Advertisement

ಅಮೆರಿಕದ ಹಿರಿಯ ವೈದ್ಯ ಡಾ|ಗೋಪಾಲಕೃಷ್ಣ ಕಾಮತ್‌ ನಿಧನ

10:22 PM Feb 18, 2021 | Team Udayavani |

ಉಡುಪಿ: ಅಮೆರಿಕದ ಹಿರಿಯ ವೈದ್ಯ ಡಾ| ಗೋಪಾಲಕೃಷ್ಣ ಕಾಮತ್‌ (89) ಅವರು ಅಮೆರಿಕದ ಸೈಂಟ್‌ ಲೂಕ್ಸ್‌ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಪತ್ನಿ ಪರಿಮಳ, ಪುತ್ರರಾದ ಸುರೇಶ್‌ ಮತ್ತು ಶಿವನಾಥ ಅವರನ್ನು ಅಗಲಿದ್ದಾರೆ.

Advertisement

ಉಡುಪಿಯ ಅನಂತ ಮತ್ತು ಆನಂದಿ ಕಾಮತ್‌ ದಂಪತಿಯ ಪುತ್ರನಾಗಿ 1931ರಲ್ಲಿ ಜನಿಸಿದ ಗೋಪಾಲಕೃಷ್ಣ ಕಾಮತ್‌ ಅವರು 9ರ ಚಿಕ್ಕ ಪ್ರಾಯದಲ್ಲಿಯೇ ತಂದೆ-ತಾಯಿಯನ್ನು ಕಳೆದುಕೊಂಡರು. ನಾಲ್ವರು ಹಿರಿಯ ಸೋದರಿಯರೊಂದಿಗೆ ಬೆಳೆದ ಗೋಪಾಲಕೃಷ್ಣ ಕಾಮತ್‌ ಅವರು ಬಹಳ ಕಷ್ಟ ಪಟ್ಟು ಜೀವನದಲ್ಲಿ ಯಶಸ್ಸು ಸಾಧಿಸಿದ್ದರು. ಕಠಿನ ಪರಿಶ್ರಮದಿಂದ ಮಣಿಪಾಲ ಕೆಎಂಸಿಯಲ್ಲಿ ವೈದ್ಯಕೀಯ ಶಿಕ್ಷಣ ಪಡೆದರು.

ಅಮೆರಿಕದ ನ್ಯೂಯಾರ್ಕ್‌ನ ಪೂಫ್ ಕೀಪ್ಸಿಯ ವಸಾರ್‌ ಬ್ರದರ್ ಆಸ್ಪತ್ರೆಯಲ್ಲಿ ಇಂಟರ್ನ್ ಶಿಪ್ ಗೆ ಸೇರಿದ ಡಾ|ಕಾಮತ್‌ ಅವರು, ಉಟಿಕಾದಲ್ಲಿ ಉಟಿಕಾ ಸೈಕಿಯಾಟ್ರಿಕ್‌ ಸೆಂಟರ್‌ನಲ್ಲಿ ಸೇರಿ ಅಲ್ಲಿಯೇ 25 ವರ್ಷ ಕಾಲ ಮನಃಶಾಸ್ತ್ರಜ್ಞರಾಗಿ ಕಾರ್ಯನಿರ್ವಹಿಸಿದ್ದರು. ಅವರು ಸೈಕಿಯಾಟ್ರಿ ಆ್ಯಂಡ್‌ ನ್ಯೂರಾಲಜಿ, ಫ್ಯಾಮಿಲಿ ಪ್ರಾಕ್ಟಿಸ್‌, ಕ್ವಾಲಿಟಿ ಅಶ್ಯುರೆನ್ಸ್‌ ಬೋರ್ಡ್‌ ಸರ್ಟಿಫೈಡ್‌ ಮಾನ್ಯತೆ ಪಡೆದಿದ್ದರು. ಬಹು ವಿಭಾಗಗಳಲ್ಲಿ ಪ್ರಮಾಣಪತ್ರ ಹೊಂದಿದ ಕೆಲವೇ ಕೆಲವು ಫಿಸೀಶಿಯನ್‌ಗಳಲ್ಲಿ ಅವರು ಒಬ್ಬರಾಗಿದ್ದರು.

ನಿಯಮಿತ ಆರ್ಥಿಕತೆ ಹೊಂದಿದ ರೋಗಿಗಳಿಗೆ ಸೂಕ್ತವಾದ ಚಿಕಿತ್ಸೆ ನೀಡಬೇಕೆಂಬ ನೀತಿಯನ್ನು ಅನುಸರಿಸಿದ ಅವರು 80ರ ವಯಸ್ಸಿನವರೆಗೂ ವೃತ್ತಿಯನ್ನು ನಡೆಸಿಕೊಂಡು ಬಂದಿದ್ದರು. ವಿಜ್ಞಾನ, ಇತಿಹಾಸ, ರಾಜಕೀಯದಲ್ಲಿ ಆಸಕ್ತಿ ಹೊಂದಿದ್ದರಲ್ಲದೆ ಎಂಟು ಭಾಷೆಗಳಲ್ಲಿ ಮಾತನಾಡುವ ಭಾಷಾ ಪ್ರೇಮಿಯೂ ಆಗಿದ್ದರು. ಭಕ್ತಿ ಸಂಗೀತವನ್ನೂ ಅವರು ಸುಶ್ರಾವ್ಯವಾಗಿ ಹಾಡುತ್ತಿದ್ದರು. ಗೋಪಾಲಕೃಷ್ಣ ಕಾಮತ್‌ ಅವರ ಪತ್ನಿ ಪರಿಮಳ ಅವರು ಮಣಿಪಾಲದ ಪ್ರತಿಷ್ಠಿತ ಪೈ ಕುಟುಂಬದವರು.

Advertisement

Udayavani is now on Telegram. Click here to join our channel and stay updated with the latest news.

Next