Advertisement

Bengaluru: ವಿಶ್ವ ಒಕ್ಕಲಿಗರ ಮಠಕ್ಕೆ ಡಾ.ಎಚ್‌.ಎಲ್.ನಾಗರಾಜ್‌ ಉತ್ತರಾಧಿಕಾರಿ

02:47 PM Dec 14, 2024 | Team Udayavani |

ಬೆಂಗಳೂರು: ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠಕ್ಕೆ ಉತ್ತರಾಧಿಕಾರಿಯಾಗಿ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ, ಸ್ವಯಂ ನಿವೃತ್ತಿ ಪಡೆದಿರುವ ಡಾ.ಎಚ್‌.ಎಲ್.ನಾಗರಾಜ್‌(49) ಅವರನ್ನು ನೇಮಿಸಲಾಗಿದೆ. ಶನಿವಾರ ಬೆಳಗ್ಗೆ ವಿಧಿ ವಿಧಾನದೊಂದಿಗೆ ಪೀಠಾರೋಹಣ ಮಾಡಲಿದ್ದಾರೆ ಎಂದು ಮಠದ ಪೀಠಾಧ್ಯಕ್ಷ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ತಿಳಿಸಿದರು.

Advertisement

ಮಠದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಈ ವಿಷಯ ತಿಳಿಸಿದ ಅವರು, ನನಗೆ ಈಗ 81 ವರ್ಷ ಆಗಿದೆ. ಹೀಗಾಗಿ, ನಮ್ಮ ಮಠದೊಂದಿಗೆ ಅನೇಕ ವರ್ಷಗಳಿಂದ ಸಂಪರ್ಕದಲ್ಲಿರುವ, ಸೇವಾ ಕಾರ್ಯಗಳನ್ನು ಮಾಡುತ್ತ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ನಾಗರಾಜ್‌ ಅವರನ್ನು ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಲಾಗಿದೆ. ಈ ಆಯ್ಕೆಗೆ ಮಠದ ಟ್ರಸ್ಟಿನ ಎಲ್ಲಾ ಸದಸ್ಯರು ಸರ್ವಾನುಮತ ದಿಂದ ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಿದರು.

ಮಠದ ಉತ್ತರಾಧಿಕಾರಿಯಾಗಿ ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಗಳನ್ನು “ನಾಥ’ ಪರಂಪರೆಯಂತೆ ಮುನ್ನಡೆಸಿಕೊಂಡು ಹೋಗಲಿದ್ದಾರೆ ಎಂದು ತಿಳಿಸಿದರು.

content-img

ಶನಿವಾರ (ಡಿ.14) ಸಂಜೆ ಪೀಠಾರೋಹಣ ಅಂಗವಾಗಿ ವಿಧಿ ವಿಧಾನಗಳು, ಕಾರ್ಯಕ್ರಮಗಳು ಭಾನುವಾರ ಸಂಜೆವರೆಗೂ ಜರುಗಲಿವೆ. 10,000 ಮಂದಿ ಭಾಗವಹಿಸುವ ನಿರೀಕ್ಷೆ ಇದೆ.ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ದೇಶೀಕೇಂದ್ರ, ನಂಜಾವಧೂತ ಸ್ವಾಮೀಜಿ, ಸಿದ್ಧಲಿಂಗ ಸ್ವಾಮೀಜಿ, ಶಿವ ರಾತ್ರಿ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಹಲವು ಮಠಾಧೀಶರ ಸಮ್ಮುಖದಲ್ಲಿ ಸನ್ಯಾಸ ದೀಕ್ಷೆ ನಡೆಯಲಿದೆ ಎಂದರು.

Advertisement

ಸರ್ಕಾರಿ ಹುದ್ದೆ ತೊರೆದು ಸನ್ಯಾಸ ಸ್ವೀಕರಿಸಿದ ಡಾ.ನಾಗರಾಜ್‌

ತುಮಕೂರು ಜಿಲ್ಲೆ ಕುಣಿಗಲ್‌ ತಾಲೂಕಿನ ಹೊನ್ನೇನಹಳ್ಳಿ ಗ್ರಾಮದ ಲಿಂಗಯ್ಯ ಮತ್ತು ಗಂಗಮ್ಮನವರ ಪುತ್ರರಾಗಿರುವ ನಾಗರಾಜ್‌ ಅವರು ಪ್ರಾಥಮಿಕ ಶಿಕ್ಷಣವನ್ನು ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಮುಗಿಸಿದ್ದಾರೆ. ಜತೆಗೆ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಮೈಕ್ರೋಫೈನಾನ್ಸ್‌ ವಿಷಯದಲ್ಲಿ (ಪಿಎಚ್‌ಡಿ) ಪದವಿ ಪಡೆದಿದ್ದಾರೆ. ಮಠದಲ್ಲಿ ವ್ಯಾಸಂಗ ಮಾಡುವಾಗ ಅವರಿಗೆ ಧಾರ್ಮಿಕ ಕಾರ್ಯಗಳ ಬಗ್ಗೆ ಆಸಕ್ತಿ ಬೆಳೆದಿತ್ತು. ಡಾ.ಶಿವಕುಮಾರ ಸ್ವಾಮೀಜಿ ಅವರ ಆದರ್ಶ, ಬಾಲಗಂಗಾಧರನಾಥ ಸ್ವಾಮೀಜಿ ಸೇವಾ ಕಾರ್ಯಗಳಿಂದ ಪ್ರಭಾವಿತರಾಗಿ ಸನ್ಯಾಸತ್ವ ಮತ್ತು ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಸೇವೆ ಮಾಡಬೇಕು ಎಂಬ ಮನಸ್ಸು ಮಾಡಿದರು. ಅದರ ಫ‌ಲವಾಗಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಯಾಗಿ ತಹಶೀಲ್ದಾರ್‌, ಹೆಚ್ಚುವರಿ ಜಿಲ್ಲಾಧಿಕಾರಿ, ಮೈಶುಗರ್‌ ಕಾರ್ಖಾನೆ ಎಂ.ಡಿ. ಆಗಿ ಪ್ರಾಮಾಣಿಕತೆ, ದಕ್ಷತೆ ಸೇವೆ ಸಲ್ಲಿಸಿ ಜನಸೇವಾ ಮನೋಭಾವ ರೂಢಿಸಿಕೊಂಡಿದ್ದಾರೆ ಎಂದು ಮಠದ ಟ್ರಸ್ಟಿಗಳು ಮಾಹಿತಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.