ಕಳೆದ ವರ್ಷ ಸಂದರ್ಶನವೊಂದರಲ್ಲಿ “ಒಳ್ಳೇ ಸಿನಿಮಾ’ ಎಂಬ ಚಿತ್ರವನ್ನು ಮಾಡುತ್ತಿರುವುದಾಗಿ ಹಿರಿಯ ಗೀತರಚನೆಕಾರ ಮತ್ತು ನಿರ್ದೇಶಕರಾದ ಸಿ.ವಿ. ಶಿವಶಂಕರ್ ಹೇಳಿಕೊಂಡಿದ್ದರು. ಅವರು “ಒಳ್ಳೇ ಸಿನಿಮಾ’ಗಾಗಿ ಕಾಯುತ್ತಿದ್ದ ಪ್ರೇಕ್ಷಕರಿಗೆ, ಅವರು ಇನ್ನೊಂದು ಸರ್‌ಪ್ರೈಸ್ ಕೊಟ್ಟಿದ್ದಾರೆ. ಆ ಚಿತ್ರವನ್ನು ಪಕ್ಕಕ್ಕಿಟ್ಟು, ಸದ್ದಿಲ್ಲದೆ “ಅಕಳಂಕ’ ಎಂಬ ಚಿತ್ರವನ್ನು ಮಾಡಿ ಮುಗಿಸಿದ್ದಾರೆ.
“ಕೆಂಪಿರ್ವೆ’ ಸಿನಿಮಾದಲ್ಲಿ ಮಿಂಚಿದ್ದ ಅವರ ಮಗ ಲಕ್ಷ್ಮಣ್ ಶಿವಶಂಕರ್ ಈ ಚಿತ್ರದಲ್ಲೊಂದು ಪ್ರಮುಖ ಪಾತ್ರ ಮಾಡಿದರೆ, ಮಿಕ್ಕಂತೆ ಗಿರಿಜಾ ಲೋಕೇಶ್, ದೊಡ್ಡಣ್ಣ, ದತ್ತಣ್ಣ, ಆಂಜನಪ್ಪ, ಗಣೇಶ್ ರಾವ್ ಕೇಸರರ್, ಜೆಮ್ ಶಿವು ಮುಂತಾದವರು ನಟಿಸಿದ್ದಾರೆ. ಇತ್ತೀಚೆಗೆ ಚಿತ್ರದ ಹಾಡುಗಳು ಕೂಡಾ ಬಿಡುಗಡೆಯಾಗಿದೆ. “ಅಕಳಂಕ’ ಚಿತ್ರದ ಕಥೆಯು ಡಾ. ರಾಜಕುಮಾರ್ ಅವರು ಮೆಚ್ಚಿದ್ದ ಕಥೆಯಾಗಿತ್ತು ಎನ್ನುತ್ತಾರೆ ಶಿವಶಂಕರ್.
ಅದೊಮ್ಮೆ ಡಾ. ರಾಜಕುಮಾರ್, ರಜನಿಕಾಂತ್, ಶಿವರಾಮಣ್ಣ ಮುಂತಾದವರೆಲ್ಲಾ ಶಬರಿಮಲೆಗೆ ಹೋಗಿದ್ದರಂತೆ. ಅಲ್ಲಿ ನಂಬಿಯಾರ್ ಚೌಲಿಯಲ್ಲಿ ಉಳಿದುಕೊಂಡಿದ್ದ ಸಂದರ್ಭದಲ್ಲಿ ಇವರನ್ನು ನೋಡುವುದಕ್ಕೆ ಸುಮಾರು ಎರಡು ಸಾವಿರ ಜನ ಸೇರಿದ್ದರಂತೆ. ಆ ಸಂದರ್ಭದಲ್ಲಿ, ಬೇರೆ ದಾರಿಯಿಂದ ರಾಜಕುಮಾರ್ ಅವರನ್ನು ದರ್ಶನಕ್ಕೆ ಕರೆದುಕೊಂಡು ಹೋದೆ. ನಂತರ ದರ್ಶನ ಮಾಡಿ ಮತ್ತೆ ಚೌಲಿಗೆ ಹೋಗುವ ಬದಲು, ಇಬ್ಬರೇ ಕಾಂತಮಲೈ ಬೆಟ್ಟಕ್ಕೆ ಹೋದೆವು.
ಆ ಸಂದರ್ಭದಲ್ಲಿ ಡಾ. ರಾಜಕುಮಾರ್ ಅವರು ತಮಗೆ ಆಧ್ಯಾತ್ಮದ ಹಸಿವಿದೆ ಎಂದರು. ಆಗ ಅವರಿಗೆ ಒಂದು ಕಥೆ ಹೇಳಿದೆ. ಧರ್ಮರಾಯ ವೈಕುಂಠಕ್ಕೆ ಹೋಗುವಾಗಿನ ಕಥೆ ಹೇಳಿದೆ. ಆ ಕಥೆ ಕೇಳಿ ಡಾ. ರಾಜಕುಮಾರ್ ಅವರು ಬಹಳ ಖುಷಿಪಟ್ಟರು. ಆ ಕಥೆ ಚಿತ್ರವಾಗೋದಕ್ಕೆ ಇಷ್ಟು ವರ್ಷವಾಯಿತು’ ಎನ್ನುತ್ತಾರೆ ಸಿ.ವಿ. ಶಿವಶಂಕರ್. ಈ ಚಿತ್ರದ ವಿಶೇವೆಂದರೆ, ಗಿರಿಜಾ ಲೋಕೇಶ್ ನಟಿಸಿರುವುದು. ಗಿರಿಜಾ ಅವರ ತಂದೆ ಮತ್ತು ಶಿವಶಂಕರ್ ಸ್ನೇಹಿತರು.
ಹಾಗಾಗಿ ಗಿರಿಜಾ ಅವರು ಚಿಕ್ಕವರಿದ್ದಾಗಿನಿಂದ ಶಿವಶಂಕರ್‌ರನ್ನು ಬಲ್ಲಿರಂತೆ. ಅಷ್ಟೇ ಅಲ್ಲ, ಗಿರಿಜಾಗೆ ಶಿವಶಂಕರ್ ಅವರು ನೃತ್ಯವನ್ನೂ ಹೇಳಿಕೊಡುತ್ತಿದ್ದರಂತೆ. “ಆಗ ಅವರು ನನ್ನ ಕರೆದುಕೊಂಡು ಹೋಗಿ, ಈ ಹುಡುಗಿ ಚೆನ್ನಾಗಿ ನಟಿಸುತ್ತಾಳೆ, ಅವಕಾಶ ಕೊಡಿ ಎಂದು ಕೇಳಿದ್ದರು. ಡಾ ರಾಜಕುಮಾರ್ ಅವರ “ಸತಿ ನರ್ಮದಾ’ ಎಂಬ ಚಿತ್ರದ ಚಿತ್ರೀಕರಣಕ್ಕೂ ಕರೆದುಕೊಂಡು ಹೋಗಿದ್ದರು. ಆದರೆ, ನಾನು ಆಯ್ಕೆಯಾಗಲಿಲ್ಲ. ನಿನಗೆ ನಟನೆ ಆಗಬಿರಲ್ಲ, ಮದುವೆ ಆಗು ಎಂದರು.
ಕೊನೆಗೆ ಮತ್ತೆ ನನಗೆ ನಟಿಯಾಗುವ ಅವಕಾಶ ಸಿಕ್ಕಿತು. ಅವರು ಹೇಳಿಕೊಟ್ಟ ನೃತ್ಯವೇ ಚಿತ್ರರಂಗಕ್ಕೆ ಬರುವುದಕ್ಕೆ ದಾರಿ ಆಯ್ತು. ಚಿತ್ರರಂಗಕ್ಕೆ ಬಂದು ಇಷ್ಟು ವರ್ಷಗಳಾದರೂ ಅವರ ನಿರ್ದೇಶನದ ಚಿತ್ರದಲ್ಲಿ ನಟಿಸುವುದಕ್ಕೆ ಸಾಧ್ಯವಾಗಿರಲಿಲ್ಲ. ಈಗ ಅವರ ಚಿತ್ರದಲ್ಲಿ ಕೊನೆಗೂ ನಟಿಸುವ ಅವಕಾಶ ಸಿಕ್ಕಿತು. ಇದೊಂದು ಸಾಮಾಜಿಕ ಕಳಕಳಿ ಇರುವ ಚಿತ್ರ. ಈ ಚಿತ್ರಕ್ಕೆ ನಾನೇ ನಾಯಕಿ. ಏಕೆಂದರೆ, ಈ ಚಿತ್ರದಲ್ಲಿ ನನಗೆ ಮೂರು ಹಾಡು ಇದೆ’ ಎನ್ನುತ್ತಾರೆ ಗಿರಿಜಾ ಲೋಕೇಶ್. “ಅಕಳಂಕ’ ಚಿತ್ರಕ್ಕೆ ಶಿವಸತ್ಯ ಅವರು ಸಂಗೀತ ಸಂಯೋಜಿಸಿದರೆ, ವೆಂಕಟ್ ಅವರ ಛಾಯಾಗ್ರಹಣವಿದೆ.