ಹೊನ್ನಾವರ: “ಉತ್ತರ ಕನ್ನಡ ಜಿಲ್ಲೆಗೆ ಅಖೀಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯನ್ನು ಕೊಡಿ’ – ಇದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಂಗಳೂರಿನ ಹೆಸರಾಂತ ಹೃದಯ ತಜ್ಞ ಡಾ|ಪದ್ಮನಾಭ ಕಾಮತ್ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.
ಉತ್ತರಕನ್ನಡದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಆರಂಭವಾದರೂ ಎಲ್ಲ ಸೌಲಭ್ಯ ಒದಗಿಸಿಕೊಡುವುದು ರಾಜ್ಯ ಸರ್ಕಾರದಿಂದ ಸಾಧ್ಯವಾಗುವುದಿಲ್ಲ. ಹಾಗೆಯೇ ಸಾಕಷ್ಟು ವೈದ್ಯರ ಲಭ್ಯತೆಯೂ ಇಲ್ಲ. ಹೂಡಿದ ಬಂಡವಾಳಕ್ಕೆ ನಿರೀಕ್ಷಿಸಿದಷ್ಟು ಲಾಭ ಬರುವುದು ಕಷ್ಟವಾದ ಕಾರಣ ಖಾಸಗಿಯವರೂ ಸುಸಜ್ಜಿತ ಆಸ್ಪತ್ರೆ ಸ್ಥಾಪನೆಗೆ ಮುಂದೆ ಬರುತ್ತಿಲ್ಲ.
ಇನ್ನು ಹೃದಯಾಘಾತದ ತುರ್ತು ಸಂದರ್ಭ ಸೂಕ್ತ ಚಿಕಿತ್ಸೆ ನೀಡಲು ಜಿಲ್ಲೆಯಲ್ಲಿ ವೈದ್ಯರಿಲ್ಲ, ಕ್ಯಾಥ್ ಲ್ಯಾಬ್ ಇಲ್ಲ. ತಲೆಗೆ ಪೆಟ್ಟಾದರೆ ನರರೋಗ ಚಿಕಿತ್ಸಕರಿಲ್ಲ. ಹೀಗಾಗಿ “ಏಮ್ಸ್ ‘ ಬಂದರೆ ಸರ್ವಸಜ್ಜಿತ ಆಸ್ಪತ್ರೆಯ ಜೊತೆ ಸಂಶೋಧನೆಯೂ ನಡೆಯುತ್ತದೆ ಎನ್ನುವುದು ಅವರ ಅಭಿಪ್ರಾಯ.
ಡಾ|ಕಾಮತ್ ಅವರ ಈ ಟ್ವೀಟ್‌ಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಸೀಬರ್ಡ್‌ಗಾಗಿ ಅರ್ಧ ಕಾರವಾರ ತಾಲೂಕನ್ನು ಜನ ತ್ಯಾಗ ಮಾಡಿದ್ದಾರೆ. ರಾಷ್ಟ್ರೀಯ ಮಹತ್ವದ ವಿದ್ಯುತ್ ಯೋಜನೆಗಳಾದ ಕೈಗಾ, ಕಾಳಿ, ಶರಾವತಿ ಟೇಲರೀಸ್ ಮತ್ತು ಕೊಂಕಣ ರೈಲ್ವೆಗಳಿಗಾಗಿ ಜಿಲ್ಲೆಯ ಜನ ದೊಡ್ಡ ಪ್ರಮಾಣದಲ್ಲಿ ಭೂಮಿ ತ್ಯಾಗ ಮಾಡಿದ್ದಾರೆ. ಸರ್ವಋತು ವಾಣಿಜ್ಯ ಬಂದರು ನಿರ್ಮಾಣವಾಗಲಿದ್ದು, “ಸಾಗರಮಾಲಾ’ ಯೋಜನೆ ಕಾರ್ಯರೂಪಕ್ಕೆ ಬರಲಿದೆ. ಹೀಗಾಗಿ ವೈದ್ಯಕೀಯ ಸಮಗ್ರ ಚಿಕಿತ್ಸೆ ಮತ್ತು ಸಂಶೋಧನೆಗಾಗಿ “ಏಮ್ಸ್’ ಬೇಕು ಎಂದು ಆಗ್ರಹಿಸುವುದರಲ್ಲಿ ನ್ಯಾಯವಿದೆ ಎಂದು ಬಹುತೇಕ ಟ್ವೀಟಿಗರು ತಿಳಿಸಿದ್ದಾರೆ.
ತಾವೊಬ್ಬರೇ ಏನೂ ಮಾಡಲಾಗದು. ಜನತೆ ಈ ಪ್ರಯತ್ನದಲ್ಲಿ ಕೈಜೋಡಿಸಿದರೆ “ಏಮ್ಸ್’ ಕುರಿತ ಬೇಡಿಕೆಗೆ ಬಲ ಬರಲಿದೆ. ಅದನ್ನು ಪ್ರಧಾನಿಗೆ ಮುಟ್ಟಿಸಲು ಸಾಧ್ಯವಾಗುತ್ತದೆ ಎಂದು ಡಾ|ಕಾಮತ್ ಮತ್ತೂಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.