Advertisement

Udupi: ಮಕರ ಸಂಕ್ರಾಂತಿ ಸಂಭ್ರಮಕ್ಕೆ ವರುಣರಾಯನ ಸಾಥ್‌

01:55 AM Jan 15, 2025 | Team Udayavani |

ಉಡುಪಿ: ಶ್ರೀಕೃಷ್ಣಮಠದಲ್ಲಿ ಮಕರ ಸಂಕ್ರಾಂತಿ ಉತ್ಸವವು ಪರ್ಯಾಯ  ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಮಂಗಳವಾರ ಸಂಪನ್ನಗೊಂಡಿತು.

Advertisement

ಮಧ್ವಸರೋವರದಲ್ಲಿ ತೆಪ್ಪೋತ್ಸವ ನಡೆದ ಬಳಿಕ ರಥೋತ್ಸವ ನಡೆಯಿತು. ತೆಪ್ಪೋತ್ಸವ ಮುಗಿಯುವ ಹೊತ್ತಿಗೆ ಮಳೆ ಆರಂಭ ಗೊಂಡಿತು. ಮಳೆಯ ಮಧ್ಯೆಯೂ ಬ್ರಹ್ಮರಥ ಸಹಿತ ಮೂರು ತೇರುಗಳ ಉತ್ಸವವನ್ನು ಕಿಕ್ಕಿರಿದ ಭಕ್ತಜನಸಂದಣಿ ಕಣ್ತುಂಬಿಕೊಂಡಿತು. ಭಕ್ತರು ಕೊಡೆಗಳನ್ನು ಹಿಡಿದು ರಥಾರೂಢ ದೇವರ ದರ್ಶನವನ್ನು ಮಾಡಿದರು.

ಬ್ರಹ್ಮ ರಥ, ಗರುಡ ರಥ, ಸಣ್ಣ ರಥಗಳಲ್ಲಿ ಶ್ರೀಕೃಷ್ಣ, ಮುಖ್ಯಪ್ರಾಣ, ಅನಂತೇಶ್ವರ, ಚಂದ್ರಮೌಳೀಶ್ವರ ದೇವರ ಉತ್ಸವ ಮೂರ್ತಿಗಳನ್ನು ಪೂಜಿಸಿ ಉತ್ಸವ ನಡೆಸಲಾಯಿತು. ಅದಮಾರು ಮಠದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು, ಪುತ್ತಿಗೆ ಮಠದ ಕಿರಿಯ ಯತಿ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಪಾಲ್ಗೊಂಡಿದ್ದರು.

content-img

ವಿದ್ಯುದ್ದೀಪಗಳು, ಕುಣಿತದ ಭಜನೆ ಮತ್ತು ಆಕರ್ಷಕ ಸುಡು ಮದ್ದುಗಳಿಂದ ಕೂಡಿದ ರಥಬೀದಿಯಲ್ಲಿ ಮೂರು ರಥಗಳ ಉತ್ಸವ ಸಂಪನ್ನಗೊಂಡಿತು. ಉತ್ಸವ ಅರ್ಧ ಸುತ್ತು ಬಂದ ಬಳಿಕ ರಥ ಬೀದಿಯ ದಕ್ಷಿಣ ಭಾಗ ದಲ್ಲಿ ಸುಡು ಮದ್ದುಗಳ ಪ್ರದರ್ಶನ ನಡೆಯಿತು. ಮಧ್ಯಾಹ್ನ ವಿಶೇಷ ಅನ್ನ ಸಂತ ರ್ಪಣೆ ನಡೆ ಯಿತು. ಚೂರ್ಣೋತ್ಸವದ ಅನ್ನಸಂತರ್ಪಣೆಗೆ ಮಂಗಳವಾರ ರಾತ್ರಿ ಪುತ್ತಿಗೆ ಮಠಾಧೀಶರು, ಅದಮಾರು ಮಠಾ ಧೀಶರು ತರಕಾರಿ ಮುಹೂರ್ತ ನಡೆಸಿದರು.

ಇಂದು ಚೂರ್ಣೋತ್ಸವ
ಬುಧವಾರ ಬೆಳಗ್ಗೆ ಚೂರ್ಣೋತ್ಸವ, ಅವಭೃಥ ಸ್ನಾನ ನಡೆಯಲಿದೆ.

Advertisement

ಕೊಡೆ ಬೇಡವೆಂದ ಸಂಸದ
ಉತ್ಸವದಲ್ಲಿ ವಿಶೇಷ ಅತಿಥಿಯಾಗಿ ಪಾಲ್ಗೊಂಡ ಆಸ್ಟ್ರೇಲಿಯಾದ ವಿಕ್ಟೋ ರಿಯಾ ರಾಜ್ಯದ ಸಂಸದ ಜಾನ್‌ ಮುಲಾಹಿ ಅವರು ಕೊಡೆ ಬೇಡವೆಂದು ಮಳೆಯಲ್ಲಿ ನೆನೆದುಕೊಂಡೇ ಪಾಲ್ಗೊಂಡು ಮಠದಲ್ಲಿಯೇ ಊಟೋಪಚಾರ ಸ್ವೀಕರಿಸಿದರು.

ದೇಗುಲಗಳಲ್ಲಿ ಭಕ್ತಸಂದಣಿ
ಮಂಗಳೂರು/ಉಡುಪಿ:ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ದೇಗುಲಗಳಲ್ಲಿ ಮಕರ ಸಂಕ್ರಮಣವನ್ನು ಮಂಗಳವಾರ ಸಂಭ್ರಮದಿಂದ ಆಚರಿಸಲಾಯಿತು. ಧರ್ಮಸ್ಥಳ ಶ್ರೀ ಮಂಜುನಾಥ ಕ್ಷೇತ್ರ, ಕುಕ್ಕೆ ಶ್ರೀ ಸುಬ್ರಹ್ಮಣ್ಯ, ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನ, ಉಜಿರೆ ಶ್ರೀ ಜನಾರ್ದನ ಸ್ವಾಮಿ ಕ್ಷೇತ್ರ, ಅಳದಂಗಡಿ ಶ್ರೀ ಸೋಮನಾಥೇಶ್ವರಿ ದೇವಸ್ಥಾನ, ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರ, ಶ್ರೀ ಮಂಗಳಾದೇವಿ ಕ್ಷೇತ್ರ, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಮರೋಳಿ ಶ್ರೀ ಸೂರ್ಯನಾರಾಯಣ ಕ್ಷೇತ್ರ, ಕುದ್ರೋಳಿ ಶ್ರೀ ಭಗವತಿ ಕ್ಷೇತ್ರ, ಶ್ರೀ ಕಾಳಿಕಾಂಬ ಕ್ಷೇತ್ರ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಉಡುಪಿ ಶ್ರೀ ಕೃಷ್ಣಮಠ, ಮಾರಣಕಟ್ಟೆ ಬ್ರಹ್ಮಲಿಂಗೇಶ್ವನ ಸನ್ನಿಧಿ, ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನ, ಕೊಲ್ಲೂರು ಮೂಕಾಂಬಿಕೆ ದೇವಸ್ಥಾನ, ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನ, ಹಟ್ಟಿಯಂಗಡಿ ವಿನಾಯಕ ದೇವಸ್ಥಾನ ವಿವಿಧೆಡೆ ಬೆಳಗ್ಗೆಯಿಂದಲೇ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಸಹಿತ ವಿಶೇಷ ಪೂಜೆ ಸಲ್ಲಿಸಿದರು. ರಜೆ ದಿನವಾದ್ದರಿಂದ ಜನಸಂದಣಿಯೂ ಹೆಚ್ಚಿತ್ತು.

Advertisement

Udayavani is now on Telegram. Click here to join our channel and stay updated with the latest news.