಾ.ರವೀಂದ್ರ ಮತ್ತು ಡಾ.ವೆಂಕಟರಮಣ ಅವರು ಆಗಮಿಸಿ ಮಧ್ಯರಾತ್ರಿ 2.30ರ ವರೆಗೆ ಸಿದ್ಧಗಂಗಾ ಮಠದಲ್ಲಿ ಚಿಕಿತ್ಸೆ ನೀಡಿದರು. ಬಳಿಕ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿತ್ತು.

ಕಳೆದ ಶನಿವಾರ ಜ್ವರದಿಂದ ಬಳಲಿದ ಶ್ರೀಗಳನ್ನು ಬೆಂಗಳೂರಿನ ಬಿಜಿಎಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ರಕ್ತದಲ್ಲಿ ಸೋಂಕು, ಪಿತ್ತನಾಳ ಹಾಗೂ ಪಿತ್ತ ಕೋಶದಲ್ಲಿ ಸೋಂಕು ಕಂಡು ಬಂದಿದ್ದರಿಂದ ಸ್ಟೆಂಟ್‌ ಅಳವಡಿಸಿ ಚಿಕಿತ್ಸೆ ನೀಡಿ ಸೋಮವಾರ ಶ್ರೀಗಳನ್ನು ಮಠಕ್ಕೆ ಕಳುಹಿಸಲಾಗಿತ್ತು. ಸೋಮವಾರ, ಮಂಗಳವಾರ ಮತ್ತು ಬುಧವಾರ ರಾತ್ರಿವರೆಗೂ ಶ್ರೀಗಳು ಮಠದಲ್ಲಿಯೇ ವಿಶ್ರಾಂತಿ ಪಡೆದರು.

ದರ್ಶನಕ್ಕೆ ಎರಡು ದಿನ: ಬುಧವಾರ ಮಧ್ಯರಾತ್ರಿವರೆಗೂ ಚಿಕಿತ್ಸೆ ನೀಡಿದ ಪರಿಣಾಮ ಗುರುವಾರ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಎಂದಿಗಿಂತ ಸ್ವಲ್ಪ ತಡವಾಗಿ ಎದ್ದ ಶ್ರೀಗಳು, ತಮ್ಮ ನಿತ್ಯ ಕಾರ್ಯಗಳಲ್ಲಿ ತಲ್ಲೀನರಾದರು. ಬೆಳಗ್ಗೆ ಶಿವಪೂಜೆ ಮುಗಿಸಿ ಪ್ರಸಾದ ಸೇವಿಸಿ ಮಾಧ್ಯಮಗಳಿಗೆ ದರ್ಶನ ನೀಡಿದರು. ಯಾರೂ ಆತಂಕ ಪಡುವ ಅಗತ್ಯವಿಲ್ಲ, ಶ್ರೀಗಳ ದರ್ಶನಕ್ಕೆ ಭಕ್ತರು ಎರಡು ದಿನ ಕಾಯಬೇಕು ಎಂದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ತಿಳಿಸಿದ್ದಾರೆ. ಸ್ವಾಮೀಜಿ ಅವರ ಅನಾರೋಗ್ಯ ಹಿನ್ನೆಲೆಯಲ್ಲಿ ಉಪಮುಖ್ಯಮಂತ್ರಿ ಡಾ. ಪರಮೇಶ್ವರ ಅವರು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಸಿದ್ಧಗಂಗಾ ಶ್ರೀಗಳ ಆರೋಗ್ಯದ ಬಗ್ಗೆ ಆತಂಕ ಬೇಡ. ಆರೋಗ್ಯ ಸ್ಥಿರವಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತರಿಸಿಕೊಳ್ಳುತ್ತಿದ್ದೇನೆ. ಮಠದ ಕಿರಿಯ ಸ್ವಾಮೀಜಿ ಜತೆ ನಿರಂತರ ಸಂಪರ್ಕದಲ್ಲಿದ್ದೇನೆ. ಹೆಚ್ಚಿನ ಚಿಕಿತ್ಸೆ ಅನಿವಾರ್ಯತೆ ಇದ್ದರೆ ಆಸ್ಪತ್ರೆಗೆ ದಾಖಲಿಸಲು ಹೇಳಿದ್ದೇನೆ.
– ಎಚ್‌.ಡಿ.ಕುಮಾರಸ್ವಾಮಿ, ಸಿಎಂ

Advertisement
Advertisement

Udayavani is now on Telegram. Click here to join our channel and stay updated with the latest news.

Next