ಚಾಮರಾಜನಗರ: ರಂಗಭೂಮಿಯಿಂದ ಬಂದು ಸಿನಿಮಾ ರಂಗದಲ್ಲಿ ಅನಭಿಷಕ್ತ ದೊರೆಯಾಗಿ ಮೆರೆದ ವರನಟ ಡಾ.ರಾಜ್‌ಕುಮಾರ್ ತವರು ಜಿಲ್ಲೆ ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ 2010ರಲ್ಲಿ ಆರಂಭಗೊಂಡ ಜಿಲ್ಲಾ ರಂಗಮಂದಿರ ಕಾಮಗಾರಿ 11 ವರ್ಷವಾದರೂ ಪೂರ್ಣಗೊಂಡಿಲ್ಲ.! ಅಂತಿಮ ಹಂತದ ಕಾಮಗಾರಿ ನಡೆಯಬೇಕಿದ್ದು, ಕಾಮಗಾರಿ ಸ್ಥಗಿತ ಗೊಂಡಿರುವ ಕಾರಣ ಕಟ್ಟಡ ಪಾಳು ಬಿದ್ದಿದೆ. ಇನ್ನೊಂದೆಡೆ ರಂಗಮಂದಿರ ಇಲ್ಲದ ಕಾರಣ ಸ್ಥಳೀಯ ಕಲಾತಂಡಗಳು ಪ್ರದರ್ಶನಕ್ಕಾಗಿ ಪಡಿಪಾಟಲು ಪಡಬೇಕಿದೆ.
ಅನುಮೋದನೆ: ರಾಜ್ಯ ಸರ್ಕಾರ 2009-10ನೇ ಸಾಲಿನಲ್ಲಿ ರಂಗಮಂದಿರ ನಿರ್ಮಾಣಕ್ಕೆ ಅನುಮೋದನೆ ನೀಡಿತ್ತು. ಜಿಲ್ಲಾಡಳಿತ ಭವನದ ಆವರಣದಲ್ಲೇ ಇರುವ 20 ಗುಂಟೆ ಜಾಗದಲ್ಲಿ 3.5 ಕೋಟಿ ರೂ. ವೆಚ್ಚದಲ್ಲಿ ಮೊದಲ ಹಂತದ ಕಾಮಗಾರಿ ನಡೆದಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಸ್ತುವಾರಿಯಲ್ಲಿ ಲೋಕೋಪಯೋಗಿ ಇಲಾಖೆ ಈ ಕಟ್ಟಡ ನಿರ್ಮಿಸಿದೆ.
ಮೊದಲ ಹಂತದ ಕಾಮಗಾರಿಯಲ್ಲಿ ಸುಂದರವಾದ ಕಟ್ಟಡ ಮೇಲೆದ್ದಿತು. ಅದಕ್ಕೆ ಬಿಳಿ ಬಣ್ಣವನ್ನೂ ಬಳಿಯಲಾಗಿದೆ. ಆಗ ಕಟ್ಟಡ ನಿರ್ಮಾಣಗೊಂಡ ಬಳಿಕ, ಒಳಾಂಗಣದಲ್ಲಿ ಸ್ಥಳಾವಕಾಶ ಕಡಿಮೆಯಿದೆ. ರಂಗಮಂದಿರ ಸೂಕ್ತ ರೀತಿಯಲ್ಲಿ ನಿರ್ಮಾಣವಾಗಿಲ್ಲ ಎಂದು ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಎಚ್. ಎಸ್.ಮಹದೇವಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿ, ಮಾರ್ಪಾಡಿತ ಕಾಮಗಾರಿ ನಡೆಸಲು ಸೂಚಿಸಿದ್ದರು.
ಮತ್ತೆ, ಜಿಲ್ಲಾಧಿಕಾರಿ ಯೋಜನಾ ವರದಿ ತಯಾರಿಸಿ ಕಳುಹಿಸಿದ ಮೇಲೆ, ಜಿಲ್ಲಾ ರಂಗಮಂದಿರದ ಅಕಾಸ್ಟಿಕ್, ಫಾಲ್ ಸೀಲಿಂಗ್, ಸೌಂಡ್ ಸಿಸ್ಟಂ ಮತ್ತು ಆಸನದ ವ್ಯವಸ್ಥೆ ಮತ್ತಿತರ ಕಾಮಗಾರಿ ನಡೆಸಲು ಸರ್ಕಾರ 2017ರಲ್ಲಿ 2.30 ಕೋಟಿ ರೂ. ಬಿಡುಗಡೆ ಮಾಡಿತ್ತು. ಆದರೆ, ಆಡಳಿತಾತ್ಮಕ ಅನುಮೋದನೆ ದೊರೆತಿರಲಿಲ್ಲ. ಹಲವು ಅಡಚಣೆ, ವಿಳಂಬದಿಂದಾಗಿ 2020ರ ಡಿಸೆಂಬರ್‌ನಲ್ಲಿ ಆಡಳಿತಾತ್ಮಕ ಅನುಮೋದನೆ ದೊರಕಿತು.
ಈ ಕಾಮಗಾರಿಗಳ ಏಜೆನ್ಸಿಯನ್ನು ಲೋಕೋಪಯೋಗಿ ಇಲಾಖೆಗೆ ನೀಡಲಾಗಿದೆ. ಲೋಕೋಪಯೋಗಿ ಇಲಾಖೆ ಟೆಂಡರ್ ಕರೆದು ಕೆಲಸ ಆರಂಭಿಸಬೇಕಿದೆ. ಈಗ ನಿರ್ಮಾಣವಾಗಿರುವ ರಂಗಮಂದಿರದ ಅಂತಿಮ ಹಂತದ ಕಾಮಗಾರಿ ಪೂರ್ಣಗೊಂಡು, ಉದ್ಘಾಟನೆಯಾದರೆ, ಜಿಲ್ಲೆಯ ರಂಗಭೂಮಿ ಕಲಾವಿದರಿಗೆ ತಮ್ಮ ನಾಟಕ ಪ್ರದರ್ಶಿಸಲು ಉತ್ತಮ ರಂಗಮಂದಿರ ದೊರೆತಂತಾಗುತ್ತದೆ. ತನ್ಮೂಲಕ ರಂಗ ಕಲೆಗೂ ಪ್ರೋತ್ಸಾಹ ಸಿಗುತ್ತದೆ.
ಪೈಪೋಟಿ!: ವಿಪರ್ಯಾಸವೆಂದರೆ, ವರನಟ ಡಾ. ರಾಜ್‌ಕುಮಾರ್ ಅವರು ಜನಿಸಿದ ಜಿಲ್ಲೆಯ, ಜಿಲ್ಲಾ ಕೇಂದ್ರದಲ್ಲಿ ಅವರ ಹೆಸರಿನ ರಸ್ತೆಯಾಗಲೀ, ಸ್ಮಾರಕವಾಗಲೀ ಇಲ್ಲ. ಈ ರಂಗಮಂದಿರಕ್ಕೆ ಡಾ.ರಾಜ್‌ಕುಮಾರ್ ಅವರ ಹೆಸರಿಟ್ಟರೆ, ಅದು ಅರ್ಥಪೂರ್ಣವೂ, ಆ ಮಹಾನ್ ಕಲಾವಿದನಿಗೆ ಹುಟ್ಟೂರಿನಲ್ಲಿ ದೊರೆತ ಗೌರವವೂ ಆಗುತ್ತದೆ. ವಿಷಾದದ ಸಂಗತಿಯೆಂದರೆ, ಯಾವುದೇ ಸಂಘಟನೆ ರಂಗಮಂದಿರಕ್ಕೆ ಡಾ.ರಾಜ್ ಕುಮಾರ್ ಹೆಸರಿಡಬೇಕು ಎಂದು ಒತ್ತಾಯಿಸುತ್ತಿಲ್ಲ.!
ಉದ್ಘಾಟನೆಗೊಳ್ಳುವ ಮುನ್ನವೇ ಪಾಳು ಬಿದ್ದ ಕಟ್ಟಡ
2017ರಿಂದ ಕಾಮಗಾರಿ ನಿಂತ ಕಾರಣ, ಈಗ ರಂಗಮಂದಿರ ಪಾಳು ಬಿದ್ದಿದೆ. ಒಳಗೆಲ್ಲ ದೂಳಿನ ರಾಶಿ ತುಂಬಿದೆ. ಜೇಡರ ಬಲೆಗಳು ಆವರಿಸಿವೆ. ತುಂಬಾ ಪ್ರಾಚೀನ ಕಟ್ಟಡ ಪಾಳು ಬಿದ್ದಾಗ, ಗೋಡೆ, ಕಂಬದ ಮೇಲೆ ಹಕ್ಕಿಯ ಹಿಕ್ಕೆಗಳನ್ನು ವಿಸರ್ಜನೆ ಮಾಡಿದಂತೆ, ಈ ಕಟ್ಟಡದಲ್ಲೂ ಹಿಕ್ಕೆಗಳ ಕಲೆಗಳು ಆವರಿಸಿವೆ. ಈಗಲೇ ಗೋಡೆಗಳು ಬಿರುಕು ಬಿಟ್ಟಿವೆ. ವಿದ್ಯುತ್ ಸ್ವಿಚ್‌ಗಳೆಲ್ಲಾ ಕಿತ್ತು ಹೋಗಿವೆ. ಗೋಡೆ ಮೇಲೆ ಮಸಿಯಲ್ಲಿ ಚಿತ್ರಗಳನ್ನು ಬರೆಯಲಾಗಿದೆ.
ಕೋಟ್ಯಂತರ ವೆಚ್ಚದಲ್ಲಿ ನಿರ್ಮಾಣವಾಗಿ, ರಂಗ ಪ್ರದರ್ಶನದ ತಾಣವಾಗಬೇಕಿದ್ದ, ರಂಗಮಂದಿರವೊಂದು ಉದ್ಘಾಟನೆಗೊಳ್ಳುವ ಮೊದಲೇ ಪಾಳುಬಿದ್ದಿದೆ. ಇನ್ನೊಂದೆಡೆ, ಜಿಲ್ಲೆಯ ರಂಗಭೂಮಿ ಕಲಾವಿದರಿಗೆ ರಂಗಮಂದಿರವಿಲ್ಲದೇ ಸಭಾ ಕಾರ್ಯಕ್ರಮ ನಡೆಸುವ ಜಾಗವಾದ ಜೆ.ಎಚ್.ಪಟೇಲ್ ಸಭಾಂಗಣದಲ್ಲೇ ನಾಟಕ ಪ್ರದರ್ಶಿಸಬೇಕಾದ ಅನಿವಾರ್ಯತೆ ಇದೆ.
ಪ್ರದರ್ಶನದ ದಿನ ಯಾವುದಾದರೂ ಸರ್ಕಾರಿ ಕಾರ್ಯಕ್ರಮ ಅಥವಾ ಇನ್ನಿತರ ಸಭಾ ಕಾರ್ಯಕ್ರಮ ಬಿದ್ದರೆ, ಅಂದು ರಂಗ ಕಲಾವಿದರಿಗೆ ಪಟೇಲ್ ಸಭಾಂಗಣ ದೊರಕುವುದೂ ಇಲ್ಲ. ಪಟೇಲ್ ಸಭಾಂಗಣದ ವೇದಿಕೆ ಬಹಳ ಚಿಕ್ಕದಾಗಿದ್ದು, ನಾಟಕ ಪ್ರದರ್ಶನಕ್ಕೆ ಸೂಕ್ತವಾಗಿಲ್ಲ.
“ರಂಗಮಂದಿರದ ಮುಂದುವರಿದ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ದೊರೆತಿರಲಿಲ್ಲ. ಈ ವರ್ಷದ ಜನವರಿಯಲ್ಲಿ ಅನುಮೋದನೆ ದೊರಕಿತು. ಲೋಕೋಪಯೋಗಿ ಇಲಾಖೆ ಕಾಮಗಾರಿ ಏಜೆನ್ಸಿಯಾಗಿದೆ. ಟೆಂಡರ್ ಪ್ರಕ್ರಿಯೆ ನಡೆಯಬೇಕಿದೆ. ಸದ್ಯದಲ್ಲೇ ಕಾಮಗಾರಿ ಪುನಾರಂಭಗೊಳ್ಳಲಿದೆ.” –
ಗಿರೀಶ್, ಸಹಾಯಕ ನಿರ್ದೇಶಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ