Advertisement

ಡಾ. ರವೀಂದ್ರನಾಥ ಶಾನುಭಾಗ್ ಗೆ ಹೃದಯಾಘಾತ: ಚಿಕಿತ್ಸೆಗೆ ಸ್ಪಂದನೆ

12:37 PM Apr 01, 2022 | Team Udayavani |

ಉಡುಪಿ: ಜಿಲ್ಲೆಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಟಾನ ಮತ್ತು ಹಿರಿಯ ನಾಗರಿಕರ ಹಕ್ಕುಗಳ ಹೋರಾಟಗಾರ, ಡಾ. ರವೀಂದ್ರನಾಥ ಶಾನುಭಾಗ್ ಅವರಿಗೆ ಹೃದಯಾಘಾತ ಆಗಿದ್ದು, ಮಣಿಪಾಲ ಕೆಎಂಸಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Advertisement

ಗುರುವಾರ ರಾತ್ರಿ ಮನೆಯಲ್ಲಿ ಶಾನುಭಾಗ್ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಕುಟುಂಬಸ್ಥರು ಅವರನ್ನು ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜಿಗೆ ದಾಖಲು ಮಾಡಿದ್ದಾರೆ. ಆಂಜಿಯೋಪ್ಲಾಸ್ಟಿ ಮಾಡಲಾಗಿದ್ದು, ಶಾನುಭಾಗ್ ಅವರು ಚಿಕಿತ್ಸೆ ಗೆ ಸ್ಪಂದಿಸುತ್ತಿದ್ದಾರೆ. ಸ್ಟಂಟ್ ಅಳವಡಿಸಲಾಗಿದ್ದು, ತಜ್ಞ ವೈದ್ಯರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ.

ಎರಡು ಮೂರು ದಿನಗಳ ಚಿಕಿತ್ಸೆಯ ನಂತರ ಡಿಸ್ಚಾರ್ಜ್ ಮಾಡಬಹುದು ಎಂದು ಕೆಎಂಸಿ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಮಾಹಿತಿ ನೀಡಿದರು.

ಹೋರಾಟವೇ ಬದುಕು

ಇಳಿ ವಯಸ್ಸಿನಲ್ಲೂ ಸಾಮಾಜಿಕ ಕಳಕಳಿಯ ಹೋರಾಟ ನಡೆಸುತ್ತಿರುವ ಶಾನುಭಾಗ್ , 1980ರಲ್ಲಿ ಬಳಕೆದಾರರ ವೇದಿಕೆ ಆರಂಭಿಸಿ ಅನ್ಯಾಯಗಳ ವಿರುದ್ಧ ಹೋರಾಟ ಆರಂಭಿಸಿದ್ದರು. 1992ರಲ್ಲಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಟಾನ ಆರಂಭಿಸಿ ಸಾವಿರಾರು ಮಂದಿ ನೊಂದ ವರಿಗೆ ನ್ಯಾಯ ಒದಗಿಸಿ ಕೊಡುವ ಕಾರ್ಯವನ್ನು ಮಾಡಿದ್ದಾರೆ. ಮೂವತ್ತು ಸಾವಿರಕ್ಕೂ ಹೆಚ್ಚು ಪ್ರಕರಣದಲ್ಲಿ ಯಾವುದೇ ಫಲಾಪೇಕ್ಷೆ ಇಲ್ಲದೆ ಕೆಲಸ ಮಾಡಿದ್ದಾರೆ. 1980ರಿಂದ ನಾಡಿನ ಹಲವು ಪತ್ರಿಕೆಗಳಲ್ಲಿ 3600 ಅಂಕಣಗಳನ್ನು ಬರೆದಿದ್ದಾರೆ. ಡಾ. ಶಾನುಭಾಗ್ ಅಂತಾರಾಷ್ಟ್ರೀಯ ಮಟ್ಟದಲ್ಲಿ 17 ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ.

Advertisement

ಎಂಡೋಸಲ್ಫಾನ್ ವಿರುದ್ಧ ಸಮರ

ಸಾವಿರಾರು ಜನರ ಜೀವಕ್ಕೆ ಮಾರಕವಾಗಿದ್ದ ಎಂಡೋಸಲ್ಫಾನ್ ಸಮಸ್ಯೆಯ ಕುರಿತು ಆಳವಾದ ಅಧ್ಯಯನ ನಡೆಸಿದ ಅವರು ಹೋರಾಟಕ್ಕಿಳಿದರು. ಅವರ ಸುದೀರ್ಘ ಹೋರಾಟದ ಫಲವಾಗಿ 2011ರಲ್ಲಿ ಎಂಡೋಸಲ್ಫಾನ್ ದೇಶದಲ್ಲಿ ನಿಷೇಧವಾಯಿತು. ಪ್ರಶಸ್ತಿ- ಸಮ್ಮಾನಗಳು ಹುಡುಕಿಕೊಂಡು ಬಂದರೂ ಯಾವುದನ್ನೂ ಅವರು ಸ್ವೀಕರಿಸಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next