Advertisement

ಕಾಸರಗೋಡಿನ ಸಾಹಿತ್ಯ ಲೋಕ:ಡಾ|ಹರಿಕೃಷ್ಣ ಭರಣ್ಯ

06:40 AM May 07, 2018 | |

ಗಡಿನಾಡು-ಕಾಸರಗೋಡು ಬಹುಭಾಷೆಗಳನ್ನು ಬಲ್ಲ ನೆಲ. ಇಲ್ಲಿ ಮನೆಮಾತು, ಅಬ್ಬೆಮಾತು ಬೇರೆಯಾಗಿದ್ದು ಕನ್ನಡ ಸಾಹಿತ್ಯ ಲೋಕಕ್ಕೆ ಇತರ ಸೋದರ ಭಾಷೆಗಳಲ್ಲೂ ಸಂಶೋಧನೆ ನಡೆಸಿ ಕೃತಿಗಳನ್ನು ರಚಿಸಿ ಉತ್ತುಂಗ ಸ್ಥಾನಕ್ಕೇರಿದವರು ಇಲ್ಲಿದ್ದಾರೆ. ರಾಷ್ಟ್ರಕವಿ ಗೋವಿಂದ ಪೈ, ನಾಡೋಜ ಕಯ್ನಾರ ಕಿಞ್ಞಣ್ಣ ರೈ, ಮಂಜೇಶ್ವರ ಗಣಪತಿ ಐಗಳು ಮೊದಲಾದ ಸಾಹಿತ್ಯ ದಿಗ್ಗಜರುಗಳ ಸಾಲಿನಲ್ಲಿ ಬರುವಂತಹ ಹೆಸರು ಹಳೆ ಗನ್ನಡದ ಅನನ್ಯ ಸಾಹಿತಿ, ಬಹುಭಾಷಾ ವಿದ್ವಾಂಸ ಡಾ| ಹರಿಕೃಷ್ಣ ಭರಣ್ಯ ಅವರದ್ದು.

Advertisement

ಬಾಲ್ಯ-ವಿದ್ಯಾಭ್ಯಾಸ : ಡಾ| ಹರಿಕೃಷ್ಣ ಭರಣ್ಯರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕು ಪಾಣಾಜೆ ಭರಣ್ಯ ಎಂಬಲ್ಲಿ ಪ್ರತಿಷ್ಠಿತ ಹವ್ಯಕ ಮನೆತನದ ದಿ| ರಾಮಕೃಷ್ಣ ಭಟ್ಟ-ಶಂಕರಿ ಅಮ್ಮ ಅವರ ಆರು ಮಂದಿ ಮಕ್ಕಳಲ್ಲಿ ದ್ವಿತೀಯ ಪುತ್ರರಾಗಿ 1951ರ ಮೇ 16ರಂದು ಜನಿಸಿದರು. ಭರಣ್ಯ ಮನೆತನದ ಮೂಲ ತರವಾಡು ಸ್ಥಾನವು ಕುಂಬಳೆ ಸಮೀಪದ ಕಾನದಬಯಲಿನ ಮೇಣ ಆಗಿದೆ. ಬಾಲಕೃಷ್ಣ ಭಟ್ಟ (ಕೃಷಿಕರು), ರಮೇಶ ಭಟ್ಟ (ಗುಜರಾತಿನ ಸೂರತ್‌ನಲ್ಲಿ ಉದ್ಯೋಗಿ) ಅವರು ಸಹೋದರರು. ಜಯಲಕ್ಷಿ$¾, ಸಾವಿತ್ರಿ, ಮಾಲಿನಿ ಸಹೋದರಿಯರು.

ಡಾ| ಹರಿಕೃಷ್ಣ ಭರಣ್ಯರು ಕನ್ನಡ ಸ್ನಾತ್ತಕೋತ್ತರ ಪದವಿಯನ್ನು ಕಾಸರ ಗೋಡಿನ ಸರಕಾರಿ ಕಾಲೇಜಿನಲ್ಲಿ ಪಡೆದರು.ವೃತ್ತಿ-ಜೀವನ: ಸ್ನಾತಕೋತ್ತರ ಪದವಿ ವ್ಯಾಸಂಗದ ಮೊದಲು ಡಾ| ಭರಣ್ಯರು ಒಂದು ವರ್ಷ ರಾಷ್ಟ್ರೀಯ  ಸ್ವಯಂ ಸೇವಕ ಸಂಘದ ಕಾರ್ಯದಲ್ಲಿ ತೊಡಗಿಸಿ ಕೊಂಡಿದ್ದರು. ಮುಂದೆ ಸಂಶೋಧನೆಗಾಗಿ ಮದರಾಸು ವಿಶ್ವವಿದ್ಯಾಲಯವನ್ನು ಸೇರಿದ ಅವರು ಡಾ| ಕೆ. ಕುಶಾಲಪ್ಪ ಗೌಡರ ಮಾರ್ಗದರ್ಶನದಲ್ಲಿ “ಹೊಸಗನ್ನಡ ಸಾಹಿತ್ಯದ ಆರಂಭ’ ಎಂಬ ವಿಷಯದ ಮೇಲೆ ಎಂ.ಫಿಲ್‌. ಪದವಿ ಗಳಿಸಿದರು. ಅನಂತರ ಮಧುರೆ ಕಾಮರಾಜ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಉಪನ್ಯಾಸಕರಾಗಿ ಸೇವೆಗೆ ತೊಡಗಿದ ಅವರು “ಹೊಸಗನ್ನಡ ಸಾಹಿತ್ಯದ ಉಗಮ ಮತ್ತು ವಿಕಾಸ’ ಎಂಬ ವಿಷಯದ ಮೇಲೆ ಪಿ.ಎಚ್‌.ಡಿ. ಪದವಿಯನ್ನು ಪಡೆದರು. ಆಮೇಲೆ ಅದೇ ವಿಶ್ವವಿದ್ಯಾಲಯದಲ್ಲಿ ಪ್ರವಾಚಕ-ಪ್ರಾಧ್ಯಾಪಕ-ವಿಭಾಗ ಮುಖ್ಯಸ್ಥ, ವಿಶ್ವವಿದ್ಯಾಲಯದ ಸೆನೆಟ್‌ ಅಕಾಡೆಮಿಕ್‌ ಕೌನ್ಸಿಲ್‌ ಸದಸ್ಯ, ಭಾರತೀಯ ಭಾಷಾ ನಿಕಾಯದ ಅಧ್ಯಕ್ಷ ಹೀಗೆ ವೃತ್ತಿ ಜೀವನದ ಒಂದೊಂದೇ ಮೆಟ್ಟಿಲುಗಳನ್ನೇರಿ 2010ರಲ್ಲಿ ನಿವೃತ್ತ¤ರಾದರು. ನಿವೃತ್ತಿಯ ಅನಂತರ ತಮ್ಮ ಬರವಣಿಗೆ, ಸಾಹಿತ್ಯ, ಪ್ರೀತಿಯನ್ನು ನೂರ¾ಡಿಸಿಕೊಂಡು ಮೂಲ ತರವಾಡು ಊರಿನ ಸಮೀಪದ ನಾರಾಯಣ ಮಂಗಲದಲ್ಲಿ ನೆಲೆಸಿರುತ್ತಾರೆ.

ಡಾ| ಭರಣ್ಯರಿಗೆ  ಪ್ರಾಥಮಿಕ ವಿದ್ಯಾಭ್ಯಾಸದ ವೇಳೆಯಲ್ಲೇ ಕಥೆ-ಕವನಗಳನ್ನು ಓದುವ ಹುಚ್ಚಿನ ಜತೆಗೆ ಬರೆಯುವ ಹವ್ಯಾಸವೂ ಇತ್ತು. ಯಕ್ಷಗಾನ, ಚಲನಚಿತ್ರ ಗೀತೆಗಳು ಅವರಿಗೆ ಕುತೂಹಲಕಾರಿಯಾಗಿದ್ದವು. ಬಾಲ್ಯದಿಂದಲೇ ಅವರು ಶ್ರೇಷ್ಠ ಸಾಹಿತಿಗಳ ಕೃತಿಗಳನ್ನು ಓದಿ ಬೆಳೆದವರು. ಡಾ| ಭರಣ್ಯರು ಹೆ„ಸ್ಕೂಲ್‌ ತರಗತಿಯಲ್ಲಿರುವಾಗ ಅವರ ಪ್ರಥಮ ಕಥೆ “ತಂಗಿ ನಕ್ಕಾಗ’ ಮಂಗಳೂರಿನ ಜನಪ್ರಿಯ ದೈನಿಕವಾಗಿದ್ದ ನವಭಾರತ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅನಂತರ ಮುಂದುವರಿದು ಕಾದಂಬರಿ, ಕತೆ, ಕವನ, ನಾಟಕ, ವಿಮರ್ಶೆ, ಸಂಶೋಧನೆ, ವ್ಯಕ್ತಿ ಚರಿತ್ರೆ, ಹರಟೆ ಸೇರಿದಂತೆ ಸುಮಾರು 37ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುತ್ತಾರೆ. ಸುಮಾರು 100ಕ್ಕಿಂತಲೂ ಹೆಚ್ಚು ಸಂಶೋಧನೆ, ವಿಮರ್ಶೆ, ತೌಲನಿಕ ಇತ್ಯಾದಿ ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ, ನಿಯತಕಾಲಿಕಗಳಲ್ಲಿ ಮತ್ತು ಸ್ಮರಣ ಸಂಚಿಕೆಗಳಲ್ಲಿ ಪ್ರಕಟ ವಾಗಿವೆ. ಹವ್ಯಕ ಕನ್ನಡ, ಕನ್ನಡ, ತಮಿಳು, ಮಲಯಾಳ, ತುಳು, ಹಿಂದಿ, ಆಂಗ್ಲ ಭಾಷೆಗಳಲ್ಲಿ ಪಾಂಡಿತ್ಯ ಗಳಿಸಿರುವ ಡಾ| ಭರಣ್ಯರವರಿಗೆ ಫೋಟೋಗ್ರಫಿಯಲ್ಲೂ ಆಸಕ್ತಿ. 

ಡಾ| ಭರಣ್ಯರ ಮಾರ್ಗದರ್ಶನದಲ್ಲಿ ಎಂಟು ಮಂದಿ ವಿದ್ಯಾರ್ಥಿಗಳು ಪಿ.ಎಚ್‌.ಡಿ. ಪದವಿ ಮತ್ತು ಹತ್ತು ಮಂದಿ ವಿದ್ಯಾರ್ಥಿಗಳು ಎಂ.ಫಿಲ್‌. ಪದವಿಯನ್ನು ಪಡೆದಿರುತ್ತಾರೆ.

Advertisement

ಪ್ರಶಸ್ತಿ ಗೌರವಗಳು:  ಮಧುರೈ- ಕರ್ನಾಟಕ ಸಂಘದ ಅಧ್ಯಕ್ಷ ಸ್ಥಾನ, ಬೆಂಗಳೂರಿನ ಅಖೀಲ ಹವ್ಯಕ ಮಹಾ ಸಭೆಯ ಹವಿಗನ್ನಡ ಪ್ರತಿಷ್ಠಾನದ ಅಧ್ಯಕ್ಷ ಸ್ಥಾನ ಮೊದಲಾದ ಉನ್ನತ ಸ್ಥಾನಗಳೊಂದಿಗೆ ನಾಡಿನ ಅನೇಕ ಸಂಘ ಸಂಸ್ಥೆಗಳು ಡಾ| ಭರಣ್ಯರನ್ನು ಗೌರವಿಸಿ ಸಮ್ಮಾನಿಸಿವೆ. 2004ರ ಹವಿಗನ್ನಡ ಸೂರಿ ಪ್ರಶಸ್ತಿ, 2009ರಲ್ಲಿ ಚಿತ್ರದುರ್ಗದಲ್ಲಿ ನಡೆದ 75ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮಾನ, 2006ರಲ್ಲಿ ಪ್ರಥಮ ಹವಿಗನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಮುಳಿಯ ತಿಮ್ಮಪ್ಪಯ್ಯ ಪ್ರಶಸ್ತಿ ಮೊದಲಾದ ಉನ್ನತ ಪ್ರಶಸ್ತಿಗಳು ಡಾ| ಭರಣ್ಯರಿಗೆ ಲಭ್ಯವಾಗಿವೆ. ಅವರ ಅಭಿಮಾನಿಗಳು, ವಿದ್ಯಾರ್ಥಿಗಳು ಸಾರ್ಥಕ ರೀತಿಯಲ್ಲಿ ಅಭಿನಂದಿಸಿ “ಭರಣ್ಯ’ ಎಂಬ ಅಭಿನಂದನಾ ಸಂಪುಟವನ್ನು ಸಮರ್ಪಿಸಿರುತ್ತಾರೆ. ಡಾ| ಭರಣ್ಯರ ಕುರಿತಾಗಿ ರವಿಶಂಕರ ಜಿ.ಕೆ. ಅವರು ಸಂಪಾದಿಸಿರುವ “ಹವಿಗನ್ನಡದ ಅನನ್ಯ ಸಾಹಿತಿ, ವಿದ್ವಾಂಸ ಡಾ|ಹರಿಕೃಷ್ಣ ಭರಣ್ಯ’ ಎಂಬ ಹೊತ್ತಗೆಯನ್ನು ಕಾಂತಾ ವರದ ಕನ್ನಡ ಸಂಘವು “ನಾಡಿಗೆ ನಮಸ್ಕಾರ’ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥಮಾಲೆಯಲ್ಲಿ ಪ್ರಕಟಿಸಿದೆ.

ಕುಂಬಳೆ ಸೀಮೆಯ ಕೋಣಮ್ಮೆ ಕೀರ್ತಿಶೇಷ ಕೃಷ್ಣ ಭಟ್ಟ-ದೇವಕಿ ಅಮ್ಮನವರ ಪುತ್ರಿ ಶ್ಯಾಮಲಾ ಡಾ| ಭರಣ್ಯರ ಸಹಧರ್ಮಿಣಿ. ಈ ದಂಪತಿಗೆ ಏಕಮಾತ್ರ ಪುತ್ರ ರಾಮಕೃಷ್ಣ ಅವರು ಮಂಗಳೂರಿನಲ್ಲಿ ಸೊÌàದ್ಯೋಗಿ.

ಡಾ| ಭರಣ್ಯರ ಕೃತಿಗಳು 
ಪ್ರವೇಶ, ಸಂಶೋಧನಾ ವಿಭಾಗ, ಹೊಸಗನ್ನಡ ಸಾಹಿತ್ಯದ ಉಗಮ ಮತ್ತು ವಿಕಾಸ, ಈ ನೆಲದ ಕಂಪು, ಕಾವೇರಿಕಾನ ಕೃಷ್ಣ ಭಟ್ಟರ ಬದುಕು-ಬರಹ, ಹವ್ಯಕಾಧ್ಯಯನ, ತಮಿಳು ನೆಲ, ತುಳುವ ಮಂದಾರ, ತುಳು ನುಡಿ ಸಂಸ್ಕೃತಿ, ಕನ್ನಡ ನಾಟಕದ ಉಗಮ ಮತ್ತು ವಿಕಾಸ (ಸಂಶೋಧನೆ-ಅಧ್ಯಯನ), ಕುತುಬ್‌ ಮಿನಾರ್‌ (ಕತೆಗಳು), ಪ್ರತಿಸೃಷ್ಟಿ, ಪ್ರತಿಸ್ವರ್ಗ, ಮೂಡು ಮಜಲು, ದೊಡ್ಡಜಾಲು (ಕಾದಂಬರಿಗಳು), ಗೆಣಸಲೆ, ಸಾವಿರದೊಂದು ಗೆಣಸಲೆ (ಹವ್ಯಕ ಮುಕ್ತಕಗಳು), ಹೀಂಗೊಂದು ಮದುವೆ, ಬದ್ಧ, ಪರಶುರಾಮ ಕ್ಷೇತ್ರೇ ಗೋಕರ್ಣ ಮಂಡಲೇ (ನಾಟಕಗಳು), ಪಾಲು ಪಂಚಾಯತಿಕೆ (ಧ್ವನಿ ಸುರುಳಿ), ಮಧುರೆಯ ನೆನಪುಗಳು, ನೆನಪೀಗ ಮಧುರ
(ಅನುಭವ ಕಥನಗಳು), ರಸಾಯನ, ಎಂಬಂತೆ ಮತ್ತು ಇತರ (ಲಲಿತ ಪ್ರಬಂಧಗಳು), ಮಧುರ, ಕದಂಬ, ನುಡಿ ಸಂಸ್ಕೃತಿ (ಇತರರೊಂದಿಗೆ ಸಂಪಾದಿತ), ಬಚ್ಚಿರೆ ಬಜ್ಜೆ (ತುಳು ಲಘು ಪ್ರಬಂಧಗಳ ಸಂಕಲನ), ನಾಲನೆ ಬುಲೆ (ತುಳು ಕಾದಂಬರಿ), ಮನ ಮಾನಸ, ತಗಳಿ ಶಿವಶಂಕರ ಪಿಳ್ಳೆ, ಡಾ| ಸಬಿತಾ ಮರಕಿಣಿ, ಹವಿಗನ್ನಡದ ಮಹಾಕವಿ ಬಾಳಿಲ ಪರಮೇಶ್ವರ ಭಟ್‌ (ವ್ಯಕ್ತಿಚಿತ್ರಣಗಳು), ಪೊಲಿ (ತುಳು ಮುಕ್ತಕಗಳು), ತಿರುಕುರಳ್‌ (ತುಳು ಅನುವಾದ), ದ್ರಾವಿಡ ಅಧ್ಯಯನಗಳು. ಇವರ ದೊಡ್ಡಜಾಲು ಹವ್ಯಕ ಕಾದಂಬರಿಯು ತಮಿಳಿಗೆ ಅನುವಾದಗೊಂಡಿದೆ.

 ಲೇ:ಕೇಳು ಮಾಸ್ತರ್‌ ಅಗಲ್ಪಾಡಿ           

Advertisement

Udayavani is now on Telegram. Click here to join our channel and stay updated with the latest news.

Next