ಮೈಸೂರು: ವಿದ್ಯಾರ್ಥಿಗಳು ಕಾಲೇಜಿನಲ್ಲಿ ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಸಮಯ ಕೊಡಬೇಕು ಎಂದು ಮಹಾರಾಜ ಕಾಲೇಜು ಪ್ರಾಂಶುಪಾಲ ಪ್ರೊ. ರಾಮಸ್ವಾಮಿ ಸಿ. ಸಲಹೆ ನೀಡಿದರು. ಮಹಾರಾಜ ಕಾಲೇಜಿನ ಪಠ್ಯೇತರ ಚಟುವಟಿಕೆ ಸಮಿತಿ ವತಿಯಿಂದ ಕಾಲೇಜು ಶತಮಾನೋತ್ಸವ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ, ಡಾ.ರಾಜ್‌ಕುಮಾರ್ ಸ್ಮರಣಾರ್ಥ ರಾಜ್ ಚಿತ್ರಗೀತೆಗಳ ಅಂತರ ಕಾಲೇಜು ಗಾಯನ ಸ್ಪರ್ಧೆಯಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಸಮಯ ಕೊಡಬೇಕು. ಅವರಲ್ಲಿನ ಕಲೆಯನ್ನು ಹೊರಹಾಕಲು ಇಂತಹ ವೇದಿಕೆ ಸೃಷ್ಟಿಯಾಗಬೇಕು. ವೇದಿಕೆಯಲ್ಲಿ ಪ್ರಶಸ್ತಿಗಾಗಿ ಹಾಡದೇ ತಮ್ಮ ಆತ್ಮತೃಪ್ತಿಗಾಗಿ ಸ್ಪರ್ಧಿಗಳು ಹಾಡಿದರೆ ಅವರಲ್ಲಿನ ಕಲೆ ವೃದ್ಧಿಗೊಳ್ಳುತ್ತದೆ ಎಂದು ತಿಳಿಸಿದರು.
ಕಾಲೇಜಿಗೆ ದತ್ತಿ: ವರನಟ ರಾಜ್‌ಕುಮಾರ್ ಯಾವುದೇ ಸಂಗೀತ ಕಲಿಯದೇ ಗಾಯನದಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದರು. ಇಂದಿನ ಯುವ ಗಾಯಕರಿಗೆ ಡಾ.ರಾಜ್ ಗಾಯನ ಮಾದರಿಯಾಗಬೇಕು. ಪ್ರತಿವರ್ಷ ರಾಜ್ ಕುಟುಂಬದ ಸದಸ್ಯರು ಮಹಾರಾಜ ಕಾಲೇಜಿಗೆ ದತ್ತಿ ನೀಡುತ್ತಾ ಬಂದಿದ್ದಾರೆ. ಅವರ ದತ್ತಿ ನಿಧಿಯಿಂದ ಇಂತಹ ಸಾಂಸ್ಕೃತಿಕ ಚಟುವಟಿಕೆಗಳಿಗೆ ಬಳಸಿಕೊಂಡು, ವಿದ್ಯಾರ್ಥಿಗಳ ಕಲೆಯನ್ನು ಹೊರ ತರಲು ವೇದಿಕೆ ಕಲ್ಪಿಸುತ್ತೇವೆ. ಇಂದು ಹಲವಾರು ಕಾಲೇಜುಗಳಿಂದ ಈ ಸ್ಪರ್ಧೆಯಲ್ಲಿ ಭಾಗವಹಿಸಲು ವಿದ್ಯಾರ್ಥಿಗಳು ಬಂದಿದ್ದು, ಅವರ ಪ್ರತಿಭೆಗೆ ರಾಜ್ ಕುಟುಂಬ ಸಹಕಾರವಿದೆ ಎಂದು ಸ್ಮರಿಸಿದರು.
ಅವಕಾಶ ಬಳಸಿಕೊಳ್ಳಿ: ಯವ ಗಾಯಕಿ ಪ್ರಿಯದರ್ಶಿನಿ ಮಾತನಾಡಿ, ರಾಜ್‌ಕುಮಾರ್ ಎಂದರೆ ಶಕ್ತಿ. ಅವರ ಹೆಸರಿನ ಈ ಕಾರ್ಯಕ್ರಮ ಹಲವಾರು ಯುವ ಗಾಯಕರನ್ನು ಸೃಷ್ಟಿಸಲು ಅವಕಾಶ ನೀಡುತ್ತಿದೆ. ಸ್ಪರ್ಧಿಗಳು ಯಾವುದೇ ಭಯವಿಲ್ಲದೇ ತಮ್ಮ ಮುಕ್ತ ಕಂಠದಿಂದ ಹಾಡುಗಳನ್ನು ಹಾಡಬೇಕು. ಸಂಗೀತ ನಮ್ಮೊಳಗೆ ಇರುತ್ತದೆ, ಆದರೆ ಅದನ್ನು ಹೊರ ತರಲು ವೇದಿಕೆ ಕಾಲೇಜಿನಲ್ಲಿ ಸಿಕ್ಕರೆ ಉತ್ತಮ ಗಾಯಕರು ಹೊರಬರಲಿದ್ದಾರೆ ಎಂದು ಹೇಳಿದರು.
ಸ್ಪರ್ಧೆಗೆ ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಗಳ ವಿವಿಧ ಕಾಲೇಜುಗಳಿಂದ 28 ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಸುಮಧುರ ಕಂಠದಿಂದ ರಾಜ್ ಹಾಡುಗಳನ್ನು ಹಾಡಿ ರಂಜಿಸಿದರು. ಕಾರ್ಯಕ್ರಮದಲ್ಲಿ ಯುವ ಉದಯೋನ್ಮುಖ ನಟ ವಿಕ್ರಂ, ಸಂಚಾಲಕಿ ವಿಜಯಲಕ್ಷ್ಮೀ ಇನ್ನಿತರರು ಉಪಸ್ಥಿತರಿದ್ದರು.