ಮೈಸೂರು: ನಗರದ ವಿವಿಧ ಸಂಘಟನೆಗಳಿಂದ ಕನ್ನಡ ಚಿತ್ರರಂಗದ ಮೇರುನಟ ಡಾ.ರಾಜ್‌ಕುಮಾರ್ ಅವರ 12ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು.
ನಗರದ ಮಯೂರ ಕನ್ನಡ ಗೆಳೆಯರ ಬಳಗದಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶಾಸಕ ಎಂ.ಕೆ.ಸೋಮಶೇಖರ್ ಹಾಗೂ ಇನ್ನಿತರರು ಚಾಮರಾಜ ಜೋಡಿರಸ್ತೆಯಲ್ಲಿರುವ ಡಾ.ರಾಜಕುಮಾರ್ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ವರನಟ ಡಾ.ರಾಜ್‌ಕುಮಾರ್ ಅವರನ್ನು ಸ್ಮರಿಸಿದರು. ಈ ವೇಳೆ ಮಾತನಾಡಿದ ಶಾಸಕ ಎಂಕೆ.ಸೋಮಶೇಖರ್, ವರನಟ ಡಾ.ರಾಜಕುಮಾರ್ ಅವರು ಕನ್ನಡ ಚಿತ್ರರಂಗದ ಧ್ರುವತಾರೆಯಾಗಿದ್ದು, ಕನ್ನಡತನ, ಕನ್ನಡ ಬಾಷೆಯನ್ನು ವಿಶ್ವವಿಖ್ಯಾತಗೊಳಿಸಿದವರು.
ಪ್ರತಿಯೊಬ್ಬ ಕಲಾವಿದನಿಗೂ ಸ್ಫೂರ್ತಿಯಾಗಿ, ಪ್ರತಿಯೊಬ್ಬ ಕನ್ನಡಿಗನಲ್ಲೂ ಕನ್ನಡತನವನ್ನು ಜೀವಂತವಾಗಿಸಿದ ಕರುನಾಡ ಕಣ್ಮಣಿ ಎಂದು ಬಣ್ಣಿಸಿದರು. ಈ ಸಂದರ್ಭದಲ್ಲಿ ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ, ಮಯೂರ ಕನ್ನಡ ಗೆಳೆಯರ ಬಳಗದ ಅಧ್ಯಕ್ಷ ಶ್ರೀನಾಥ್‌ಬಾಬು, ರಾಘವೇಂದ್ರ, ಸೋಮಶೇಖರ್, ರಾಜಗೋಪಾಲ್, ಶೇಖರ್, ಕಿಶೋರ್ ಕುಮಾರ್ ಇದ್ದರು.
ಸಂಸದರಿಂದ ನಮನ: ವರನಟ ಡಾ.ರಾಜ್‌ಕುಮಾರ್ ಅವರ ಪುಣ್ಯತಿಥಿಯ ಅಂಗವಾಗಿ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಸಮೀಪವಿರುವ ಡಾ.ರಾಜ್‌ಕುಮಾರ್ ಪುತ್ಥಳಿಗೆ ಸಂಸದ ಪ್ರತಾಪ್‌ಸಿಂಹ ಹಾಗೂ ಬಿಜೆಪಿ ಮುಖಂಡರು ಮಾಲಾರ್ಪಣೆ ಮಾಡುವ ಮೂಲಕ ನಮನ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಕನ್ನಡನಾಡು, ನುಡಿಗಾಗಿ ಡಾ.ರಾಜ್ ಕುಮಾರ್ ಅವರು ನಡೆಸಿರುವ ಹೋರಾಟಗಳನ್ನು ಸ್ಮರಿಸಲಾಯಿತು. ಅಲ್ಲದೆ ತಮಿಳುನಾಡಿನ ಜನರು ಕಾವೇರಿ ನಿರ್ವಹಣಾ ಮಂಡಳಿ ರಚನೆಗಾಗಿ ನಡೆಸುತ್ತಿರುವ ಪ್ರತಿಭಟನೆಯನ್ನು ಹಾಗೂ ಸಾಮಾಜಿಕ ಜಾಲತಾಣದಲ್ಲಿ ನಡೆಸುತ್ತಿರುವ ಮೋದಿ ಗೋ ಬ್ಯಾಕ್ ಎಂಬ ಅಭಿಯಾನವನ್ನು ಖಂಡಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಸಂದೇಶ್‌ಸ್ವಾಮಿ, ಯಶಸ್ವಿನಿ ಸೋಮಶೇಖರ್, ಶ್ರೀವತ್ಸ, ಜಯಪ್ರಕಾಶ್, ಡಾ.ಅನಿಲ್ ಥಾಮಸ್, ಮಹೇಶ್‌ರಾಜೇ ಅರಸ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.