ಬದಿಯಡ್ಕ: ಇಲ್ಲಿನ ಖ್ಯಾತ ದಂತ ವೈದ್ಯರಾದ ಡಾ|ಎಸ್. ಕೃಷ್ಣಮೂರ್ತಿ ಸರ್ಪಂಗಳ ಅವರ ನಾಪತ್ತೆಗೆ ಕಾರಣರಾದ ಗೂಂಡಾಗಳ ವಿರುದ್ಧ ಕ್ರಮ ತೆಗೆದುಕೊಂಡು ಬಂಧಿಸಬೇಕು, ಡಾ| ಕೃಷ್ಣಮೂರ್ತಿ ಅವರನ್ನು ಪತ್ತೆ ಹಚ್ಚಬೇಕು ಎಂದು ಒತ್ತಾಯಿಸಿ ಮುಳ್ಳೇರಿಯ ಹವ್ಯಕ ಮಂಡಲ ಆಶ್ರಯದಲ್ಲಿ ಬದಿಯಡ್ಕ ಪೇಟೆಯಲ್ಲಿ ಬೃಹತ್ ಮೆರವಣಿಗೆ ನಡೆಸಿ ಪೊಲೀಸರಿಗೆ ಮನವಿ ಸಲ್ಲಿಸಲಾಯಿತು.
ವೈದ್ಯರನ್ನು ಪತ್ತೆಹಚ್ಚುವಂತೆ ಇಂಡ್ಯನ್ ಡೆಂಟಲ್ ಅಸೋಸಿಯೇಶನ್ ಕಾಸರಗೋಡು ಘಟಕದ ನೇತೃತ್ವದಲ್ಲಿ ಬದಿಯಡ್ಕದಲ್ಲಿ ವೈದ್ಯರ ಕ್ಲಿನಿಕ್‌ನ ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಯಿತು. ಐಡಿಎ ಜಿಲ್ಲಾ ಘಟಕದ ಅಧ್ಯಕ್ಷ ಡಾ| ವಿಕ್ರಂ, ಕಾರ್ಯದರ್ಶಿ ಡಾ|ಅಜಿತೇಶ್ ಸಹಿತ ಹಲವರು ಭಾಗವಹಿಸಿದರು.
ಮಂಗಳವಾರ ಮಧ್ಯಾಹ್ನ ನಾಪತ್ತೆಯಾದ ಡಾ| ಕೃಷ್ಣಮೂರ್ತಿ ಪತ್ತೆ ಹಚ್ಚಬೇಕೆಂದು ಆಗ್ರಹಿಸಿ, ಬದಿಯಡ್ಕ ಪೇಟೆಯಲ್ಲಿ ಮೆರವಣಿಗೆ ನಡೆಸಿ ಪೊಲೀಸ್ ಸ್ಟೇಷನ್‌ಗೆ ತೆರಳಿ ಮನವಿ ಸಲ್ಲಿಸಲಾಗಿದೆ. ಹವ್ಯಕ ಮಂಡಲ ಪ್ರತಿನಿಧಿಗಳಾದ ಹರಿಪ್ರಸಾದ ಪೆರಿಯಪ್ಪು, ಕೃಷ್ಣಮೂರ್ತಿ ಮಾಡಾವು, ಜಯದೇವ ಖಂಡಿಗೆ, ಬಾಲಸುಬ್ರಹ್ಮಣ್ಯ ಸರ್ಪಮಲೆ, ಡಾ| ವೈ.ವಿ.ಕೃಷ್ಣಮೂರ್ತಿ, ಈಶ್ವರಿ ಬೇರ್ಕಡವು, ಕುಸುಮ ಪೆರ್ಮುಖ, ಹಿಂದು ಸಂಘಟನಾ ನೇತಾರರುಗಳಾದ ರವೀಶ ತಂತ್ರಿ ಕುಂಟಾರು, ಸುಧಾಮ ಗೋಸಾಡ, ಹರೀಶ್ ನಾರಂಪಾಡಿ, ಅಶ್ವಿನಿ ಮೊಳೆಯಾರು ಮೊದಲಾದವರು ನೇತೃತ್ವ ವಹಿಸಿದರು.
ಸಮಾಜ ಕಂಟಕರು ಅವರಿಗೆ ನೀಡಿದ ಒತ್ತಡ ಹಾಗೂ ಕೊಲೆ ಬೆದರಿಕೆಯ ಹಿನ್ನೆಲೆಯಲ್ಲಿ ಡಾ| ಕೃಷ್ಣಮೂರ್ತಿ ಅವರು ನಾಪತ್ತೆಯಾಗಿದ್ದರು. ಈ ಬಗ್ಗೆ ಅವರ ಪತ್ನಿ ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು. ವೈದ್ಯರ ಮೊಬೈಲ್ ಫೋನ್ ಅವರ ಕ್ಲಿನಿಕ್‌ನಲ್ಲೇ ಇದೆ. ಅವರ ಬೈಕ್ ಕುಂಬಳೆಯಲ್ಲಿ ಪತ್ತೆಯಾಗಿದೆ.
ವೈದ್ಯರ ನಾಪತ್ತೆ ಕುರಿತು ಬದಿಯಡ್ಕ ಪೊಲೀಸರು ಕೇರಳ ಹಾಗೂ ಕರ್ನಾಟಕದ ಎಲ್ಲ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಿದ್ದಾರೆ. ಕುಂದಾಪುರದ ರೈಲು ಹಳಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಬದಿಯಡ್ಕ ಪೊಲೀಸರು ಹಾಗೂ ಸಂಬಂಧಿಕರು ಕುಂದಾಪುರಕ್ಕೆ ತೆರಳಿದ್ದಾರೆ.