Advertisement
ಶಿವಯೋಗಿಯ ಶರೀರಂ ವೃಥಾ ಸವೆಯಲಾಗದು ಅನುಗೊಂಬನಿತು ಕಾಯಕಂ ನಡೆಯುತ್ತಿರಬೇಕು ಎಂಬೊಂದು ಮಾತುಂಟು. ಏನದರ ಅರ್ಥವೆಂದು ತಿಳಿಯಬೇಕಿದ್ದರೆ ನೀವು ಕಾಂತಾವರವನ್ನು ನೋಡಬೇಕು; ಡಾ. ನಾ. ಮೊಗಸಾಲೆ ಎಂಬ ಕವಿಯ ಸಾಹಸವನ್ನು ಕೇಳಬೇಕು. ಸಾಹಿತ್ಯವೆನ್ನುವುದು ಹಲವು ಅರ್ಥಗಳಲ್ಲಿ ಸ್ವಾಂತಸುಖಾಯ ಆಗುತ್ತಿರುವ ಹೊತ್ತೂಂದರಲ್ಲಿ, ಸಾಹಿತ್ಯ ಮತ್ತು ವೃತ್ತಿಜೀವನ ನಗರಾಭಿಮುಖ ಆಗುತ್ತಿರುವ ಹೊತ್ತೂಂದರಲ್ಲಿ, ವೈದ್ಯನೊಬ್ಬ ಹಳ್ಳಿಗೆ ಬಂದು ಕುಳಿತು, ಅಲ್ಲೊಂದು ಪರ್ಯಾಯ ಸಾಂಸ್ಕೃತಿಕ ರಾಜಧಾನಿಯನ್ನು ಕಟ್ಟಿದ ಕತೆ ನೀವು ಮನಗಾಣಬೇಕು.
ಇವತ್ತು ಕಾಂತಾವರವೆಂದರೆ ಒಂದು ಪುಟ್ಟಹಳ್ಳಿಯಲ್ಲ. ಕಾಂತಾವರ ಒಂದು ರೂಪಕ. ನಾವಿಲ್ಲಿ ನೆನಪಿರಿಸಿಕೊಳ್ಳಬೇಕಾದ ಸಂಗತಿಯೆಂದರೆ ಮೊಗಸಾಲೆಯವರಿಗೆ ಕೀರ್ತಿಶಿಖರವನ್ನೇರಲು ಸಾಹಿತ್ಯಪರಿಚಾರಿಕೆ ಮತ್ತು ಪರಿಕರ್ಮಗಳು ಅನಿವಾರ್ಯ ಮಾರ್ಗವೇನೂ ಅಗಿರಲಿಲ್ಲ. ಸಾಹಿತ್ಯಕ್ಷೇತ್ರದಲ್ಲಿ ಎಂತಹ ಸಾಧಕರೂ ಅಸೂಯೆ ಪಡಬಹುದಾದಷ್ಟು ಎತ್ತರವನ್ನು ಅವರು ಸೃಜನಶೀಲಸಾಹಿತ್ಯದ ಮೂಲಕವೇ ಏರಿದ್ದಾರೆ. ಅವರು ರಚಿಸಿದ ಕಾದಂಬರಿಗಳು (18), ಕಥಾಸಂಕಲನಗಳು (7), ಕವನಸಂಕಲನಗಳು (13), ಲೇಖನಸಂಕಲನಗಳು (7), ಸಂಪಾದಿತ ಕೃತಿಗಳು (13), ವೈದ್ಯಕೀಯ ಕೃತಿಗಳು (7), ಮತ್ತು ಗೀತನಾಟಕಗಳು (1) ಸೃಜನಶೀಲಸಾಹಿತ್ಯದ ಅತ್ಯುನ್ನತ ಫಲಶ್ರುತಿಗಳಂತಿವೆ. ಬಯಲು ಬೆಟ್ಟ ಅವರ ಆತ್ಮಚರಿತ್ರೆ. ಮೊಗಸಾಲೆಯವರ ಸಾಹಿತ್ಯಕೃತಿಗಳಿಗೆ ಸಂದ ರಾಜ್ಯಮಟ್ಟದ ಪುರಸ್ಕಾರಗಳು ಇವರ ಸಾಹಿತ್ಯಿಕ ಸಾಧನೆಯ ಮೈಲಿಗಲ್ಲು ಗಳಂತಿವೆ. ಅವರ ಮೂರು ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಗಳು ಪ್ರಾಪ್ತವಾಗಿವೆ. ನನ್ನದಲ್ಲದ್ದು (ಕಾದಂಬರಿ- 1977), ಇದಲ್ಲ ಇದಲ್ಲ (ಕವನಸಂಕಲನ- 2003) ಮತ್ತು ಉಲ್ಲಂಘನೆ (ಕಾದಂಬರಿ – 2008). ಕನ್ನಡದಲ್ಲಿ ಕಾವ್ಯ ಮತ್ತು ಕಾದಂಬರಿ ಎರಡೂ ಮಾಧ್ಯಮಗಳಲ್ಲಿ ಅಕಾಡೆಮಿ ಪ್ರಶಸ್ತಿ ಪಡೆದ ಅಪರೂಪದ ಲೇಖಕರಿವರು. ಅವರ ಕಥೆ, ಕವನ, ಕಾದಂಬರಿಗಳು ತೆಲುಗು, ಮಲಯಾಳ, ಮರಾಠಿ, ಹಿಂದಿ, ಇಂಗ್ಲಿಷ್ ಭಾಷೆಗಳಿಗೆ ಅನುವಾದಿತ ವಾಗಿವೆ, ಮಾತ್ರವಲ್ಲ, ಯೂನಿವರ್ಸಿಟಿ ಗಳಲ್ಲಿ ಪಠ್ಯವಾಗಿವೆ. ಇವರ ಸಮಗ್ರ ಸಾಹಿತ್ಯವನ್ನು ವಿಶ್ಲೇಷಿಸಿ ಎಂಫಿಲ್ ಮತ್ತು ಪಿಎಚ್‌ಡಿ ಪಡೆದವರಿದ್ದಾರೆ. ಸಾಹಿತಿಯೊಬ್ಬ ಬರಹದ ಮೂಲಕ ಹಂಬಲಿಸುವ ಎಲ್ಲ ಸಾಧನೆಗಳನ್ನು ಅವರು ಮಾಡಿದ್ದಾರೆ, ಮಾಡುತ್ತಿದ್ದಾರೆ.
Related Articles
Advertisement
ಮೊಗಸಾಲೆಯವರು ಕವಿತೆಗೆ ಗದ್ಯಲಯವನ್ನು ದಕ್ಕಿಸಿಕೊಂಡ ಕನ್ನಡದ ಪ್ರಮುಖ ಕವಿ. ಅವರ ಕಾವ್ಯದ ಆಕೃತಿಯು ಜೆನ್ ಬರವಣಿಗೆ, ಜಪಾನಿನ ಹಾಯಿಕು ಮಾದರಿ, ಕನ್ನಡದ ಬೆಡಗಿನ ವಚನಗಳ ಪರಂಪರೆಯ ಮುಂದುವರಿಕೆಯಂತೆ ಕಾಣಿಸುತ್ತದೆ. ಅವರ ಹತ್ತು ಕವನ ಸಂಕಲನಗಳು ಮತ್ತು ಸಮಗ್ರ ಕಾವ್ಯದ ಮೂರು ಸಂಪುಟಗಳು ಪ್ರಕಟವಾಗಿವೆ.
ಮೊಗಸಾಲೆಯವರ ನೆಲದ ನೆರಳು (1999), ಇದಲ್ಲ ಇದಲ್ಲ (2003), ಇಹಪರದ ಕೊಳ (2006), ಕಾಮನೆಯ ಬೆಡಗು (2010) ಮತ್ತು ದೇವರು ಮತ್ತೆ ಮತ್ತೆ (2014) ಕವನ ಸಂಕಲನಗಳು ನವ್ಯೋತ್ತರ ಕನ್ನಡ ಕಾವ್ಯ ಕಂಡುಕೊಂಡ ಪಾರಮಾರ್ಥಿಕ ಸ್ಪರ್ಶದ ಅತ್ಯುತ್ತಮ ಕವಿತೆಗಳನ್ನು ಒಳಗೊಂಡಿವೆ. 2003ರಲ್ಲಿ ಪ್ರಕಟವಾದ ಇದಲ್ಲ ಇದಲ್ಲ ಮೊಗಸಾಲೆಯವರ ಕಾವ್ಯಪರ್ಯಟನೆಯ ಒಂದು ಮಹತ್ವದ ಮೈಲಿಗಲ್ಲು. ಶಂಕರಾಚಾರ್ಯರ “ನೇತಿ ನೇತಿ’ ವಾದವನ್ನು ನೆನಪಿಗೆ ತರುವ ಹೆಸರಿನ ಈ ಸಂಕಲನದಲ್ಲಿ ಇದೇ ಹೆಸರಿನ ಒಂದು ಕವಿತೆಯೂ ಇದೆ. ಆದರೆ ಈ ಕವಿತೆಯಲ್ಲಿ ಇದಲ್ಲ ಇದಲ್ಲ ತಿಳಿವು ಎಂದು ಎದ್ದದ್ದು ಬುದ್ಧ.
ಇಂತಹದೇ ಚಮತ್ಕಾರವನ್ನು ಮೊಗಸಾಲೆಯವರ ಸಣ್ಣಕಥೆಗಳಲ್ಲಿ ಮರುಹುಟ್ಟು ಪಡೆದ ಗಾಂಧಿವಾದದಲ್ಲಿ ಕಾಣಬಹುದು. ಉಲ್ಲಂಘನೆ ಕಾದಂಬರಿಯಲ್ಲಿ ಬರುವ ಗಾಂಧೀವಾದವು ಅಕ್ಷರಶಃ ಗಾಂಧೀವಾದವಾದರೆ, ಅವರ ಸಣ್ಣ ಕಥೆಗಳಲ್ಲಿ ಸೀತಾಪುರಕ್ಕೆ ಬರುವ ಗಾಂಧಿ ಎಲ್ಲೋ ಲೋಹಿಯಾ ಆಗಿಬಿಡುತ್ತಾರೆ; ಅಲ್ಲಮನೂ ಆಗಿಬಿಡುತ್ತಾರೆ. ಅದು ಅವರ ಓದಿನ ವ್ಯಾಪ್ತಿಯ ಸಂಕೇತವಾಗುತ್ತದೆ.ಇವತ್ತು ಮೊಗಸಾಲೆಯವರೆಂದರೆ ಐವತ್ತನಾಲ್ಕು ವರ್ಷಗಳ ಕಾಲ ನಿರಂತರವಾಗಿ ಕಟ್ಟಿಕೊಡುತ್ತಾ ಬಂದ ಅಮೂಲ್ಯವಾದ ಸಾಹಿತ್ಯಕೃತಿಗಳಷ್ಟೇ ಆಗಿ ಉಳಿದಿಲ್ಲ. ಮೊಗಸಾಲೆಯವರೆಂದರೆ 1976ರಲ್ಲಿ ಹುಟ್ಟಿಕೊಂಡ ಕಾಂತಾವರ ಕನ್ನಡ ಸಂಘ; 1978ರಲ್ಲಿ ಹುಟ್ಟುಹಾಕಿದ ವರ್ಧಮಾನ ಪೀಠ; 2003ರಲ್ಲಿ ಕಟ್ಟಿದ ಕಾಂತಾವರ ಕನ್ನಡ ಭವನ; 2010ರಲ್ಲಿ ಕಟ್ಟಿದ ಅಲ್ಲಮಪ್ರಭು ಪೀಠ; ಯಾವ ಯೂನಿವರ್ಸಿಟಿಯೂ ಮಾಡಲಿಕ್ಕೆ ಅಂಜುವ ಎರಡು ಆ್ಯಂಥಾಲಜಿಗಳು- ದಕ್ಷಿಣಕನ್ನಡ ಕಾವ್ಯ 1901-1976 ಮತ್ತು ದಕ್ಷಿಣಕನ್ನಡ ಶತಮಾನದ ಕಾವ್ಯ 1900-2000.; ಕರ್ನಾಟಕ ರಾಜ್ಯದ ಸುವರ್ಣ ಸಂಭ್ರಮದ ಶಾಶ್ವತ ನೆನಪಿಗಾಗಿ ಆರಂಭಿಸಿದ ನಾಡಿಗೆ ನಮಸ್ಕಾರ ಗ್ರಂಥಮಾಲೆಯಲ್ಲಿ ಪ್ರಕಟಿಸುತ್ತಿರುವ ಕಿರುಹೊತ್ತಿಗೆಗಳು; ನುಡಿನಮನ, ಅನುಭವದ ನಡೆ – ಅನುಭಾವದ ನುಡಿ ಉಪನ್ಯಾಸಗಳು ಮತ್ತು ಸಂಪುಟೀಕರಣಗೊಂಡ ನುಡಿಹಾರ, ಕರಣಕಾರಣ. ಇವತ್ತು ಮೊಗಸಾಲೆಯವರೆಂದರೆ, ಕನ್ನಡ ಇನ್ನು ಮುಂದೆ ಉಳಿಯಬೇಕಿರುವುದು ನಮ್ಮ-ನಿಮ್ಮಂತಹ ಹಳ್ಳಿಗರ ನಡುವೆ ಎಂಬ ಪರಿಕಲ್ಪನೆಗೊಂದು ದ್ಯೋತಕ. ಬೆಳಗೋಡು ರಮೇಶ ಭಟ್