Advertisement

ರಾಜ್‌ಕುಮಾರ್‌ ಬಗ್ಗೆ ಆಸಕ್ತಿ ಕಾರಕ ಐಟಂಗಳು..

11:40 AM Apr 21, 2018 | |

“ನಡೀರಿ ನಿಮ್ಮ ಬೈಕ್‌ನಲ್ಲೇ ಹೋಗೋಣ…’

Advertisement

ಸಂಯುಕ್ತ ಚಿತ್ರದಲ್ಲಿ ಶಿವಣ್ಣ, ಗುರುದತ್‌, ಬಾಲರಾಜ್‌ ಈ ಮೂರು ಜನರೂ ಬೈಕ್‌ ರೈಡ್‌ ಮಾಡ್ತಾರಲ್ಲ? ಅದರಲ್ಲಿದ್ದ ಒಂದು ಈ ಬೈಕ್‌ ಇದು. ಆ ಕಾಲಕ್ಕೆ ಒಂಭತ್ತು ಸಾವಿರ ಕೊಟ್ಟು ಸಿನಿಮಾಕ್ಕಂತಲೇ ಮೂರು ಬೈಕ್‌ ಕೊಂಡಿದ್ದರು. ಶೂಟಿಂಗ್‌  ಮುಗಿದ ಮೇಲೆ “ಚನ್ನ, ನೀವೊಂದು ಗಾಡಿ ಇಟ್ಕೊಳ್ಳಿà ‘ ಅಂತ ಈ ಬೈಕ್‌ನ ನನಗೆ ಕೊಟ್ಟರು. ಯಮಹ ಗಾಡಿ ಅದು.  ರಾಜಕುಮಾರ್‌ ಅವರು ಎಷ್ಟೋ ಸಲ ನನ್ನ ಗಾಡಿ ಮೇಲೆ ಕೂತಿದ್ದು ಇದೆ.
 
ರಾಜ್‌ಕುಮಾರ್‌ ಅವರ ಮನೆಯ ಹಿಂದಿನ ಬೀದಿಯಲ್ಲಿ ಶಿವಣ್ಣ ಇದ್ದರು.  ಅವರ ಮನೆಗೆ ಅಥವಾ ವರದಣ್ಣನ ಮನೆಗೆ ಹೋಗಬೇಕಾದರೆ “ರೀ ಚನ್ನ, ನಡೀರಿ ನಿಮ್ಮ ಗಾಡೀಲೇ ಹೋಗೋಣ’ ಅಂತ ತಲೆಗೆ ಟವೆಲ್‌ ಸುತ್ತಿಕೊಂಡು ಮೆಲ್ಲಗೆ ಹತ್ತಿ ಬಿಡೋರು. ನಾನು ಅವರನ್ನು ಹಿಂದೆ ಕೂಡ್ರೀಸಿಕೊಂಡು ಹೋಗುತ್ತಿದ್ದೆ.  

ಹೀಗೆ ಲೆಕ್ಕವಿಲ್ಲದಷ್ಟು ಸಲ ನನ್ನ ಬೈಕ್‌ನಲ್ಲಿ ಓಡಾಡಿದ್ದಾರೆ.  ಅಣ್ಣಾವ್ರ ನೆನಪಿಗಾಗಿ, ಸೆಂಟಿಮೆಂಟ್‌ಗಾಗಿ ಈ ಬೈಕ್‌ ಇಟ್ಕೊಂಡಿದ್ದೀನಿ. ಅದರಲ್ಲೇ ಓಡಾಡ್ತೀನಿ. 

ಇಂಥದೇ ಇನ್ನೊಂದು ನೆನಪು ನನ್ನ ಜೇಬಲ್ಲಿದೆ. ಅದೇನೆಂದರೆ, ಒಂದು ಸಲ ಅಣ್ಣ, ನಿಮ್ಮ ಜೊತೆ ಫೋಟೋ ತೆಗೆಸಿಕೊಂಡಿದ್ದೀನಿ. ಹಾಗೇನೇ ಸೈನ್‌ ಹಾಕ್ಕೊಡಿ. ನೆನಪಿಗಿರಲಿ ಅಂತ ಕೇಳಿದೆ. ತಕ್ಷಣಕ್ಕೆ ಪೇಪರ್‌, ಪುಸ್ತಕ ಸಿಗಲಿಲ್ಲ. ಜೇಬಲ್ಲಿ 500 ರೂ. ನೋಟಿತ್ತು. ಕೊಟ್ಟೆ. ಅದರ ಮೇಲೆ ರಾಜಕುಮಾರ್‌ ಅಂತ ಸಹಿ ಮಾಡಿಕೊಟ್ಟರು. ಆವತ್ತಿಂದ ಇವತ್ತಿನ ತನಕ ಆ ನೋಟನ್ನು ದೇವರ ಪಟದಂತೆ ಜೇಬಲ್ಲೇ ಇಟ್ಟುಕೊಂಡಿದ್ದೀನಿ.  ಏನು ಮರೆತು ಹೋದರೂ ನೋಟನ್ನು ಮಾತ್ರ ಮರೆಯೋಲ್ಲ.  

 ಚನ್ನ, ರಾಜಕುಮಾರ್‌ರ ಆಪ್ತ.

Advertisement

******

 ಆ ಬ್ಯಾನರ್‌ ತೆಗೀತೀರಾ ಅಂದಾಗಾ…
“ಭಾಗ್ಯದ ಬಾಗಿಲು’ ಚಿತ್ರ ನೂರನೇ ದಿನದ ಸಂಭ್ರಮಕ್ಕಾಗಿ ನಮ್ಮೂರು ಚಾಮರಾಜನಗರಕ್ಕೆ ಅಣ್ಣಾವ್ರು  ಬಂದಿದ್ದರು. ಆಗ ನಾನು ಮೈಸೂರಲ್ಲಿ ಓದುತ್ತಿದ್ದೆ. ಇವರು ಬರ್ತಾರೆ ಅಂತ ಗೊತ್ತಾಗಿದ್ದೇ, ಸ್ಕೂಲ್‌ ಬಿಟ್ಟು ಓಡಿ ಬಂದು ಬಿಟ್ಟಿದ್ದೆ. ನಮ್ಮ ತಂದೆಗೂ ರಾಜುRಮಾರರಿಗೂ ಖಾಸಾ ದೋಸ್ತಿ.  ಅವರ ಜಮೀನನ್ನು ನಮ್ಮ ತಂದೆ ನೋಡಿಕೊಳ್ಳೋರು. ಹಾಗಾಗಿ, ಸ್ವಲ್ಪ ಬೇಗ ರಾಜುRಮಾರರನ್ನು ಎಟುಕಿಸಿಕೊಳ್ಳಬಹುದಿತ್ತು. ಅವರು ಗಾಜನೂರಿಗೆ ಬಂದರೆ ಸಾಕು, ಅಪ್ಪನ ಜೊತೆ ನಾನೂ  ಹೊರಟು ಬಿಡುತ್ತಿದ್ದೆ.  

ಆವತ್ತು   ರಾಜ್‌ಕುಮಾರ್‌ರಿಗೆ ಸಾರ್ವಜನಿಕವಾಗಿ ಸನ್ಮಾನ ಮಾಡಲು ತೀರ್ಮಾನ ಮಾಡಿ ಜ್ಯೂನಿಯರ್‌ ಕಾಲೇಜು ಮೈದಾನದಲ್ಲಿ ದೊಡ್ಡ ಸ್ಟೇಜ್‌ ನಿರ್ಮಿಸಿದ್ದರು. ಅದಕ್ಕೂ ಮೊದಲು ತೆರೆದ ಲಾರಿಯ ಮೇಲೆ ಗುಬ್ಬಿವೀರಣ್ಣ, ಜಯಮ್ಮನವರು,  ರಾಜ್‌ಕುಮಾರ್‌ ಎಲ್ಲರನ್ನೂ ಮೆರವಣಿಗೆ ಮಾಡಿದರು. ಜನವೋ ಜನ.  ರಾಜುRಮಾರರ ಕಾಲ ಕೆಳಗೆ ನಾನು ಕುಳಿತಿದ್ದೆ. ಆಗಲೂ ಪಂಚೆ, ಬಿಳಿ ಷರಟು ಧರಿಸಿ ನಿಂತಿದ್ದ ಅವರು ಎರಡೂ ಕೈಗಳನ್ನು ಮುಗಿದು ನಮಸ್ಕಾರ ಮಾಡುತ್ತಿದ್ದರು. ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯುತ್ತಿರಲು, ಅಂಗಡಿ ಬೀದಿಗೆ ಬಂದಾಗ ಒಂದು ಬ್ಯಾನರ್‌ ಕಂಡಿತು. ಅದರಲ್ಲಿ “ಶತದಿನೋತ್ಸವ ಸಮಾರಂಭಕ್ಕೆ ಆಗಮಿಸುತ್ತಿರುವ   ರಾಜ್‌ಕುಮಾರ್‌ರಿಗೆ ಸುಸ್ವಾಗತ. ಇಂತಿ, ಆರ್ಯ ಈಡಿಗರ ಸಂಘ ‘ ಅಂತ ವಾಟರ್‌ ಕಲರ್‌ನಲ್ಲಿ ಬರೆದು ನೇತು ಹಾಕಿದ್ದರು. 

ಅದನ್ನು ನೋಡಿದ ಕೂಡಲೇ – ಪಕ್ಕದಲ್ಲಿದ್ದವರಿಗೆ ಅಪ್ಪಾಜಿ, “ಯಾರು ಆ ಬ್ಯಾನರ್‌ ಹಾಕಿಸಿದ್ದು’ ಅಂತ ಪಿಸುಗುಟ್ಟಿದರು. ಇದನ್ನು ಕೇಳಿದ್ದೆ ತಡ,  ಒಂದಷ್ಟು ಜನ,   ರಾಜ್‌ಕುಮಾರ್‌ರಿಗೆ ಬಹಳ ಖುಷಿಯಾಗಿರಬೇಕು ಅಂತ ಭ್ರಮಿಸಿ “ನಾನು ಅಣ್ಣಾ, ನಾನು ಅಣ್ಣಾ ‘ ಅನ್ನುತ್ತಾ ಮುಂದೆ ಬಂದರು. 

 ರಾಜುRಮಾರರು ಬಹಳ ವಿನಯವಾಗಿ- ತಲೆ ಗೀರಿಕೊಳ್ಳುತ್ತಾ… “ನೋಡಿ, ಕಲೆಯಾಗಲಿ, ಕಲಾವಿದನಾಗಲಿ ಸಾರ್ವಜನಿಕ ಸ್ವತ್ತು. ಹೀಗಿದ್ದಾಗ ಈ ರಾಜುRಮಾರ ಎಲ್ಲರ ಸ್ವತ್ತು. ದಯವಿಟ್ಟು ಆ ಬ್ಯಾನರ್‌ ತೆಗೆದು ಬಿಡಿಯಪ್ಪಾ’ ಅಂದರು ವಿನಯವಾಗಿ. ಈ ಮಾತು ಕೇಳಿ ನಾನು ನಾನು ಅಂತ ಬಂದಿದ್ದವರೆಲ್ಲಾ ತಬ್ಬಿಬ್ಟಾದರು. ಕೊನೆಗೆ ಬ್ಯಾನರ್‌ ತೆಗೆದರು. ಮೆರವಣಿಗೆ ಮುಂದವರಿಯಿತು.  ಅವರ ಕಾಲ ಬುಡದಲ್ಲೇ ಕೂತು ಎಲ್ಲವನ್ನೂ ನೋಡುತಲಿದ್ದ ನನಗೆ ಆಗ ಅಣ್ಣಾವ್ರು ಏಕೆ ಹೀಗೆ ಹೇಳಿದರು ಅಂತ ತಿಳಿಯಲಿಲ್ಲ. ಆಮೇಲೆ ಅವರ ಸಜ್ಜನಿಕೆ, ವಿಶಾಲ ಮನೋಭಾವ ಅರ್ಥವಾಯಿತು.  

 ಹೇಳಿ, ಇಂಥ ಮನೋಭಾವ ಈಗ ಯಾರಿಗಿದೆ?

 ಜಯಸಿಂಹ ಅಶ್ವತ್ಥನಾರಾಯಣ,   ರಾಜ್‌ಕುಮಾರ್‌ರ ಆಪ್ತರು

******

 “ಎಲ್ಲೆಲ್ಲೂ ನೀನೇ, ಎಲ್ಲೆಲ್ಲೂ ನೀನೇ’ 

ನಾವು ಬಡತನದಿಂದ ಬಂದಿದ್ದು. ನಮ್ಮ ತಂದೆ ವೆಂಕಟೇಶ್‌ ಅಂತ. ಅವರು ಫೋಟೋಗ್ರಾಫ‌ರ್‌, ಆ್ಯಕ್ಟರ್‌ ಆಗಿದ್ದವರು. ಎಲ್ಲವೂ ಆಗಿದ್ದು ಅಣ್ಣಾವ್ರಿಂದಲೇ. ಒಂದು ಸಲ, ನಮ್ಮ ಅಣ್ಣನ ಮದುವೆ ನಿಗಧಿ ಆಗಿತ್ತು. ಈ ವಿಷಯವನ್ನು ಹೇಳ್ಳೋಕೆ ಅಂತ ನಮ್ಮ ತಂದೆ ಅಪ್ಪಾಜಿ (ರಾಜ್‌ಕುಮಾರ್‌) ಮನೆಗೆ ಹೋಗಿದ್ದರು. ಆಗ ಅಪ್ಪಾಜಿ, “ಮದುವೆ ಎಲ್ಲಿ ಮಾಡ್ತಿರಿ’ ಅಂತ ಕೇಳಿದ್ದಾರೆ. ನಮ್ಮ ತಂದೆ “ಈಗ, ಮದುವೆ ಫಿಕ್ಸ್‌ ಆಗಿದೆ. ಎಲ್ಲಿ ಮಾಡಬೇಕು ಅಂತ ತೀರ್ಮಾನ ಮಾಡಿಲ್ಲ.  ನಾವು ಎಲ್ಲಿ ಮಾಡಿದರೂ ದಯಮಾಡಿ ನೀವು ಬರಲೇಬೇಕು’ ಅಂದಿದ್ದಾರೆ.  

ಅಪ್ಪಾಜಿ, ಸ್ವಲ್ಪ ಹೊತ್ತು ನಮ್ಮ ಸ್ಥಿತಿಗತಿಯನ್ನೆಲ್ಲಾ ಯೋಚನೆ ಮಾಡಿ -“ವೆಂಕಟೇಶ್‌, ಒಂದು ಕೆಲಸ ಮಾಡಿ, ನೀವು ಧರ್ಮಸ್ಥಳದಲ್ಲಿ ಮದುವೆ ಮಾಡಿ. ನಾವೆಲ್ಲಾ “ಶ್ರಾವಣ ಬಂತು’ ಸಿನಿಮಾ ಶೂಟಿಂಗ್‌ನಲ್ಲಿ ಅಲ್ಲೇ ಇರ್ತೀವಿ.  ಎಲ್ಲರೂ ಬರ್ತೀವಿ. ಕಡಿಮೆ ಖರ್ಚಾಗುತ್ತದೆ. ನಾನು ಅಲ್ಲಿ ಎಲ್ಲಾ ವ್ಯವಸ್ಥೆ ಮಾಡಿಸ್ತೀನಿ’ ಅಂದರು. ನಮ್ಮ ತಂದೆ ಚಾಚೂ ತಪ್ಪದೇ ಅಪ್ಪಾಜಿ ಮಾತನ್ನು ಪಾಲಿಸಿ, ಧರ್ಮಸ್ಥಳದಲ್ಲೇ ನಮ್ಮ ಅಣ್ಣನ ಮದುವೆ ಮಾಡಿದರು. “ಮಂಜು ನನ್ನ ಮಗ ಇದ್ದಾಗೆ, ಅವನೂ ಒಂದು ಸೀನ್‌ನಲ್ಲಿ ಬರೋ ಹಾಗೇ ಮಾಡ್ರೀ’ ಅಂತ ಹೇಳಿ ಹೊಸಬಾಳಿನ ಹೊಸಿಲಲ್ಲಿ ನಿಂತಿರುವ… ಹಾಡಲ್ಲಿ ನಮ್ಮ ಅಣ್ಣನ ಮದುವೆಯ ದೃಶ್ಯವನ್ನು ಸೇರಿಸಿಕೊಂಡರು. ನಮ್ಮ ಬಡತನ ಕರಗಿಸುವುಲ್ಲಿ ಅವರ ಪಾತ್ರ ದೊಡ್ಡದು. 
ನನ್ನ ನೋಡಿದಾಗೆಲ್ಲಾ ರಾಜೂ… “ಎಲ್ಲೆಲ್ಲೂ ನೀನೇ, ಎಲ್ಲೆಲ್ಲೂ ನೀನೇ’ ಅಂತ ತಮಾಷೆ ಮಾಡುತ್ತಿದ್ದರು.  

ರಾಜು, ಸ್ಟಿಲ್‌ ಫೋಟೋಗ್ರಾಫ‌ರ್‌

Advertisement

Udayavani is now on Telegram. Click here to join our channel and stay updated with the latest news.

Next