Advertisement

ಡಾ|ಸಂಗಮೇಶ ಹಂಡಿಗಿ ಸಜ್ಜನ ಜೀವಿ: ಮೂಜಗು

01:48 PM May 06, 2019 | Suhan S |

ಹುಬ್ಬಳ್ಳಿ: ಸಾಹಿತಿ ಡಾ| ಸಂಗಮೇಶ ಹಂಡಿಗಿ ಹಣ, ಬಂಗಾರ, ಆಸ್ತಿಗಿಂತ ಸಾಹಿತ್ಯ, ಆಧ್ಯಾತ್ಮ, ಸದ್ಗುಣ ಸಂಪತ್ತು ಗಳಿಸಿದ್ದಾರೆ. ಸರಳ, ಸಜ್ಜನ ಜೀವಿಯಾಗಿದ್ದಾರೆಂದು ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ಧ ರಾಜಯೋಗೀಂದ್ರ ಮಹಾ ಸ್ವಾಮೀಜಿ ನುಡಿದರು.

Advertisement

ಇಲ್ಲಿನ ಮೂರುಸಾವಿರ ಮಠದ ಲಿಂ. ಡಾ| ಗಂಗಾಧರ ರಾಜಯೋಗೀಂದ್ರ ಮಹಾಸ್ವಾಮಿಗಳ ಸಭಾಭವನದಲ್ಲಿ ರವಿವಾರ ಹಮ್ಮಿಕೊಂಡಿದ್ದ 81ರ ಸಂಭ್ರಮದ ಸಾಹಿತಿ ಡಾ| ಸಂಗಮೇಶ ಹಂಡಿಗಿ ಅವರಿಗೆ ಅಭಿನಂದನೆ ಹಾಗೂ ಸಂಗಮ ಸಂಪದ ಅಭಿನಂದನ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.

ಡಾ|ಸಂಗಮೇಶ ಅವರು ಒಳ್ಳೆಯ ವಾಗ್ಮಿ, ಸತತ ಅಧ್ಯಯನಶೀಲರು, ಬರಹಗಾರರಾಗಿದ್ದಾರೆ. ಎಲ್ಲ ಕ್ಷೇತ್ರಗಳಲ್ಲಿ ಸೇವೆ ಮಾಡಿದ್ದಾರೆ. ಅವರ ಜೀವನ ಶಿವಮಯ, ಶರಣಮಯವಾಗಿದ್ದು, ಸಮಾಜಮುಖೀ ಬದುಕಾಗಿದೆ. ಅವರ ಕುಟುಂಬವು ಇತರರಿಗೆ ಆದರ್ಶವಾಗಿದೆ ಎಂದರು.

ವಾಣಿಜ್ಯ ತೆರಿಗೆ ಇಲಾಖೆಯ ವಿಶ್ರಾಂತ ಉಪ ಆಯುಕ್ತ ಜಿ.ಬಿ. ಗೌಡಪ್ಪಗೋಳ ಮಾತನಾಡಿ, ಸಂಗಮೇಶ ಹಂಡಗಿ ಅವರು ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಪ್ರೇರಣೆ, ಆದರ್ಶವಾಗಿದ್ದಾರೆ. ನನ್ನ ಬದುಕಿನ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ನಾನು ಅವರಿಂದ ಹೊಸ ಚೈತನ್ಯ, ಸ್ಫೂರ್ತಿ, ಚಿಂತನೆ ಪಡೆದಿದ್ದೇನೆ. ಅವರು ನಡೆ-ನುಡಿ ಒಂದಾಗಿಸಿಕೊಂಡವರು. ಪಂಚಭಾಷಾ ಪ್ರಬುದ್ಧರಾದ ಅವರಿಂದ ನಾಡಿಗೆ ಇನ್ನಷ್ಟು ಕೃತಿಗಳು ಬರಲಿ ಎಂದರು.

ಕವಿ ಗೋಕಾಕದ ಟಿ.ಸಿ. ಮೊಹರೆ, ಅಭಿನಂದ ಗ್ರಂಥ ಸಂಪಾದಕರಾದ ಡಾ|ಪಿ.ಜಿ. ಕೆಂಪಣ್ಣವರ, ಡಾ|ಗವಿಸಿದ್ಧಪ್ಪ ಪಾಟೀಲ, ನವಲಗುಂದ ತಾಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷ ವಿದ್ಯಾಧರ ಪಾಟೀಲ, ಬಿ.ಐ. ಕರ್ಕಿ, ತಾಲೂಕು ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಅಣ್ಣಪ್ಪ ಬಾಗಿ, ಲಿಂಗರಾಜ ಸರದೇಸಾಯಿ ಮಾತನಾಡಿ, ಹಂಡಗಿ ಅವರು ಅಧ್ಯಾಪಕ ವೃತ್ತಿಗೆ ಧನ್ಯತೆ ತಂದವರು. ಕಾಯಕವೇ ಕೈಲಾಸವೆಂದುಕೊಂಡು ಬಂದವರು. ಸಮಾಜಕ್ಕೆ ಜಚನಿ ಸಾಹಿತ್ಯ ಪರಿಚಯಿಸಿದವರು. ತಮ್ಮ ಶಿಷ್ಯರನ್ನು ನಿಜ ಜೀವನದಲ್ಲಿ ಎತ್ತರಕ್ಕೆ ಬೆಳೆಯಲು ಕಾರಣೀಭೂತರಾಗಿದ್ದರು. ವಿದ್ಯಾರ್ಥಿಗಳ ವ್ಯಕ್ತಿತ್ವಕ್ಕೆ ಮಾರ್ಗದರ್ಶನ ನೀಡಿ ಸ್ಫೂರ್ತಿ ನೀಡುವ ಪ್ರೇರಣಾ ಶಕ್ತಿ ಆಗಿದ್ದರು ಎಂದರು.

Advertisement

ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣಪತಿ ಗಂಗೊಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ| ಸಂಗಮೇಶ ಹಂಡಿಗಿ ಅವರು ಬದುಕಿನುದ್ದಕ್ಕೂ ಸರಳತೆ, ಸಜ್ಜನತೆ ಮೈಗೂಡಿಸಿ ವ್ಯಕ್ತಿ. ವಚನ ಸಾಹಿತ್ಯಕ್ಕೆ ಅವರ ಕೊಡುಗೆ ಅನನ್ಯ ಎಂದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಡಾ| ಸಂಗಮೇಶ ಹಂಡಿಗಿ ಸಮಾರಂಭ ಸಂತಸ ತಂದಿದೆ ಎಂದರು. ಸಂಗಮ ಸಂಪದ ಗ್ರಂಥಾಂತರಂಗ ಕುರಿತು ಶ್ವೇತಾ ಕರ್ಕಿ ಬಣಕಾರ ಮಾತನಾಡಿದರು.

ಹುಬ್ಬಳ್ಳಿ ತಾಲೂಕು ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆನಂದ ಉಪ್ಪಿನ, ಬಸವರಾಜ ಹುದ್ದಾರ, ಬಸವರಾಜ ಬಣಕಾರ ಮೊದಲಾದವರಿದ್ದರು. ಪತ್ರಕರ್ತ ಸುಶಿಲೇಂದ್ರ ಕುಂದರಗಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next