Advertisement
1919ರ ಎ. 10ರಂದು ಜನಿಸಿದ ಡಾ| ಎಂ.ಪಿ. ಪೈ ಅವರ ಆರಂಭಿಕ ಓದು ಮಂಗಳೂರಿನ ಕೆನರಾ ಹೈಸ್ಕೂಲ್ ಮತ್ತು ಮುಂದಿನ ಶಿಕ್ಷಣ ಮಂಗಳೂರಿನ ಸರಕಾರಿ ಕಾಲೇಜಿನಲ್ಲಾಯಿತು. ಆ ಬಳಿಕದ ಅವರ ವೈದ್ಯ ಶಿಕ್ಷಣ ಮದರಾಸಿನ ಸ್ಟೇನ್ಲಿ ಮೆಡಿಕಲ್ ಕಾಲೇಜು ಮತ್ತು ಮದರಾಸು ಮೆಡಿಕಲ್ ಕಾಲೇಜಿನಲ್ಲಾಯಿತು. ತಮ್ಮ ಎಫ್ಆರ್‌ಸಿಎಸ್ ಅಧ್ಯಯನಕ್ಕಾಗಿ 1952ರಲ್ಲಿ ಇಂಗ್ಲೆಂಡಿಗೆ ತೆರಳಿದರು. ಅಲ್ಲಿಂದ ಮರಳಿ ಕೊಯಮತ್ತೂರಿನಲ್ಲಿ ಖಾಸಗಿ ವೈದ್ಯಕೀಯ ಚಿಕಿತ್ಸಾ ಕೇಂದ್ರವನ್ನು ಆರಂಭಿಸಿದರು. ಮುಂದೆ ವೈದ್ಯ ಶಿಕ್ಷಕರಾಗಬೇಕು ಎಂಬ ಹಂಬಲದಿಂದ ಅಸ್ಸಾಂನ ಹಿಬ್ರುಗಢದ ಮೆಡಿಕಲ್ ಕಾಲೇಜಿನಲ್ಲಿ ಬೋಧಕರಾದರು. ಮುಂದೆ ಬೆಂಗಳೂರಿನ ವಿಕ್ಟೋರಿಯ ಮೆಡಿಕಲ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. 1959ರಲ್ಲಿ ಮಂಗಳೂರಿನ ಕೆಎಂಸಿಗೆ ಪ್ರಾಧ್ಯಾಪಕರಾಗಿ ಬಂದರು. ಆ ಹೊತ್ತಿಗೆ ಕಾಲೇಜು ಆರಂಭಗೊಂಡು 6 ವರ್ಷಗಳಾಗಿದ್ದವು. ಅವರು ಅಲ್ಲಿ 1963ರಲ್ಲಿ ಸರ್ಜರಿ ವಿಭಾಗದಲ್ಲಿ ಎಂ.ಎಸ್. ಕೋರ್ಸ್ ಆರಂಭಿಸಿ 17 ವರ್ಷಗಳ ಕಾಲ ಪ್ರಿನ್ಸಿಪಾಲರಾಗಿ, ಪ್ರಾಧ್ಯಾಪಕರಾಗಿ 1977ರಲ್ಲಿ ವಿಶ್ರಾಂತರಾದರು.
Related Articles
Advertisement
ಠಾಗೋರರ ಕೃತಿಗಳನ್ನು ಮೂಲ ಬಂಗಾಲಿಯಲ್ಲಿ ಓದಿ ಆಸ್ವಾದಿಸಬೇಕೆನ್ನುವುದು ಅವರ ಆಸೆಯಾಗಿತ್ತು. ಅದಕ್ಕಾಗಿ 50ನೇ ವಯಸ್ಸಿನಲ್ಲಿ ಬಂಗಾಲಿ ಕಲಿತು ಪರಿಣತಿ ಸಾಧಿಸಿದರು. ಅವರ ಬಾಂಧವ್ಯ ಮತ್ತು ಶಸ್ತ್ರಚಿಕಿತ್ಸಾ ಪರಿಣತಿಗಾಗಿ ಅನೇಕ ಶಾಸ್ತ್ರೀಯ ಗೌರವ ಪ್ರಶಸ್ತಿಗಳನ್ನು ಪಡೆದಿದ್ದರು. ಅವುಗಳಲ್ಲಿ ಡಾ| ಬಿ.ಸಿ. ರಾಯ್ ಪ್ರಶಸ್ತಿ ಬಹಳ ಮಹತ್ವದ್ದು.
ಡಾ| ಪೈ ಅವರು ಪ್ರತಿದಿನ ತೈತ್ತೀರಿಯೋ ಪನಿಷತ್ತಿನ ಈ ಕೆಳಗಿನ ಮಂತ್ರವನ್ನು ಉತ್ಛರಿಸುತ್ತಿದ್ದರು: “ಪ್ರಮಾಯಾಂತು ಬ್ರಹ್ಮಚಾರಿಣೊ ಸ್ವಾಹಾಃ’- ನನ್ನೆಡೆಗೆ ಜ್ಞಾನ ಜಿಜ್ಞಾಸು ವಿದ್ಯಾರ್ಥಿಗಳು ಎಲ್ಲೆಡೆಯಿಂದ ಬರುವಂತಾಗಲಿ. ಇದು ಋಷಿ ಸದೃಷ ಡಾ| ಎಂ.ಪಿ. ಪೈಯವರ ಮನದಿಂಗಿತ. ವೈದ್ಯಗುರು ಡಾ| ಎಂ.ಪಿ. ಪೈಯವರು ಮುಂದಿನ ಪೀಳಿಗೆಗೆ ಸಹಸ್ರಾರು ಸರ್ಜನ್‌ರನ್ನು ರೂಪಿಸಿಕೊಟ್ಟು ನಮ್ಮಿಂದ ಮರೆಯಾದರು. ಅವರ ಜನ್ಮ ಶತಮಾನೋತ್ಸವದ ಈ ಪುಣ್ಯ ಗಳಿಗೆಯಲ್ಲಿ ಅವರಿಗೆ ಗೌರವಪೂರ್ವ ನಮನ.
ಕಾಲೇಜು ಕಟ್ಟಿದ ಕೀರ್ತಿಮಂಗಳೂರಿನ ಬಾವುಟಗುಡ್ಡ ರಸ್ತೆಯಲ್ಲಿರುವ ಕೆಎಂಸಿ ಕಾಲೇಜು ಕಟ್ಟಡವನ್ನು ಕಟ್ಟುವ ಮತ್ತು ಅದನ್ನು ವೈದ್ಯಕೀಯ ಕಾಲೇಜಿಗೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಿದ ಕೀರ್ತಿ ಡಾ| ಎಂ.ಪಿ. ಪೈ ಅವರಿಗೆ ಸಲ್ಲಬೇಕು. ಆ ತನಕ ಮಂಗಳೂರಿನ ಕೆಎಂಸಿ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು, ಮೊದಲ ಬಾರಿಗೆ ಇವರ ಪ್ರಯತ್ನದಿಂದ ಅದಕ್ಕೆ ಸ್ವತಂತ್ರ ಅಸ್ತಿತ್ವ ಬಂದಿತು. ಬೋಧನೆಯ ಜತೆಗೆ ಸಂಶೋಧನ ಕ್ಷೇತ್ರದಲ್ಲಿ ಅವರಿಗಿದ್ದ ವಿಶೇಷ ಒಲವು ಕಟ್ಟಡದ ಕೊನೆಯ ಮಹಡಿಯಲ್ಲಿ ಸಂಶೋಧನ ಪ್ರಯೋಗ ಶಾಲೆಯನ್ನು ತಡೆಯುವಂತೆ ಪ್ರೇರೇಪಿಸಿತು. ಅಲ್ಲಿ ಪ್ರಾಣಿಗಳ ಮೇಲಿನ ಶಸ್ತ್ರಕ್ರಿಯೆಯ ಪರಿಣಾಮವನ್ನು ಅಭ್ಯಸಿಸಲು ಅಂದಿನ ಮಂಗಳೂರಿನ ಪ್ರಸಿದ್ಧ ಸರ್ಜನರಲ್ಲಿ ಒಬ್ಬರಾಗಿದ್ದ ಡಾ| ಎಸ್.ಆರ್. ಉಳಾಲ ಅವರನ್ನು ನಿಯೋಜಿಸಿದರು.