Advertisement

“ಅಧ್ಯಯನ ವಿಶಾರದ’ಡಾ|ಗುಂಡ್ಮಿ ಭಾಸ್ಕರ ಮಯ್ಯ

01:33 AM May 09, 2021 | Team Udayavani |

ಒಂದೇ ಮನೆಯಲ್ಲಿ ಎರಡು ತರಹದ ಸಿದ್ಧಾಂತವಾದಿಗಳು ಪ್ರಜಾಸತ್ತಾತ್ಮಕ ರೀತಿಯಲ್ಲಿರು ವುದನ್ನು ನೋಡುವುದು ಅಪರೂಪದಲ್ಲಿ, ಅದರಲ್ಲೂ ಎರಡು ವಿಭಿನ್ನ ಸಂಪ್ರದಾಯದ ಸಿದ್ಧಾಂತವಾದಿಗಳು ಒಂದೇ ಮನೆಯ ಸದಸ್ಯರಾಗಿ, ಸ್ನೇಹಶೀಲರಾಗಿ ಬದುಕುವ ನಿದರ್ಶನ ತೀರಾ ಅಪರೂಪ.

Advertisement

ಗುರುವಾರವಷ್ಟೇ ಇಹಲೋಕ ತ್ಯಜಿಸಿದ ಬಹುಶ್ರುತ ವಿದ್ವಾಂಸ ಡಾ|ಗುಂಡ್ಮಿ ಭಾಸ್ಕರ ಮಯ್ಯ ಅವರು ದೇವರನ್ನು ಒಪ್ಪಿದವರಲ್ಲ. ಕಮ್ಯುನಿಸ್ಟ್‌ ಪಕ್ಷದ ಪ್ರಾಥಮಿಕ ಸದಸ್ಯರೂ ಹೌದು. “ನಿನಗೆ ಇಷ್ಟವಾದುದನ್ನು ಮಾಡು. ನೀನು ಅಧ್ಯಯನ ಮಾಡಿ ದೇವರನ್ನು ಒಪ್ಪು ಅಥವಾ ಬಿಡು. ಪೌರೋಹಿತ್ಯ ಮಾಡುವುದಾದರೆ ಶ್ರದ್ಧೆಯಿಂದ ಮಾಡು’ ಎಂದು ಮಗನಿಗೆ ಹೇಳಿದ್ದರು. ಗೀತೆಯ ಕೊನೆಯಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಹೇಳಿದ್ದನ್ನು ಡಾ|ಮಯ್ಯ ಮಗನಿಗೆ ಹೇಳಿದ್ದರಷ್ಟೆ. ಮಗ ಪ್ರಜ್ಞಾನ ವೈಶ್ವಾನರನಿಗೆ ವೇದದಲ್ಲಿ ಇಚ್ಛೆಯಾಯಿತು. ವೇದವನ್ನು ಓದಿದ, ಬಳಿಕ ಪುರೋಹಿತನಾದ. “ವಿಭಿನ್ನ ಸೈದ್ಧಾಂತಿಕತೆ ಮನೆಯಲ್ಲಿ ಭಿನ್ನಮತ ತರಲಿಲ್ಲವೆ?’ ಎಂದು ಡಾ|ಮಯ್ಯರನ್ನು ಕೇಳಿದ ವರಿಗೆ “ನಾವು ಅಷ್ಟೂ ಪ್ರೀತಿಯಿಂದ ಒಂದೇ ಮನೆಯಲ್ಲಿ ಇದ್ದೇವೆ’ ಎಂದುತ್ತರಿಸುತ್ತಿದ್ದರು. ಅಪ್ಪ ನಾಸ್ತಿಕ, ಮಗ ಪುರೋಹಿತ, ಮಗಳು ಅಮೆರಿಕದಲ್ಲಿ ವಾಸ-ಇಂಥ ವೈರುಧ್ಯಗಳಿರುವ ಮನೆ ಎಲ್ಲಿಯಾದರೂ ಕಷ್ಟಪಟ್ಟರೆ ಸಿಗಬಹುದು. ಆದರೆ ಅವರ ನಡುವಿನ ಸಾಮರಸ್ಯವಿರುವ ನೆಲೆ ತೀರಾ ಕಷ್ಟವೆನಿಸಬಹುದು.

ಎಡ-ಬಲ ಪಂಥೀಯರಿಗೆ ಬೆವರು
ಧರ್ಮದ ಹೆಸರಿನಲ್ಲಿ ನಡೆಯುವ ಪ್ರಮಾದಗಳನ್ನು ಖಂಡಿಸುವಾಗ ಸಂಪ್ರದಾಯ ಶರಣರ ಮತ್ತು ಮಾರ್ಕ್ಸ್ವಾದಿಗಳು ಎಲ್ಲೆಲ್ಲಿ ತಪ್ಪಿಬಿದ್ದಿದ್ದಾರೆಂದು ಹೇಳುವಾಗ ಎಡಪಂಥೀಯರ ಬೆವರು ಇಳಿಯುತ್ತಿತ್ತು. ಗಾಂಧೀಜಿಯವರನ್ನು ಸ್ವಾತಂತ್ರಾéನಂತರದ ದೇಶದ ನಾಯಕರು, ಇತ್ತೀಚಿನ ಎಡಪಂಥೀಯ ಸಾಹಿತಿಗಳು ಹೇಗೆ ಕಂಡರು? ಅವರ ಗ್ರಾಮಸ್ವರಾಜ್ಯ, ಚರಕ ನವಯುಗಕ್ಕೂ ಹೇಗೆ ಅನ್ವಯ ಎಂಬುದನ್ನು ಪುಂಖಾನುಪುಂಖವಾಗಿ ಹೇಳ/ಬರೆಯಬಲ್ಲವರಾಗಿದ್ದರು ಡಾ|ಮಯ್ಯರು.

“ಎಡ’ರ ತೊಡರು ಇದಿರಿಸಿದ್ದ ಮಯ್ಯ
ಡಾ| ಮಯ್ಯ ಅವರು ಅನುವಾದಿಸಿದ “ವಿಷ್ಣು ಭಟ್ಟ ಗೋಡ್ಸೆಯವರ ಪ್ರವಾಸ ಕಥನ’ದ ಪುಸ್ತಕ ಕುರಿತಾದ ಒಂದು ಸಭೆಯಲ್ಲಿ ಈ ಗೋಡ್ಸೆ ಗಾಂಧೀಜಿಯನ್ನು ಕೊಂದ ಗೋಡ್ಸೆಯಲ್ಲ. ಒಬ್ಬ ಮಹಾರಾಷ್ಟ್ರದ ವೈದಿಕ ಬ್ರಾಹ್ಮಣ ಹಣ ಸಂಪಾದನೆಗೆ ದೇಶ ಸುತ್ತಲು ಹೋಗಿ 1857ರ ಪ್ರಥಮ ಸ್ವಾತಂತ್ರ್ಯಸಂಗ್ರಾಮದ ಹೋರಾಟದ ತಾತ್ಯಾಟೋಪಿ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಬ್ರಿಟಿಷ್‌ ಸೈನಿಕರು ಮೊದಲಾದವರ ಮಜಲುಗಳಲ್ಲಿ ಸಿಲುಕಿ ಅಲ್ಪಸ್ವಲ್ಪ ಸಿಕ್ಕಿದ ಹಣವೂ ಕಳ್ಳಕಾಕರು, ದರೋಡೆಕೋರರ ಪಾಲಾಗಿ ಕೊನೆಗೆ ಹಣವೇ ಇಲ್ಲದೆ ವಾಪಸು ಬಂದ ಕಥೆ ಇದು. ಈ ದೇಶದಲ್ಲಿ ಎಲ್ಲ ಕೆಟ್ಟದ್ದಕ್ಕೆ ಬ್ರಾಹ್ಮಣರೇ ಕಾರಣ ಎನ್ನುತ್ತಾರೆ. ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಯಾರ್ಯಾರು ಬ್ರಾಹ್ಮಣರಿದ್ದರು ಎಂದು ಒಂದೊಂದಾಗಿ ಬಿಚ್ಚಿಟ್ಟರು. ಸಭೆ ಬಳಿಕ ಎಡಪಂಥೀಯರಿಂದ ಮಯ್ಯ ಬೈಸಿಕೊಂಡರು. ಮಯ್ಯರು ಹೇಳಿ ಕೇಳಿ ಶಿಕ್ಷಕರು, ಅವರ ಕೋಲು ಎಲ್ಲರಿಗೂ ಒಂದೇ ತೆರನಾಗಿತ್ತು, ಒಬ್ಬೊಬ್ಬರಿಗೆ ಒಂದೊಂದು ಬಗೆಯ ಕೋಲಲ್ಲ.

ಪೇಜಾವರ ಶ್ರೀಗಳ ಶಿಷ್ಯೆಯಾಗಿದ್ದ ಉಡುಪಿಯ ಸಾಧಕಿ ಸುಭದ್ರಾಮಾತಾ ಕುರಿತಾದ “ಸಾಧನೆಯ ಪ್ರತಿಮೂರ್ತಿ ತಪೋವನಿ ಮಾ’ ಕೃತಿಯನ್ನು ಹಿಂದಿಯಿಂದ ಅನುವಾದ ಮಾಡಿದ್ದು ಡಾ|ಮಯ್ಯರು.

Advertisement

ಅರ್ಥವಾಗದ ಹೊಡೆತ
“ನಿಕಷಕ್ಕೊಡ್ಡದ ನಿರ್ಣಯಗಳು’ ಎಂಬ ಪುಸ್ತಕದಲ್ಲಿ ಮಾರ್ಕ್ಸ್ವಾದ, ಗಾಂಧೀವಾದ, ಬುದ್ಧ, ಎಡಪಂಥ, ಬಲಪಂಥ, ವೈದಿಕ, ವೈದಿಕೇತರ, ಸಂಸ್ಕೃತಿ, ಜಾಗತೀಕರಣ, ಇಸ್ಲಾಂ, ಕ್ರಿಶ್ಚಿಯಾನಿಟಿ, ಸ್ವಾತಂತ್ರ್ಯಪೂರ್ವ- ಸ್ವಾತಂತ್ರೊéàತ್ತರ ಹೀಗೆ ಎಷ್ಟೊಂದು ವಿಚಾರಗಳನ್ನು ಒರೆಗಲ್ಲಿಗೆ ಹಚ್ಚಿ ದ್ದಾರೆ? ಎಲ್ಲ ಬಗೆಯ ಸಿದ್ಧಾಂತವಾದಿಗಳು ಆಯಾ ಕಾಲಘಟ್ಟದಲ್ಲಿ ಕಾಲು ಜಾರಿದಾಗ ಝಾಡಿಸಿದವರು, ಯಾರನ್ನೂ ಬಿಟ್ಟವರಲ್ಲ ಎನ್ನುವುದನ್ನು ಹೇಳುವಾಗ ಡಾ|ಶಿವರಾಮ ಕಾರಂತರ ನಿರ್ಭೀತ, ಅದೇ ಹೊತ್ತಿಗೆ ನಿಷ್ಪಕ್ಷಪಾತ ಅಭಿವ್ಯಕ್ತಿ ನೆನಪಿಗೆ ಬರುತ್ತದೆ.

ಮೂವರು ಪ್ರಧಾನಿಗಳಿಗೆ ಮಾಧ್ಯಮ ಸಲಹೆಗಾರರಾಗಿದ್ದ ಕನ್ನಡಿಗ ಎಚ್‌.ವೈ.ಶಾರದಾಪ್ರಸಾದ್‌ ಅವರ ಸಹೋದರ, ಹಿಂದಿ ವಲಯದಲ್ಲಿ “ಆಚಾರ್ಯ ಸಂಪಾದಕ’ರೆನಿಸಿದ ನಾರಾಯಣದತ್ತರ ಬಗ್ಗೆ ಹೊರತಂದ ಪುಸ್ತಕವನ್ನು ಕಿರಿಯ ತಲೆಮಾರಿನ ಪತ್ರಕರ್ತರು ಓದಿ ಬೆಳೆಯಬೇಕು ಎನ್ನುತ್ತಿದ್ದರು ಅವರು.

ಡಾ|ಕಾರಂತರ ಮೆಚ್ಚುಗೆ
ರಾಹುಲ್‌ ಸಾಂಕೃತ್ಯಾಯನರ ಶತಮಾನೋತ್ಸ ವದ ವೇಳೆ ದಿಲ್ಲಿಯಲ್ಲಿ 1990ರಲ್ಲಿ ನಡೆದ ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದ ಡಾ|ಶಿವರಾಮ ಕಾರಂತರಿಗೆ ಸಾಂಕೃತ್ಯಾಯನರ ಬಗ್ಗೆ ಶೀಘ್ರದಲ್ಲಿ ಮಾಹಿತಿ ಒದಗಿಸಿಕೊಟ್ಟವರು ಡಾ|ಮಯ್ಯರು. ಇವರ ಸಂಪರ್ಕಸೇತು ಹಿರಿಯ ಸಮಾಜಶಾಸ್ತ್ರಜ್ಞ ಪ್ರೊ|ಶ್ರೀಪತಿ ತಂತ್ರಿ. “ಮಯ್ಯರ ಚಳವಳಿ ಮುಖ ಮಾತ್ರ ಕಂಡಿದ್ದ ಡಾ| ಕಾರಂತರಿಗೆ ಸ್ವಲ್ಪ ಋಣಾತ್ಮಕ ಭಾವನೆ ಇತ್ತು. ಕೊನೆಗೆ ಈತ ಚೆನ್ನಾಗಿ ಓದಿಕೊಂಡಿದ್ದಾನೆ’ ಎಂದು ಪ್ರೊ|ತಂತ್ರಿಯವರಲ್ಲಿ ಮೆಚ್ಚುಗೆ ಸೂಚಿಸಿ ದ್ದರಂತೆ. “ಡಾ|ಮಯ್ಯರ ಅಧ್ಯಯನ ವ್ಯಾಪ್ತಿ ಬಹಳ ದೊಡ್ಡದು. ಕಾರ್ಲ್ ಮಾರ್ಕ್ಸ್ ಧರ್ಮ ವನ್ನು ಅಫೀಮು ಎಂದು ಕರೆದದ್ದು ಮಾತ್ರ ಈಗಿನ ಕಮ್ಯುನಿಸ್ಟರಿಗೆ ವೇದವಾಕ್ಯ. ತೀರಾ ಸಂಕಷ್ಟದಲ್ಲಿರುವವರಿಗೆ ಧರ್ಮ ಶಕ್ತಿ ಕೊಡುತ್ತದೆ ಎಂದು ಮಾರ್ಕ್ಸ್ ಹೇಳಿರುವುದನ್ನೂ ಡಾ|ಮಯ್ಯ ಉಲ್ಲೇಖೀಸುತ್ತಿದ್ದರು’ ಎಂದು ಪ್ರೊ|ತಂತ್ರಿ ನೆನಪಿಸಿಕೊಳ್ಳುತ್ತಾರೆ.

6 ಎಂಎ, 2 ಪಿಜಿ, 1 ಪಿಎಚ್‌ಡಿ
“ಉದಯವಾಣಿ’ ಸಹಿತ ವಿವಿಧ ಪತ್ರಿಕೆಗಳಲ್ಲಿ ಡಾ| ಮಯ್ಯ ವೈಚಾರಿಕ ಲೇಖನಗಳನ್ನು ಬರೆದಿದ್ದರು. ಸ್ವಂತದ “ಜನವಾದಿ ಪ್ರಕಾಶನ’ ಸಹಿತ ವಿವಿಧ ಪ್ರಕಾಶನಗಳಿಂದ 52 ಕೃತಿಗಳನ್ನು ಹೊರತಂದವರು. ಆರು ಎಂಎ (ಹಿಂದಿ, ತಣ್ತೀಶಾಸ್ತ್ರ, ಜೈನಾಲಜಿ ಮತ್ತು ತೌಲನಿಕ ಧರ್ಮಗಳು, ಪ್ರಾಕೃತ, ಸಂಸ್ಕೃತ, ಇಂಗ್ಲಿಷ್‌), ಹಿಂದಿಯಲ್ಲಿ ಪಿಎಚ್‌.ಡಿ., ಕನ್ನಡದಲ್ಲಿ ಡಿಪ್ಲೊಮಾ, ಮಾನವ ಹಕ್ಕುಗಳ ಕುರಿತು ಸ್ನಾತಕೋತ್ತರ ಡಿಪ್ಲೊಮಾ, ಹಿಂದಿ ರತ್ನ ಇಷ್ಟು ಪದವಿಗಳನ್ನು ಮಯ್ಯರ ಮಿದುಳು ಅರಗಿಸಿಕೊಂಡಿತ್ತೆನ್ನುವುದೇ ಸೋಜಿಗ.

– ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next