Advertisement
ಕೊಡಿಯಾಲಬೈಲ್‌ನ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಬೆಳಗ್ಗೆ 9ರಿಂದ 4ರ ವರೆಗೆ ಮತ ದಾನ ನಡೆದಿತ್ತು. ಮಂಗಳೂರು ಎಸಿ ರವಿಚಂದ್ರ ಚುನಾವಣ ಅಧಿಕಾರಿಯಾಗಿದ್ದರು. ಫಲಿತಾಂಶ ಘೋಷಣೆ ಯಾಗುತ್ತಿದ್ದಂತೆ ಸಹಕಾರ ಬಳಗದ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು.ಡಾ| ಎಂ.ಎನ್. ರಾಜೇಂದ್ರ ಕುಮಾರ್ ನೇತೃತ್ವದ 16 ಸ್ಪರ್ಧಿಗಳಾದ ಭಾಸ್ಕರ್ ಎಸ್. ಕೋಟ್ಯಾನ್, ವಿನಯ್ ಕುಮಾರ್ ಸೂರಿಂಜೆ, ಕೆ. ಹರೀಶ್ಚಂದ್ರ, ಎಸ್. ರಾಜು ಪೂಜಾರಿ, ಎಂ. ಮಹೇಶ್ ಹೆಗ್ಡೆ, ದೇವಿಪ್ರಸಾದ್ ಶೆಟ್ಟಿ, ಬಿ. ಅಶೋಕ್ ಕುಮಾರ್ ಶೆಟ್ಟಿ, ಕೆ.ಎಸ್. ದೇವರಾಜ್, ಶಶಿಕುಮಾರ್ ರೈ ಬಿ., ಎಂ. ವಾದಿರಾಜ ಶೆಟ್ಟಿ, ಬಿ. ನಿರಂಜನ, ಟಿ.ಜಿ. ರಾಜಾರಾಮ ಭಟ್, ಮೋನಪ್ಪ ಶೆಟ್ಟಿ ಎಕ್ಕಾರು, ಕೆ. ಜೈರಾಜ್ ಬಿ. ರೈ, ಎಸ್.ಬಿ. ಜಯರಾಮ ರೈ ಗೆಲುವು ಸಾಧಿಸಿದ್ದಾರೆ. ಸುಳ್ಯ, ಪುತ್ತೂರು ಸಹಿತ ಕೆಲವು ತಾಲೂಕುಗಳ ಪ್ರಾ.ಕೃ. ಪ. ಸ. ಸಂಘ ಗಳಲ್ಲಿ ಸಹಕಾರ ಭಾರತಿ ಮೇಲುಗೈ ಹೊಂದಿದ್ದರೂ ಸದಸ್ಯರ ಅಡ್ಡ ಮತದಾನದ ಪರಿಣಾಮ ಅವರು ಮತ ಕಳೆದುಕೊಳ್ಳುವಂತಾಯಿತು.
ಈ ಫಲಿತಾಂಶದಿಂದ ಡಾ| ಎಂ.ಎನ್. ರಾಜೇಂದ್ರ ಕುಮಾರ್ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಮುಂದುವರಿಯುವ ಅವಕಾಶ ಪಡೆದಿದ್ದಾರೆ. ಐದು ಅವಧಿಗೆ ಅಂದರೆ, ನಿರಂತರ 25 ವರ್ಷಗಳ ಕಾಲ ಅಧ್ಯಕ್ಷರಾಗಿ ಇತಿಹಾಸ ನಿರ್ಮಿಸಿರುವ ಅವರಿಗೆ 6ನೇ ಬಾರಿಯ ಅದೃಷ್ಟ ಈ ಭರ್ಜರಿ ಗೆಲುವಿನೊಂದಿಗೆ ಒಲಿದಿದೆ. 6ನೇ ಬಾರಿಗೆ ಮುಂದುವರಿದರೆ, 30 ವರ್ಷಗಳ ಸುದೀರ್ಘ ಅವಧಿಗೆ ಅಧಿಕಾರ ಹೊಂದುವ ಮೂಲಕ ಮತ್ತೂಂದು ದಾಖಲೆಯನ್ನು ಅವರು ನಿರ್ಮಿಸಲಿದ್ದಾರೆ. “ಈ ಗೆಲುವು ಸಹಕಾರ ಕ್ಷೇತ್ರಕ್ಕೆ ಗೌರವ’
ಗೆಲುವಿನ ಹಿನ್ನೆಲೆಯಲ್ಲಿ “ಉದಯವಾಣಿ’ ಜತೆ ಸಂತಸ ಹಂಚಿಕೊಂಡ ಹಾಲಿ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್, ಜಿಲ್ಲೆಯ ಸಹಕಾರ ಕ್ಷೇತ್ರ ಒಟ್ಟಾಗಿದೆ ಎಂಬುದಕ್ಕೆ ಈ ಫಲಿತಾಂಶವೇ ನಿದರ್ಶನ. ಜಿಲ್ಲಾ ಸಹಕಾರ ಕ್ಷೇತ್ರವು ಯಾರ ಕಪಿಮುಷ್ಟಿಯಲ್ಲೂ ಇಲ್ಲ; ನಾವೆಲ್ಲ ಸಹಕಾರ ತತ್ತÌದಡಿ ಒಂದಾಗಿದ್ದೇವೆ ಎನ್ನುವುದಕ್ಕೆ ಇದೇ ದೊಡ್ಡ ಉದಾಹರಣೆ. ಎಲ್ಲ ನಿರ್ದೇಶಕರು ಬಯಸಿದರೆ ಮತ್ತು 6ನೇ ಬಾರಿ ಅಧ್ಯಕ್ಷನಾಗಿ ಮುಂದುವರಿಯುವ ಅವಕಾಶ ಲಭಿಸಿದರೆ, ಗ್ರಾಹಕರಿಗೆ ಮತ್ತಷ್ಟು ವಿನೂತನ ಸೇವೆಗಳನ್ನು ಪರಿಚಯಿಸಿ ಬ್ಯಾಂಕ್ ಅನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸಲು ಪ್ರಯತ್ನಿಸುವೆ ಎಂದರು.
Related Articles
ಫಲಿತಾಂಶ ಪ್ರಕಟ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಾ| ಎಂ.ಎನ್.ಆರ್., 25 ವರ್ಷಗಳಿಂದ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೇನೆ. ಅವಿರೋಧವಾಗಿ ಆಯ್ಕೆಯಾಗುತ್ತಿದ್ದಲ್ಲಿ ಈ ಬಾರಿ ಚುನಾವಣೆ ನಡೆದಿದೆ. ಎಲ್ಲ 16 ಸ್ಥಾನಗಳನ್ನು ನಮ್ಮ ನೇತೃತ್ವದ ಸಹಕಾರಿ ಬಳಗ ಗೆದ್ದುಕೊಂಡಿರುವುದು ಸಂತಸದ ವಿಚಾರ ಎಂದರು. ಸಹಕಾರಿ ಬಳಗ ಸಹಕಾರಿ ಕ್ಷೇತ್ರದಲ್ಲಿ ಹೊಸ ಹೆಜ್ಜೆಗಳೊಂದಿಗೆ ಮುನ್ನಡೆಯಲಿದೆ. ಸಹಕಾರಿ ಕ್ಷೇತ್ರದ ಇತರ ಹಂತಗಳಲ್ಲಿಯೂ ನಮ್ಮ ಸಂಘಟನೆ ಸ್ಪರ್ಧೆಗೆ ನಿರ್ಧರಿಸಲಿದೆ. ಮತದಾನದ ದಿನದವರೆಗೆ ರಾಜಕೀಯ ವಿಚಾರ; ಫಲಿತಾಂಶ ಬಂದ ಬಳಿಕ ನಾವೆಲ್ಲ ಸಹಕಾರಿಗಳು ಎಂಬ ಮನೋಭಾವ ನಮ್ಮದು. ಎಲ್ಲರೂ ಜತೆಯಾಗಿ ಮುನ್ನಡೆಯುವ ನಿಟ್ಟಿನಲ್ಲಿ ಹೆಜ್ಜೆ ಇಡಲಾಗುವುದು ಎಂದರು.
Advertisement