ತೆಕ್ಕಟ್ಟೆ: ಕೈಗಾರಿಕೋದ್ಯಮ, ಕೃಷಿ, ಹೈನುಗಾರಿಕೆ ಮತ್ತು ಸಮಾಜ ಸೇವೆಯನ್ನು ಪರಿಗಣಿಸಿ ಮಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೆಟ್ ಪದವಿ ಪುರಸ್ಕೃತ ರಾದ ಮೂಡುಬಿದಿರೆಯ ಎಸ್‌ಕೆಎಫ್ ಎಲಿಕ್ಸರ್ ಇಂಡಿಯಾ ಪ್ರೈ. ಲಿ.ಯ ಚೇರ್‌ಮನ್ ಡಾ| ಜಿ. ರಾಮಕೃಷ್ಣ ಆಚಾರ್ ಅವರಿಗೆ ಯಡಾಡಿ ಮತ್ಯಾಡಿ, ಹೊಂಬಾಡಿ ಮಂಡಾಡಿ ಮತ್ತು ಮೊಳಹಳ್ಳಿಯ ಸಮಸ್ತ ಗ್ರಾಮಸ್ಥರು ನಡೆಸಿದ ಹುಟ್ಟೂರ ಸಮ್ಮಾನ ಶನಿವಾರ ಯಡಾಡಿ ಮತ್ಯಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಸಮ್ಮಾನಿಸಿ ಮಾತನಾಡಿ, ಯಶಸ್ವಿ ಜೀವನಕ್ಕೆ ಬಡತನ ತೊಡಕಾಗದು. ಬದಲಾಗಿ ನಮ್ಮಲ್ಲಿ ನಮ್ಮ ಪರಿಶ್ರಮ ಮತ್ತು ಗುರಿ ಬಹಳ ಮುಖ್ಯ ವಾಗಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ಹುಟ್ಟಿದ ಡಾ| ಜಿ. ರಾಮಕೃಷ್ಣ ಆಚಾರ್ ಅವರ ಸಾಧನೆ ಎಲ್ಲರಿಗೂ ಸ್ಫೂರ್ತಿದಾಯಕ. ಇಂತಹ ಸಾಧಕರು ಗ್ರಾಮದ ಅಭಿವೃದ್ಧಿಗೂ ಶ್ರಮಿಸುವಂತಾಗಲಿ ಎಂದು ಹೇಳಿದರು.
ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಮಾತನಾಡಿ, ನಮ್ಮ ಯೋಚನೆ ಗಳು ಯೋಜನೆಗಳಾಗಿ ರೂಪಿತ ವಾದಾಗ ಮಾತ್ರ ಯಶಸ್ಸಿನ ಹಾದಿಯಲ್ಲಿ ಸಾಗಬಹುದು ಎಂದರು,
ಚಿತ್ರನಟ ರಮೇಶ್ ಅರವಿಂದ್ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕರಾವಳಿಗೆ ಬರುವುದೆಂದರೆ ನನಗೆ ಏನೋ ಸಂತಸ. ಇಲ್ಲಿ ಅದೆಷ್ಟೋ ಸಿಹಿ ನೆನಪುಗಳಿವೆ. ಸಾಧನೆಯ ಹಾದಿಯಲ್ಲಿ ಸಾಗುವಾಗ ಸಮಸ್ಯೆ ಗಳು ಬಂದಾಗ ಅವುಗಳನ್ನು ಬೇರು ಸಹಿತ ಕಿತ್ತು ಹಾಕಬೇಕು. ಜತೆಗೆ ಮನಸ್ಸಿ ನಲ್ಲಿರುವ ಇತಿ ಮಿತಿಗಳನ್ನು ಒಡೆದು ಹೊರಬೇಕು. ಈ ನಿಟ್ಟಿನಲ್ಲಿ ನಮ್ಮ ಯೋಚನೆಯಲ್ಲಿಯೇ ನಮ್ಮ ವ್ಯಕ್ತಿತ್ವ ರೂಪಿತವಾಗಿದ್ದು, ಒಳ್ಳೆಯ ಮನಸ್ಸು ಮತ್ತು ಕೌಶಲ ಬಹಳ ಮುಖ್ಯವಾಗಿದೆ ಎಂದು ಹೇಳಿದರು.
ಸಮ್ಮಾನ ಸಮಿತಿಯ ಅಧ್ಯಕ್ಷ ಬಿ. ಅರುಣ್ ಕುಮಾರ್ ಹೆಗ್ಡೆ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಸಮ್ಮಾನ ಸಮಿತಿಯ ಗೌರವಾಧ್ಯಕ್ಷ ಉದ್ಯಮಿ ಎಂ. ದಿನೇಶ್ ಹೆಗ್ಡೆ ಮೊಳಹಳ್ಳಿ, ಲಯನ್ ಮಾಜಿ ರಾಜ್ಯಪಾಲ ಎನ್.ಎಂ. ಹೆಗ್ಡೆ , ಸವಿತಾ ರಾಮಕೃಷ್ಣ ಆಚಾರ್, ತೇಜಸ್ ಆಚಾರ್, ಪ್ರಜ್ವಲ್ ಆಚಾರ್, ಕಲರ್ ಕನ್ನಡ ವಾಹಿನಿಯ ಗಿಚ್ಚಿಗಿಲಿಗಿಲಿಯ ಜಾಹ್ನವಿ, ಹೊಂಬಾಡಿ ಮಂಡಾಡಿ ಗ್ರಾ.ಪಂ. ಅಧ್ಯಕ್ಷೆ ಜಯಂತಿ ಶೆಟ್ಟಿ, ಗುಡ್ಡೆಯಂಗಡಿ ಯಡಾಡಿ ಮತ್ಯಾಡಿ ಸ.ಹಿ.ಪ್ರಾ. ಶಾಲೆಯ ಮುಖ್ಯೋಪಾ ಧ್ಯಾಯಿನಿ ರಮಣಿ ಶೆಟ್ಟಿ ಉಪಸ್ಥಿತರಿದ್ದರು.
ಮಂಗಳೂರು ಶ್ರೀ ರಾಮಕೃಷ್ಣ ಕಾಲೇಜಿನ ಪ್ರಾಂಶುಪಾಲ ಪ್ರೊ| ಎಂ. ಬಾಲಕೃಷ್ಣ ಶೆಟ್ಟಿ ಅಭಿನಂದನಾ ಭಾಷಣಗೈದರು. ಸಹ ಕಾರ್ಯದರ್ಶಿ ಎನ್. ಸತೀಶ ಅಡಿಗ ಮತ್ಯಾಡಿ ಪ್ರಶಸ್ತಿ ಪತ್ರ ವಾಚಿಸಿ, ಹಿರಿಯ ಪತ್ರಕರ್ತ ಕೆ.ಸಿ. ರಾಜೇಶ್ ನಿರೂಪಿಸಿ, ಕಾರ್ಯದರ್ಶಿ ಉಮೇಶ್ ಶೆಟ್ಟಿ ವಂದಿಸಿದರು. ವಿದ್ವಾನ್ ದಾಮೋದರ ಶರ್ಮ ಕಾರ್ಯಕ್ರಮ ಸಂಘಟಿಸಿದ್ದರು.