Advertisement

ಹಿಂದುಳಿದ ಕಲಬುರಗಿ ಅಭಿವೃದ್ಧಿಯೇ ಗುರಿ

10:05 AM May 29, 2019 | Team Udayavani |

ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ ಡಾ| ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿ ಸಂಸತ್‌ ಪ್ರವೇಶಿಸಿರುವ ಡಾ| ಉಮೇಶ ಜಾಧವ ಮೇಲೆ ಜನತೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಡಾ| ಖರ್ಗೆ ಅವರಿಗಿಂತ ಒಂದು ಹೆಜ್ಜೆ ಮುಂದೆ ಎನ್ನುವ ನಿಟ್ಟಿನಲ್ಲಿ ಕೆಲಸ ಮಾಡಲಿ ಎನ್ನುವ ಅಭಿಲಾಷೆ ಹೊಂದಿದ್ದಾರೆ. ಜನರ ಅಪೇಕ್ಷೆಗೆ ಅನುಗುಣವಾಗಿ ಹಾಗೂ ಕ್ಷೇತ್ರದಲ್ಲಿ ಅಭಿವೃದ್ಧಿ ಕುರಿತಾಗಿ ಹೊಂದಿರುವ ಯೋಜನೆಗಳನ್ನು ಡಾ| ಜಾಧವ ‘ಉದಯವಾಣಿ’ ಜತೆ ಹಂಚಿಕೊಂಡಿದ್ದಾರೆ.

Advertisement

•ಚುನಾವಣೆಯಲ್ಲಿ ಜನ ನಿಮ್ಮ ನಿರೀಕ್ಷೆ ಮೀರಿ ಆಶೀರ್ವಾದ ಮಾಡಿದ್ದಾರೆ. ಇದಕ್ಕೇನಂತಿರಿ?
– ಹೌದು. ಜನ ನಿರೀಕ್ಷೆ ಮೀರಿ ಬೆಂಬಲಿಸಿದ್ದಾರೆ. ಹೀಗಾಗಿ ಹಗಲಿರಳು ಕೆಲಸ ಮಾಡುವೆ. ಐದು ವರ್ಷದ ಅವಧಿಯುದ್ದಕ್ಕೂ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವೆ. ಮುಖ್ಯವಾಗಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಎಲ್ಲ ಶಾಸಕರ ಹಾಗೂ ಅಧಿಕಾರಿಗಳ ಸಭೆ ಕರೆದು ಸಮಗ್ರ ಕ್ರಿಯಾ ಯೋಜನೆ ರೂಪಿಸಿ, ಅದಕ್ಕೆ ಕೇಂದ್ರದಿಂದ ಅನುದಾನ ತರಲು ಶ್ರಮಿಸಲಾಗುವುದು. ಯುವಕರ ಕೌಶಲ್ಯಾಭಿವೃದ್ಧಿ ಹೆಚ್ಚಳಕ್ಕೆ ಪರಿಶ್ರಮಿಸಲಾಗುವುದು, ಉದ್ಯೋಗಾವಕಾಶ ಕಲ್ಪಿಸಲು ಹೆಚ್ಚಿನ ಆದ್ಯತೆ ನೀಡಲಾಗುವುದು.

50 ವರ್ಷ ಏನೂ ಅಭಿವೃದ್ಧಿ ಮಾಡಿಲ್ಲವೆಂದು ಚುನಾವಣೆಯಲ್ಲಿ ಹೇಳಲಾಗಿದೆ. ಈ ನಿಟ್ಟಿನಲ್ಲಿ ನೀವು ಹಾಕಿಕೊಂಡ ಕಾರ್ಯಗಳೇನು?
-ರೈಲ್ವೆ ವಿಭಾಗೀಯ ಕಚೇರಿ, ವಿಮಾನ ನಿಲ್ದಾಣ ಕಾರ್ಯಾರಂಭ ತಮ್ಮ ಮುಂದಿರುವ ಪ್ರಮುಖ ಕಾರ್ಯಗಳಾಗಿವೆ. ಅದೇ ರೀತಿ ಕಲಬುರಗಿಯಲ್ಲಿ ಸ್ಥಾಪನೆಯಾಗದೇ ಬಹು ದಿನಗಳ ಬೇಡಿಕೆಯಾಗಿ ಉಳಿದಿರುವ ವಿಶೇಷ ಕೈಗಾರಿಕಾ ಆರ್ಥಿಕ ವಲಯ (ನಿಮ್‌l) ಸ್ಥಾಪಿಸುವ ನಿಟ್ಟಿನಲ್ಲಿ ಸಂಬಂಧ ಪಟ್ಟವರೊಡನೆ ಸಮಾಲೋಚಿ ಸಲಾಗುವುದು. ರಸ್ತೆಗಳ ಅಭಿವೃದ್ಧಿ ಸೇರಿದಂತೆ ಇತರ ಕಾರ್ಯಗಳಿಗೆ ಆದ್ಯತೆ ನೀಡಲು ಉದ್ದೇಶಿಸಲಾಗಿದೆ. ಒಟ್ಟಾರೆ ಅಭಿವೃದ್ಧಿ ಕಾರ್ಯವನ್ನು ಮತ್ತೂಬ್ಬರೊಂದಿಗೆ ಹೊಲಿಕೆ ಮಾಡುವುದಿಲ್ಲ. ತಮ್ಮದೇಯಾದ ಯೋಜನೆ ಹೊಂದಲಾಗಿದೆ.

ಚಿಂಚೋಳಿಯಲ್ಲಿ ತಮ್ಮದೇಯಾದ (ಬಂಜಾರ) ಸಮುದಾಯಕ್ಕೆ ಮಣೆ ಹಾಕಿದ್ದೀರಿ ಎನ್ನುವ ಅಪವಾದವಿದೆಯಲ್ಲ?
– ಚಿಂಚೋಳಿ ಕ್ಷೇತ್ರದ ಶಾಸಕನಾಗಿ ಆರು ವರ್ಷಗಳ ಅವಧಿಯಲ್ಲಿ ಎಲ್ಲ ಸಮುದಾಯವರೊಂದಿಗೆ ಒಗ್ಗೂಡಿ ಕೆಲಸ ಮಾಡಿದ್ದರಿಂದಲೇ ಉಪ ಚುನಾವಣೆಯಲ್ಲೂ ಜನತೆ ಆಶೀರ್ವಾದ ಮಾಡಿದ್ದಾರೆ. ಆದರೆ ಚುನಾವಣೆಯಲ್ಲಿ ಗೆಲ್ಲಬೇಕೆಂದವರು ಈ ನಿಟ್ಟಿನಲ್ಲಿ ಆರೋಪ ಮಾಡಿದ್ದರು. ಚಿಂಚೋಳಿ ಕ್ಷೇತ್ರದಲ್ಲಿ ತಾಂಡಾಗಳು ಅತ್ಯಂತ ಹಿಂದುಳಿದಿದ್ದರಿಂದ ರಸ್ತೆ, ಕುಡಿಯುವ ನೀರಿನ ಕಾಮಗಾರಿ ಕೈಗೊಂಡಿದ್ದಕ್ಕೆ ಈ ರೀತಿ ಆಪಾದನೆ ಮಾಡಿದ್ದಾರೆ. ಆದರೆ ತಮ್ಮ ರಾಜಕೀಯ ಜೀವನುದುದ್ದಕ್ಕೂ ಒಂದೇ ಸಮುದಾಯಕ್ಕೆ ಮಣೆ ಹಾಕುವುದಿಲ್ಲ. ಎಲ್ಲರನ್ನು ಜತೆ-ಜತೆಯಲ್ಲಿ ಕರೆದುಕೊಂಡು ಹೋಗಲಾಗುವುದು.

•ಚಿಂಚೋಳಿಯಲ್ಲಿ ಲಿಂಗಾಯತರು ಬಿಜೆಪಿಗೆ ಮತ ಹಾಕಿಲ್ಲವೆಂದು ಮಾಜಿ ಸಚಿವ ಬಾಬುರಾವ ಚಿಂಚನಸೂರ ಹೇಳುತ್ತಿದ್ದಾರಲ್ಲ?
– ಮಾಜಿ ಸಚಿವ, ಹಿರಿಯ ನಾಯಕ ಬಾಬುರಾವ ಚಿಂಚನಸೂರ ಹೇಳಿಕೆ ತಿರುಚಲಾಗಿದೆ. ಕೆಲವರು ತಮ್ಮ ಅನುಕೂಲವಾಗುವ ರೀತಿಯಲ್ಲಿ ಹೇಳಿಕೆಯನ್ನು ವೈರಲ್ ಮಾಡಿದ್ದಾರೆ. ವೀರಶೈವ-ಲಿಂಗಾಯತ ಸಮುದಾಯ ಬಗ್ಗೆ ಅಪಾರ ನಂಬಿಕೆ ಹೊಂದಲಾಗಿದೆ. ಒಂದು ವೇಳೆ ನೋವಾಗಿದ್ದರೆ ಕ್ಷಮೆ ಕೋರುವೆ ಎಂದಿದ್ದಾರೆ. ಚಿಂಚೋಳಿಯಲ್ಲಿ ಎಲ್ಲ ಸಮುದಾಯ ಬೆಂಬಲಿಸಿದ್ದರಿಂದಲೇ ತಮ್ಮ ಮಗ ಎಂಟು ಸಾವಿರ ಮತಗಳಿಂದ ಗೆಲ್ಲಲು ಸಾಧ್ಯವಾಗಿದೆ.

Advertisement

ಚುನಾವಣೆ ನಂತರ ಈಗ ಹಳ್ಳಿಗಳಲ್ಲಿ ಸವರ್ಣಿಯರ ಹಾಗೂ ದಲಿತರ ನಡುವೆ ಸಂಘರ್ಷಕ್ಕೆ ಕಾರಣವಾಗುತ್ತಿದೆಯಲ್ಲ?
-ಚುನಾವಣೆಯಲ್ಲಿ ಹಲವರು ತಮ್ಮ ಸಿದ್ಧಾಂತಗಳಿಗೆ ಅನುಗುಣವಾಗಿ ಕೆಲಸ ಮಾಡುತ್ತಾರೆ. ಆದರೆ ಅದನ್ನು ಚುನಾವಣೆ ನಂತರ ವೈಮನಸ್ಸು ಇಟ್ಟುಕೊಂಡು ಕಾನೂನು ಕೈಗೆತ್ತಿಕೊಳ್ಳುವುದು ತಪ್ಪು. ಯಾವುದೇ ಸಮುದಾಯದವರು ಚುನಾವಣೆ ಹಿನ್ನೆಲೆಯನ್ನಿಟ್ಟುಕೊಂಡು ಸಂಘರ್ಷಕ್ಕೆ ಇಳಿಯುವುದು ಹಾಗೂ ಕಾನೂನು ಕೈಗೆತ್ತಿಕೊಳ್ಳುವುದು ಕಾನೂನಿಗೆ ವಿರುದ್ದವಾಗಿದೆ. ಕಾನೂನು ಕೈಗೆತ್ತಿಕೊಂಡರೆ ಸರ್ಕಾರ ಅದರ ವಿರುದ್ಧ ಕ್ರಮ ಕೈಗೊಳ್ಳುತ್ತದೆ. ಆದ್ದರಿಂದ ಯಾರೂ ಸಮುದಾಯ ಸಂಘರ್ಷಕ್ಕೆ ಇಳಿಯಬಾರದೆಂದು ಸರ್ವರಲ್ಲಿ ಕೋರುವೆ.

ಕೇಂದ್ರದಲ್ಲಿ ಸಚಿವರಾಗುವ ಭರವಸೆ ಇದೆಯಾ?
-ಸಚಿವ ಸ್ಥಾನ ನೀಡಿ ಎಂದು ತಾವಂತೂ ಕೇಳಿಲ್ಲ. ಒಂದು ವೇಳೆ ನೀಡಿದರೆ ಸಮರ್ಥವಾಗಿ ನಿರ್ವಹಿಸುವೆ. ಸಚಿವ ಸ್ಥಾನ ನೀಡಿದರೆ ಖುಷಿ. ಒಂದು ವೇಳೆ ಸಿಗದಿದ್ದರೂ ಯಾವುದೇ ಬೇಜಾರಿಲ್ಲ. ನರೇಂದ್ರ ಮೋದಿ ಅವರ ಪ್ರಮಾಣಿಕತೆ, ಅಭಿವೃದ್ಧಿ ಕಾರ್ಯ ನೋಡಿ ಮತದಾರರು ಆಶೀರ್ವಾದ ಮಾಡಿದ್ದಾರೆ. ಸಚಿವರಾದರೆ ಒಂದಷ್ಟು ಕೆಲಸಗಳನ್ನು ಹೆಚ್ಚಿಗೆ ಮಾಡಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next