ಮಂಗಳೂರು: ನಗರದ ಬೊಂದೇಲ್‌ನಲ್ಲಿ ಇರುವ ಬಾಲಕರ ಬಾಲ ಮಂದಿರದಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಸೇರಿದ 6ರಿಂದ 17 ವರ್ಷದೊಳಗಿನ 13 ಅನಾಥ ಮಕ್ಕಳಿದ್ದು, ಅವರನ್ನು ದ.ಕ. ಜಿಲ್ಲಾಧಿಕಾರಿ ಡಾ|ರಾಜೇಂದ್ರ ಕೆ.ವಿ. ಅವರು ಪಿಲಿಕುಳ ನಿಸರ್ಗಧಾಮಕ್ಕೆ ಪ್ರವಾಸ ಕರೆದೊಯ್ದಿದ್ದರು.
ಈ ಮಕ್ಕಳಿಗೆ ಪೋಷಕರಿಲ್ಲದ ನೋವು ಕಾಡಬಾರದೆಂದು ಮಂಗಳವಾರ ಪಿಲಿಕುಳ ನಿಸರ್ಗಧಾಮಕ್ಕೆ ಪ್ರವಾಸ ಕರೆದೊಯ್ಯಲಾಗಿತ್ತು. ಜಿಲ್ಲಾಧಿಕಾರಿಯವರೇ ಈ ಮಕ್ಕಳ ವಾಹನ, ಊಟ-ಉಪಾಹಾರ ವ್ಯವಸ್ಥೆ ಕಲ್ಪಿಸಿದ್ದರು.
ಸಂಜೆ ಸ್ವತಃ ಪಿಲಿಕುಳಕ್ಕೆ ಆಗಮಿಸಿ ಮಕ್ಕಳೊಂದಿಗೆ ಕಾಲಕಳೆದರು. ಪಿಲಿಕುಳ ನಿಸರ್ಗಧಾಮದ ಆಯುಕ್ತ ವೆಂಕಟೇಶ್, ನಿರ್ದೇಶಕರು, ಕಾರ್ಯನಿರ್ವಹಣಾಧಿಕಾರಿ ಮತ್ತು ಸಿಬಂದಿ ಮಕ್ಕಳಿಗೆ ಅಚ್ಚುಕಟ್ಟಾದ ವ್ಯವಸ್ಥೆ ಕಲ್ಪಿಸಿದ್ದರು.
ಮಹಿಳಾ ಮತ್ತು ಮಕ್ಕಳ ಸಂರಕ್ಷಣಾಧಿಕಾರಿ ಯಮುನಾ, ಮಕ್ಕಳ ರಕ್ಷಣ ವಿಭಾಗದ ಸಿಬಂದಿ ಸಂಧ್ಯಾ, ಸೌಭಾಗ್ಯಾ, ಪ್ರತಿಮಾ, ದೀಕ್ಷಾ, ಅಧೀಕ್ಷಕ ಶ್ರೀಧರ್, ರಕ್ಷಕ ತಾರಾನಾಥ್, ಸ್ವತ್ಛತ ಸಿಬಂದಿ ಲವೀನಾ ಹಾಗೂ ಬಾಲ ಮಂದಿರದ ಸಿಬಂದಿ ಉಪಸ್ಥಿತರಿದ್ದರು.