ಎಚ್.ಡಿ.ಕೋಟೆ: ನಮ್ಮದು ಗಡಿ ತಾಲೂಕಾದರೂ ಕನ್ನಡ ಭಾಷೆ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ವರನಟ ಡಾ.ರಾಜ್‌ಕುಮಾರ್ ಅವರಂತೆ ಭಾಷಾಭಿಮಾನ ಬೆಳೆಸಿಕೊಳ್ಳುವಂತೆ ಶಾಸಕ ಅನಿಲ್‌ಕುಮಾರ್ ಹೇಳಿದರು. ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ವರನಟ ಡಾ.ರಾಜ್‌ಕುಮಾರ್ ಕನ್ನಡ ನಾಡು ಕನ್ನಡ ಅತ್ಯಂತ ಶ್ರೇಷ್ಠ ನಟ. ಇವರಿಗೆ ಬೇರೆ ಭಾಷೆಗಳಲ್ಲಿ ನಟಿಸಲು ಅವಕಾಶ ಬಂದರೂ ಅವರಲ್ಲಿದ್ದ ಕನ್ನಡ ಭಾಷಾಭಿಮಾನದಿಂದ ನಟಿಸಲಿಲ್ಲ. ತಾಲೂಕಿನ ಗಡಿ ಭಾಗದ ವರ್ತಕರು ತಮ್ಮ ಅಂಗಡಿ ನಾಮಫಲಕಗಳನ್ನು ಮಳಯಾಳಂ ಭಾಷೆಯಲ್ಲಿ ಆಳವಡಿಸಿರುವುದು ನನ್ನ ಗಮನಕ್ಕೆ ಬಂದಿದೆ, ಅದನ್ನು ತೆರವುಗೊಳಿಸಿ ಕನ್ನಡ ನಾಮಫಲಕ ಹಾಕಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಅನ್ಯಭಾಷಿಕರಿಗೆ ಕನ್ನಡ ಕಲಿಸಿ: ಮುಖ್ಯ ಶಿಕ್ಷಕ ವಿ.ರಂಗಸ್ವಾಮಿಶೆಟ್ಟಿ ಮಾತನಾಡಿ, ಕನ್ನಡ ಭಾಷೆಗೆ ಶ್ರೀಮಂತವಾದ ಪದ ಪುಂಜವಿದೆ. ಅಮೂಲ್ಯ ಪರಂಪರೆ ಇರುವ ಕನ್ನಡ ಭಾಷೆಗೆ ಇಂದು ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಮಾತನಾಡುವವರ ಸಂಖ್ಯೆ ಶೇ.25ರಷ್ಟು ಮಾತ್ರ ಎಂದು ವಿಷಾದಿಸಿದರು.
ಕನ್ನಡಿಗರಾದ ನಾವು ನಮ್ಮ ನಾಡಿಗೆ ಬಂದ ಅನ್ಯಭಾಷಿಕರ ಭಾಷೆ ಮಾತನಾಡದೆ, ಅವರಿಗೂ ನಮ್ಮ ಕಲಿಸುವ ಮಾಡಬೇಕು. ಸರ್ಕಾರಿ ಶಾಲೆ ಮುಚ್ಚಬೇಡಿ ಎನ್ನುವ ಸರ್ಕಾರ ಅತ್ತ ಆಂಗ್ಲ ಮಾಧ್ಯಮ ಶಾಲೆ ತೆರೆಯಲು ಅನುಮತಿ ನೀಡುವುದು ಯಾವ ನ್ಯಾಯ. ಕನ್ನಡ ಶಾಲೆ ಮುಚ್ಚಬಾರದು, ಕನ್ನಡ ಶಾಲೆ ಕಟ್ಟುವಂತಾಗಬೇಕು ಆ ನಿಟ್ಟಿನಲ್ಲಿ ಚಿಂತನೆ ಮಾಡುವ ಅಗತ್ಯವಿದೆ ಎಂದರು.
ಮೆರವಣಿಗೆ: ಪಟ್ಟಣದ ಶ್ರೀವರದರಾಜ ಸ್ವಾಮಿ ದೇವಸ್ಥಾನದ ಮುಂದೆ ಬೆಳ್ಳಿ ರಥದಲ್ಲಿ ಶ್ರೀ ಭುವನೇಶ್ವರಿ ತಾಯಿ ಭಾವಚಿತ್ರವಿರಿಸಿ ಕಳಸ ಹೊತ್ತ ಮಹಿಳೆಯರೊಂದಿಗೆ ಹೊರಟ ಮೆರವಣಿಗೆಗೆ ಶಾಸಕ ಅನಿಲ್‌ಕುಮಾರ್ ನಂದಿ ಕಂಬಕ್ಕೆ ಪುಷ್ಪ ನಮನ ಸಲ್ಲಿಸಿ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ನಂದಿಕಂಬ, ನಾದಸ್ವರ, ನಗಾರಿ, ಕನ್ನಡ ಇತಿಹಾಸ ಸಾರುವ ಸ್ತಬ್ಧ ಚಿತ್ರಗಳು, ಮಕ್ಕಳ ಕುಣಿತ ಮೆರವಣಿಗೆಗೆ ರಂಗು ತಂದಿತು.
ಕಾರ್ಯಕ್ರಮದಲ್ಲಿ ಜಿಪಂ ಅಧ್ಯಕ್ಷೆ ನಯೀಮಾ, ಸದಸ್ಯ ವೆಂಕಟಸ್ವಾಮಿ, ತಾಪಂ.ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷೆ ಮಂಜುಳಾ, ಸರಗೂರು ಪಪಂ ಅಧ್ಯಕ್ಷೆ ಜ್ಯೋತಿ, ಉಪಾಧ್ಯಕ್ಷೆ ಮಂಜುಳಾ, ತಹಶೀಲ್ದಾರ್ ಮಂಜುನಾಥ್, ಇಒ ದರ್ಶನ್, ಬಿಇಒ ಸುಂದರ, ಪಿಎಸ್‌ಐ ಆಶೋಕ್, ಫರ್ವೇಜ್ ಕಲೀಂವುಲ್ಲಾ, ಬಿಆರ್‌ಪಿ ಮಹದೇವಯ್ಯ, ಸಿಆರ್‌ಪಿ ಪ್ರಕಾಶ್ ಇನ್ನಿತರರಿದ್ದರು.