ಬೆಂಗಳೂರು : ಸುಮ್ಮನೇ ಗೋವಿನ ಹೆಸರಲ್ಲಿ ನಾಟಕವೇಕೆ? ಎಂದು ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಡಾ. ಎಚ್.ಸಿ.ಮಹಾದೇವಪ್ಪ ಗುರುವಾರ ರಾಜ್ಯ ಬಿಜೆಪಿ ಸರಕಾರವನ್ನು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.
ಎಲ್ಲಾ ದೇವಾಲಯಗಳಲ್ಲಿ ದೀಪಾವಳಿ ವೇಳೆ ಗೋಪೂಜೆ ಮಾಡಬೇಕೆಂಬ ಆದೇಶ ಪ್ರಶ್ನಿಸಿ ಟ್ವೀಟ್ ಮಾಡಿರುವ ಮಹಾದೇವಪ್ಪ ಅವರು
ಮಹಾದೇವಪ್ಪ,”ಗ್ರಾಮೀಣ ಭಾರತದಲ್ಲಿ ಕೃಷಿಯ ಮೂಲಕ ಬದುಕು ಕಂಡು ಕೊಂಡಿರುವ ಎಲ್ಲಾ ರೈತರೂ ಕೂಡಾ ದೀಪಾವಳಿ ಮತ್ತು ಸಂಕ್ರಾಂತಿ ಹಬ್ಬದ ವೇಳೆ ಹಸುಗಳ ಮೈತೊಳೆದು, ಅಲಂಕಾರ ಮಾಡಿ, ನಂತರ ಕಿಚ್ಚು ಹಾಯಿಸುವಂತಹ ಆಚರಣೆಯು ಅನಾದಿ ಕಾಲದಿಂದಲೂ ಇದೆ. ಈ ಆಚರಣೆಯನ್ನು ನಮ್ಮ ರೈತರು ಬಿಜೆಪಿಗರಿಂದ ಕಲಿಯಬೇಕೇನು?” ಎಂದು ಟ್ವೀಟ್ ಮಾಡಿದ್ದಾರೆ.
ಇನ್ನೊಂದು ಟ್ವೀಟ್ ನಲ್ಲಿ ”ಬೆಲೆ ಏರಿಕೆಯ ನಡುವೆ ದೀಪಾವಳಿಯೂ ಬೇಡ ಏನೂ ಬೇಡ ಎಂಬ ಪರಿಸ್ಥಿತಿಗೆ ಜನ ಸಾಮಾನ್ಯರನ್ನು ನೂಕಿರುವ ಬಿಜೆಪಿಗರು ಗೋವಿನ ಹೆಸರಲ್ಲಿ ರಾಜಕೀಯ ಮಾಡುತ್ತಿರುವುದು ಅತ್ಯಂತ ಹಾಸ್ಯಾಸ್ಪದ ಬೆಳವಣಿಗೆ. ಇವರಿಗೆ ನಿಜವಾಗಲೂ ಹಸುಗಳ ಬಗ್ಗೆ ಪ್ರೀತಿ ಇದ್ದರೆ ಮೊದಲು ಇವರು ಮಾಡುತ್ತಿರುವ ಗೋಮಾಂಸ ರಫ್ತನ್ನು ನಿಲ್ಲಿಸಲಿ!” ಎಂದು ಸವಾಲು ಹಾಕಿದ್ದಾರೆ.
”ನಂತರ ಹೈನುಗಾರಿಕೆಯನ್ನೇ ಉಪ ಕಸುಬಾಗಿಸಿಕೊಂಡಿರುವ ನಮ್ಮೆಲ್ಲಾ ರೈತರ ಕುಟುಂಬಗಳಿಗೆ ತಲಾ 2 ಹಸುಗಳನ್ನು ನೀಡುವ ಮೂಲಕ ಹಸುವಿನ ಮತ್ತು ರೈತರ ಬದುಕಿಗೆ ನೆರವಾಗಲಿ. ಗಗನಕ್ಕೆ ಏರಿರುವ ರಸಗೊಬ್ಬರದ ಬೆಲೆ ಇಳಿಸಲಿ. ಕೃಷಿ ಉಪಕರಣಗಳ ಬೆಲೆಯನ್ನು ತಗ್ಗಿಸಿ ಕೃಷಿ ಉತ್ಪಾದನೆಯನ್ನು ಉತ್ತೇಜಿಸಲಿ. ಸುಮ್ಮನೇ ಗೋವಿನ ಹೆಸರಲ್ಲಿ ನಾಟಕವೇಕೆ?” ಎಂದು ಸರಣಿ ಟ್ವೀಟ್ ಮಾಡಿದ್ದಾರೆ.