ಉಡುಪಿ : ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ, ಹಿರಿಯ ಸಸ್ಯವಿಜ್ಞಾನಿ ಡಾ| ಕೆ. ಗೋಪಾಲಕೃಷ್ಣ ಭಟ್ (75) ಅವರು ಅಸೌಖ್ಯದಿಂದ ಎ. 7ರಂದು ಚಿಟ್ಪಾಡಿಯ ಸ್ವಗೃಹದಲ್ಲಿ ನಿಧನ ಹೊಂದಿದರು.
ಮೃತರು ಪತ್ನಿಯನ್ನು ಅಗಲಿದ್ದಾರೆ. ಮೂಲತಃ ಕಾಸರಗೋಡು ಜಿಲ್ಲೆಯ ನೀರ್ಚಾಲು ಕಾಕುಂಜೆಯವರಾದ ಅವರು 33 ವರ್ಷಗಳ ಕಾಲ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಸಸ್ಯಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಭಟ್ ಜೀವಮಾನಪೂರ್ಣ ಸಸ್ಯಶಾಸ್ತ್ರಕ್ಕಾಗಿಯೇ ಮೀಸಲಿಟ್ಟಿದ್ದರು ಮತ್ತು ಅದರ ಸಂಶೋಧನೆಗಾಗಿ ವ್ಯಾಪಕ ಪ್ರವಾಸ ಕೈಗೊಳ್ಳುತ್ತಿದ್ದರು.
ಸಸ್ಯಕ್ಕೆ ಡಾ| ಭಟ್ ಹೆಸರು
ಡಾ| ಭಟ್ ಅವರು ಸಸ್ಯ ವರ್ಗೀಕರಣ ಶಾಸ್ತ್ರದಲ್ಲಿ ಅಧಿಕಾರವಾಣಿಯಿಂದ ಮಾತನಾಡಬಲ್ಲವರಾಗಿದ್ದರು. ಪ್ರಪಂಚದಲ್ಲೆಲ್ಲೂ ಗುರುತಿಸದ ಆರು ಸಸ್ಯಪ್ರಭೇದಗಳನ್ನು ಭಟ್ ಹುಡುಕಿದ್ದರು. ಇದರಲ್ಲಿ ಒಂದು ಪ್ರಭೇದ ಮಣಿಪಾಲದ ಜಿಂಜಿಬರೇಸಿ ಶುಂಠಿ ಕುಟುಂಬಕ್ಕೆ ಸೇರಿದ ಕರ್ಕ್ನೂಮಾ ಭಟ್ಟಿಯೈ. ಸ್ಕಾಟ್ಲಂಡ್ ಎಡಿನ್‌ಬರೋದ ಶುಂಠಿ ಸಸ್ಯಕುಟುಂಬ ತಜ್ಞೆ ಡಾ| ರೋಸ್ ಮೇರಿ ಸ್ಮಿತ್ ಅವರು ಭಟ್ಟರ ಹೆಸರನ್ನು ಈ ಸಸ್ಯಕ್ಕೆ ಇಟ್ಟಿದ್ದರು. ಪಾರಾಕೌಟ್ಲೆàಯಾ ಭಟ್ಟಿಯೈ (ಈಗ ಕರ್ಕ್ನೂಮಾ ಭಟ್ಟಿಯೈ) ಮಾದರಿ ಇಂಗ್ಲೆಂಡ್‌ನ ಕ್ಯೂ ಬೊಟಾನಿಕಲ್ ಗಾರ್ಡನ್‌ನಲ್ಲಿದೆ.
ಸಿರೋಪೀಜಿಯಾ ಭಟ್ಟಿಯೈ, ಎರಿಯೋಕಾಲನ್ ಗೋಪಾಲಕೃಷ್ಣಾನಮ್, ಕ್ಯಾನ್ಸೊ$Rರಾ ಭಟಿಯಾನಾ ಹೀಗೆ ದೇಶದ ವಿವಿಧ ಕಡೆಗಳ ಅಭಿಮಾನಿಗಳೂ ತಮ್ಮ ಸಂಶೋಧನ ಸಸ್ಯಗಳಿಗೆ ಭಟ್ಟರ ಹೆಸರು ಕೊಟ್ಟು ಗೌರವಿಸಿದ್ದಾರೆ. ಈವರೆಗೆ ಯಾರೂ ವರದಿ ಮಾಡದ ಕುದುರೆಮುಖ, ತಲಕಾವೇರಿ, ಉಡುಪಿ ರೈಲ್ವೇ ನಿಲ್ದಾಣ ಬಳಿ, ಅಮೆರಿಕನ್ ಟ್ರಾಪಿಕಲ್ ಮೂಲದ ಗಿಡ ಹೀಗೆ ಒಟ್ಟು ನಾಲ್ಕು ಸಸ್ಯಪ್ರಭೇದಗಳನ್ನು ವರದಿ ಮಾಡಿದ್ದಾರೆ. ಡಾ| ಭಟ್ಟರ “ಫ್ಲೋರಾ ಆಫ್ ಉಡುಪಿ’, “ಫ್ಲೋರಾ ಆಫ್ ಸೌತ್ ಕೆನರಾ’ ಕೃತಿ ಸಸ್ಯಸಂಬಂಧಿ ಸಂಶೋಧಕರಿಗೆ ಆಕರಗ್ರಂಥವಾಗಿದೆ.
ಅದಮಾರು, ಪೇಜಾವರ ಸ್ವಾಮೀಜಿಗಳ ಸಂತಾಪ
ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಹಿತ ವಿವಿಧ ಗೌರವಗಳು ಸಿಕ್ಕಿವೆ. ಇತ್ತೀಚಿಗೆ ಡಾ| ಭಟ್ ಅಭಿನಂದನಾರ್ಥ ಸಸ್ಯಶಾಸ್ತ್ರದ ನಿವೃತ್ತ ಪ್ರಾಧ್ಯಾಪಕ ಪ್ರೊ| ವಿ. ಅರವಿಂದ ಹೆಬ್ಟಾರ್ ರಚಿಸಿದ “ಟ್ಯಾಕ್ಸೋನೊಮಿ ಭಟ್ಟರ ಯಾನ’ ಕೃತಿ ಬಿಡುಗಡೆಗೊಂಡಿತ್ತು. ಅದಮಾರು ಮಠ ಶಿಕ್ಷಣ ಸಂಸ್ಥೆಗಳ ವರಿಷ್ಠರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸಂತಾಪ ಸೂಚಿಸಿದ್ದಾರೆ.