ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೂಕ್ಷ್ಮ ಪರಿಸರ ವಲಯದ ವಿಚಾರದಲ್ಲಿ ಬಿಜೆಪಿ ಮುಖಂಡರು ಕರ್ನಾಟಕ ಸರಕಾರದ ವಿರುದ್ಧ ಆರೋಪ ಮಾಡುವ ಮೊದಲು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಸರಕಾರ ಜನಪರವಾಗಿ ಯಾವ ನಿರ್ಧಾರ ಕೈಗೊಂಡಿದೆ ಎನ್ನುವುದನ್ನು ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದರು.
ಡಾ.ಕಸ್ತೂರಿ ರಂಗನ್ ವರದಿ ಪರ ನ್ಯಾಯಾಲಯ ನೀಡಿರುವ ಆದೇಶಕ್ಕೆ ನೇರವಾಗಿ ಬಿಜೆಪಿ ಸಂಸದರು ಹಾಗೂ ಶಾಸಕರೇ ಕಾರಣವೆಂದು ಆರೋಪಿಸಿರುವ ದುರ್ಗಾಪ್ರಸಾದ್ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಮೌನ ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
Advertisement
ತೀವ್ರ ವಿರೋಧದ ನಡುವೆಯೂ ವರದಿ ಜಾರಿಯಾದಲ್ಲಿ ಜಿಲ್ಲೆಯ ಜನ ಮುಂದಿನ ದಿನಗಳಲ್ಲಿ ನಿತ್ಯ ಸೆರೆಮನೆ ಸದೃಶ ಜೀವನ ನಡೆಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಜಿಲ್ಲೆಯನ್ನು ಪ್ರತಿನಿಧಿಸುವ ಸಂಸದರು ಸೇರಿದಂತೆ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಬಿಜೆಪಿ ಸಂಸದರು ಕೇಂದ್ರದಲ್ಲಿ ಅಧಿಕಾರದಲ್ಲಿರುವ ತಮ್ಮದೇ ಸರಕಾರದ ಮೇಲೆ ಒತ್ತಡ ಹೇರಿ ಯಾವ ರೀತಿಯಲ್ಲಿ ಜನಪರ ಕಾಳಜಿ ತೋರಿದ್ದಾರೆ ಎಂದು ಅವರು ಪ್ರಶ್ನಿಸಿದರು.
ಲೋಕಸಭಾ ಚುನಾವಣೆಯ ಸಂದರ್ಭ ಜಿಲ್ಲಾ ಬಿಜೆಪಿ ವಕ್ತಾರರಾಗಿದ್ದ ಅಡ್ಡಂಡ ಸಿ.ಕಾರ್ಯಪ್ಪ ಅವರು ಕೇಂದ್ರದಲ್ಲಿ ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದರೆ ಸೂಕ್ಷ್ಮ ಪರಿಸರ ವಲಯದ ವಿವಾದ ಬಗೆ ಹರಿಯಲಿದೆ ಎಂದು ಭರವಸೆ ನೀಡಿದ್ದರು. ಆದರೆ ಬಿಜೆಪಿಯ ಹುಸಿ ಭರವಸೆಗಳಿಗೆ ಸಾಕ್ಷಿಯಾಗಿದೆ ಎಂದು ದುರ್ಗಾಪ್ರಸಾದ್ ಅವರು ಟೀಕಿಸಿದರು.
Related Articles
Advertisement
ಬಿಜೆಪಿ ಆರೋಪಕ್ಕೆ ಆಕ್ಷೇಪ ಸೂಕ್ಷ್ಮ ಪರಿಸರ ವಲಯದ ವಿವಾದಕ್ಕೆ ಸಂಬಂಧಿಸಿದಂತೆ ಸೂಕ್ತ ರೀತಿಯಲ್ಲಿ ರಾಜ್ಯ ಕಾಂಗ್ರೆಸ್ ಸರಕಾರ ಆಕ್ಷೇಪಣಾ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಿಲ್ಲವೆಂದು ರಾಜ್ಯದ ಬಿಜೆಪಿ ನಾಯಕರು ಆರೋಪಿಸುತ್ತಿದ್ದಾರೆ. ಆದರೆ ರಾಜ್ಯ ಸರಕಾರ ತನ್ನ ಜವಾಬ್ದಾರಿಯನ್ನು ನಿಭಾಯಿಸಿರುವುದಕ್ಕೆ ಸಾಕ್ಷ್ಯಗಳಿವೆ. ಬಿಜೆಪಿ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವುದಕ್ಕಾಗಿ ರಾಜ್ಯ ಸರಕಾರವನ್ನು ಟೀಕಿಸುತ್ತಿದೆ ಎಂದು ಡಾ.ದುರ್ಗಾಪ್ರಸಾದ್ ಆರೋಪಿಸಿದರು.