Advertisement

ಅನಾಥ ಮಕ್ಕಳ ತಾಯಿ ಡಾ|ಸಿಂಧುತಾಯಿ ಅವರಿಗೆ ಮೂಲತ್ವ ವಿಶ್ವ ಅವಾರ್ಡ್‌

12:46 PM Mar 22, 2017 | |

ಮಂಗಳೂರು: ಅನಾಥ ಮಕ್ಕಳಿಗೆ ಆಸರೆಯಾಗಿ ನಿಂತು ಸಲಹಿದ ಡಾ| ಸಿಂಧುತಾಯಿ ಸಪಲ್‌ ಅವರಿಗೆ, ಮೂಲತ್ವ ಫೌಂಡೇಶನ್‌ ಚಾರಿಟೆಬಲ್‌ ಟ್ರಸ್ಟ್‌ ವತಿಯಿಂದ ಕೊಡಮಾಡುವ “ಮೂಲತ್ವ ವಿಶ್ವ ಅವಾರ್ಡ್‌-2017′ ಪ್ರದಾನ ಸಮಾರಂಭ ಎ. 1ರಂದು ಸಂಜೆ 4 ಗಂಟೆಗೆ ಮಂಗಳೂರು ಪುರಭವನದಲ್ಲಿ ನಡೆಯಲಿದೆ.

Advertisement

ಪ್ರಕಾಶ್‌ ಮೂಲತ್ವ ಸ್ಥಾಪಕತ್ವದ ಮೂಲತ್ವ ಫೌಂಡೇಶನ್‌ನಿಂದ ಪ್ರತಿವರ್ಷ ಸಮಾಜಮುಖೀಯಾಗಿ ಅನನ್ಯ ಸೇವೆ ಮಾಡಿದ ವ್ಯಕ್ತಿಗಳನ್ನು ಗುರುತಿಸಿ “ಮೂಲತ್ವ ವಿಶ್ವ ಅವಾರ್ಡ್‌’ ನೀಡಲಾಗುತ್ತಿದೆ.

ಯಾರಿವರು ಸಿಂಧುತಾಯಿ?
ಸಿಂಧುತಾಯಿ ಸಪಲ್‌ ಅವರು, ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯ ದನ ಮೇಯಿಸುವ ಕಾಯಕದ ಒಂದು ಕುಟುಂಬದಲ್ಲಿ ಹುಟ್ಟಿದವರು. ಅನಪೇಕ್ಷಿತ ಮಗುವಾದ ಕಾರಣ “ಚಿಂದಿ’ ಎಂದೇ ಕರೆಯಲ್ಪಟ್ಟವರು. ಕಲಿಯುವ ಆಸಕ್ತಿ ಅದಮ್ಯವಾಗಿದ್ದರೂ ತಾಯಿಯ ಪ್ರತಿರೋಧದ ಕಾರಣ ಕೇವಲ ನಾಲ್ಕನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿದರು. ಹತ್ತು ವರ್ಷ ಪ್ರಾಯದಲ್ಲೇ 30 ವರ್ಷ ವರ್ಷದ ವ್ಯಕ್ತಿಯ ಜತೆ ಮದುವೆಯಾದರು. ಬಳಿಕ ಹುಟ್ಟೂರಿನಿಂದ ನವರ್ಗಾಂವ್‌ ಅರಣ್ಯಪ್ರದೇಶದಲ್ಲಿರುವ ಗಂಡನ ಮನೆಗೆ ವಲಸೆ ಹೋದರು. ಅಲ್ಲಿ ದೀನದಲಿತರಿಗೆ, ತುಳಿತಕ್ಕೊಳಗಾದವರಿಗೆ ಸಹಾಯ ಮಾಡುವ ಆಕೆಯ ತುಡಿತ ಹೆಚ್ಚಾಯಿತು. ಅರಣ್ಯ ಪ್ರದೇಶದಲ್ಲಿ ದನದ ಸೆಗಣಿ ಸಂಗ್ರಹಿಸಿ ಜೀವಿಸುತ್ತಿದ್ದ ಬಡ ಮಹಿಳೆಯರನ್ನು ಜಮೀನುದಾರರ ಮತ್ತು ಅರಣ್ಯ ಅಧಿಕಾರಿಗಳ ಶೋಷಣೆಯಿಂದ ರಕ್ಷಿಸುವ ಕೆಲಸಕ್ಕೆ ಮುಂದಾದರು. ಇದರಿಂದ ಮತ್ತಷ್ಟು ಸಂಕಷ್ಟ ಅನುಭವಿಸಬೇಕಾಯಿತು. ಆಕೆ ಗರ್ಭಿಣಿಯಾದಾಗ ಜಮೀನಾªರ ಅವರ ವಿರುದ್ಧ ಅನೈತಿಕ ಆರೋಪ ಹೊರಿಸಿದ. ಇದರಿಂದ ಗರ್ಭಿಣಿ ಪತ್ನಿಯನ್ನು ಪತಿ ತಿರಸ್ಕರಿಸಿದ. ಅಕೆ ದನದ ಕೊಟ್ಟಿಗೆಯಲ್ಲಿ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದರು. ತಾಯಿ ಮನೆಯವರೂ ದೂರ ಮಾಡಿದರು. ಎಲ್ಲರಿಂದಲೂ ಅವಮಾನಗೊಂಡ ಸಿಂಧುತಾಯಿ ಭಿಕ್ಷಾಟನೆ ಸುರು ಮಾಡಿ ರೈಲು ನಿಲ್ದಾಣ, ದನದ ಹಟ್ಟಿ, ರುದ್ರಭೂಮಿಗಳನ್ನು ಆಶ್ರಯ ತಾಣ ಮಾಡಿಕೊಂಡರು.

ಹೋರಾಟದ ಬದುಕು
ಹೀಗಿರುವಾಗ ಅಮರಾವತಿ ಚಿಕಲ್ದರಾ ಪ್ರದೇಶದಲ್ಲಿ ಸರಕಾರ ಹುಲಿ ಸಂರಕ್ಷಣಾ ತಾಣಕ್ಕಾಗಿ 84 ಹಳ್ಳಿಗಳ ಆದಿವಾಸಿ ಜನರನ್ನು ಹೊರಹಾಕುವ ಪ್ರಯತ್ನ ಮಾಡುತ್ತಿತ್ತು.  ಇದನ್ನು ಸಹಿಸದ ಸಿಂಧೂತಾಯಿ  ಬಡಜನರ ಪರ ನಿಂತು ಪುನರ್ವಸತಿಗೆ ಹೋರಾಡಿ ಯಶಸ್ವಿಯಾದರು. ಇದು ಅವರ ಬದುಕಿಗೆ ಹೊಸ ದಿಕ್ಕನ್ನು ನೀಡಿತು. ಬಳಿಕ ತಿರಸ್ಕಾರ, ಅವಮಾನಕ್ಕೊಳಗಾದ ಮಕ್ಕಳನ್ನು, ಸ್ತ್ರೀಯರನ್ನು, ಅನಾಥರನ್ನು ಸಲಹಿದರು. ಭಿಕ್ಷೆ ಬೇಡಿ ಪೋಷಣೆ ಮಾಡಿದರು. ತನ್ನ ಉದ್ದೇಶಕ್ಕೆ ತೊಡಕಾಗದಿರಲೆಂದು ಸ್ವಂತ ಮಗಳನ್ನು ಪುಣೆಯ ಆಶ್ರಮದಲ್ಲಿ ಬಿಟ್ಟರು. ಚಿಕಲ್ದರಾದಲ್ಲಿ ಆಶ್ರಮ ಸ್ಥಾಪಿಸಿ, ನಿಧಿ ಸಂಗ್ರಹಣೆ ಮಾಡಿದರು.

1,200 ಮಕ್ಕಳ ತಾಯಿ !
ಪ್ರಸ್ತುತ ಸಿಂಧು ತಾಯಿ 1,200ಕ್ಕೂ ಮಿಕ್ಕಿದ ಅನಾಥ ಮಕ್ಕಳನ್ನು ಸಲಹುತ್ತಿದ್ದಾರೆ. ಇವರಲ್ಲಿ ಕೆಲವರು ವೈದ್ಯ, ವಕೀಲ ಮುಂತಾದ ಹುದ್ದೆಗಳಲ್ಲಿದ್ದಾರೆ. ಆಕೆಯ ಸ್ವಂತ ಮಗಳು ಸೇರಿದಂತೆ ಕೆಲವರು ಅನಾಥಾಶ್ರಮ ನಡೆಸುತ್ತಿದ್ದಾರೆ. ಇವರ ಸಾಧನೆಗೆ 786 ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next