ಹುಬ್ಬಳ್ಳಿ ಕಾಮರ್ಸ್, ಧಾರವಾಡ ಆರ್ಟ್ಸ್ ಎಂದು ಉದ್ದರಿಸಿದವರು ಪಿ. ಲೆಂಕೇಶ್. ಅವರ ಮಾತು ಈಗಲೂ ಎಲ್ಲರ ನೆನಪಿನಲ್ಲಿ ಉಳಿದಿದೆ. ಆ ಮಾತಿನ ಅರ್ಥ ಏನೆಂದರೆ ಹುಬ್ಬಳ್ಳಿ ಎಂದರೆ ವಾಣಿಜ್ಯ ನಗರಿ. ಇಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಕಡಿಮೆ. ಧಾರವಾಡದಲ್ಲಿ ಹೆಚ್ಚು. ಹೀಗಾಗಿ ಹುಬ್ಬಳ್ಳಿಗೆ ಕಾಮರ್ಸ್ ಧಾರವಾಡ ಆರ್ಟ್ಸ್ ಎಂದು ಕರೆಯುವ ರೂಢಿ. ಈ ಮಾತನ್ನು ಸುಳ್ಳಾಗಿಸುವಂತೆ ಹುಬ್ಬಳ್ಳಿಯಲ್ಲೊಂದು ಸಂಗೀತ ಮ್ಯೂಸಿಯಂ ಇದೆ. ಯಾವುದು ಅಂತೀರಾ? ಅದೇ ಗಾನಗಂಗೆ ಡಾ. ಗಂಗೂಬಾಯಿ ಹಾನಗಲ್ಲರ ಖಾಸಗಿ ಸಂಗೀತ ವಸ್ತು ಸಂಗ್ರಹಾಲಯ.
ಗಂಗಜ್ಜಿಯ ಮೊಮ್ಮಗ ಮನೋಜ ಹಾನಗಲ್ಲ 2005ರಲ್ಲಿ ಕೇವಲ 30 ಪರಿಕರಗಳೊಂದಿಗೆ ಆರಂಭಿಸಿದ ಈ ಸಂಗ್ರಹಾಲಯದಲ್ಲಿ ಇದೀಗ ಮದ್ರಾಸ್, ಕೋಲ್ಕತ್ತ, ಉತ್ತರ ಪ್ರದೇಶ, ದೆಹಲಿ, ಮುಂಬಯಿ, ಪುಣೆ, ಹೈದ್ರಾಬಾದ್ ಹಾಗೂ ಕೇರಳ ಸೇರಿದಂತೆ ದೇಶದ ನಾನಾ ಭಾಗಗಳಿಂದ ಸಂಗ್ರಹಿಸಿದ ಸುಮಾರು ನೂರಾರು ಸಂಗೀತ ಪರಿಕರಗಳಿವೆ. ಈ ವಸ್ತು ಸಂಗ್ರಹಾಲಯದಲ್ಲಿ ಮೂರು ವಿಭಾಗಗಳಿವೆ.
ಮೊದಲನೆಯದು 300 ಕ್ಕೂ ಹೆಚ್ಚು ಭಾರತೀಯ ಶಾಸ್ತ್ರೀಯ ಸಂಗೀತ ಗಾಯಕರ ಛಾಯಾಚಿತ್ರಗಳು. ತಾನ್‌ಸೇನ್‌ರಿಂದ ಹಿಡಿದು ಹುಬ್ಬಳ್ಳಿಯ ಬಿಂದುಮಾಧವ ಪಾಠಕ್‌ವರಗಿನ ಹಲವು ಗಾಯಕರ ಅಪರೂಪದ ಚಿತ್ರಗಳು ಇಲ್ಲಿವೆ. ಘರಾನಾ ಹಾಗೂ ಕರ್ನಾಟಕ ಗಾಯಕರೆಂದು ವರ್ಗೀಕರಿಸದ ಗಾಯಕರ ಭಾವಚಿತ್ರಗಳು, ಜೊತೆಗೆ ಗಂಗೂಬಾಯಿ ಅವರ ಅಪರೂಪದ
ಭಾವಚಿತ್ರಗಳನ್ನೂ ಇಲ್ಲಿ ನೋಡಬಹುದು.
ಎರಡನೆ ವಿಭಾಗದಲ್ಲಿ ಶಾಸ್ತ್ರೀಯ ಹಾಗೂ ಜಾನಪದ ವಾದ್ಯಗಳಿವೆ. ಬೀನ್, ರುದ್ರವೀಣಾ, ತಾಂಜೂರ್ ವೀಣಾ, ಬಂಗಾಲಿ ಏಕ್‌ತಾಲ್ ಭಜನ್‌ತಾನ್‌ಪುರ್, ತಾವೂಸ್, ಬುಲ್ ಬುಲ್ ತಾರಾ, ಮೆಂಡೋಲಿನ್, ಬೇಬಿ ಸಿತಾರ, ಸಾರಂಗಿ ಮೊದಲಾದವುಗಳ ಜೊತೆಗೆ ನಾಡಿನ ಜಾನಪದ, ಬುಡಕಟ್ಟು ಜನಾಂಗಕ್ಕೆ ಸಂಬಂಧಿಸಿದ ತಂತಿವಾದ್ಯ, ಚರ್ಮವಾದ್ಯ, ಗಾಳಿವಾದ್ಯ, ಗಾಜಿನವಾದ್ಯ, ಮಣ್ಣಿನವಾದ್ಯ, ಲೋಹವಾದ್ಯ, ಬಿದಿರುವಾದ್ಯಗಳನ್ನು ಇಲ್ಲಿ ನೋಡಬಹುದು. ಇಂಥ ಅಪರೂಪದ ವಸ್ತುಗಳು “ದೆಹಲಿಯ ಕೇಂದ್ರ ಸಂಗೀತ ಮತ್ತು ನಾಟಕ ಅಕಾಡೆಮಿಯ ಸಂಗ್ರಹದಲ್ಲಿವೆ. ಇದು ಬಿಟ್ಟರೆ ಅಪರೂಪದ ಶಾಸ್ತ್ರೀಯ ಸಂಗೀತ ಪರಿಕರಗಳ ವಸ್ತುಸಂಗ್ರಹಾಲಯ ಇರುವುದು ಇಲ್ಲಿಯೇ’ ಎನ್ನುತ್ತಾರೆ ಗಂಗಜ್ಜಿಯ ಮೊಮ್ಮಗ ಮನೋಜ್ ಹಾನಗಲ್.
ಮೂರನೆಯ ವಿಭಾಗದಲ್ಲಿ ಗಂಗೂಬಾಯಿಯವರಿಗೆ ದೊರೆತ ರಾಷ್ಟ್ರೀಯ ಪುರಸ್ಕಾರಗಳು ಮತ್ತು ಸಾವಿರಕ್ಕೂ ಅಧಿಕ ನೆನಪಿನ ಕಾಣಿಕೆಗಳು, ಸನ್ಮಾನ ಪತ್ರಗಳು, ಗಂಗೂಬಾಯಿಯವರ ಪೇಯಿಂಟಿಂಗ್, ವ್ಯಂಗ್ಯಚಿತ್ರಗಳಿವೆ. ಜೊತೆಗೆ ದೇಶದ ಪ್ರಸಿದ್ಧ ಗಾಯಕರ ಗಾಯನದ ಗ್ರಾಮೋಫೋನು ರೆಕಾರ್ಡ್‌ಗಳ ಸಂಗ್ರಹ. ಭಾರತೀಯ ವಾದ್ಯಗಳ ಪರಿಚಯ ಪತ್ರಗಳಿವೆ. ದೇಶದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ನಡೆಯುವ ಸಂಗೀತ ಕೋರ್ಸ್ ಸ್ನಾತಕೋತ್ತರ ಪದವಿ ಕುರಿತು ಮಾಹಿತಿ, ಕರ್ನಾಟಕದ ನೃತ್ಯಗಾರ್ತಿಯರ ಬಗ್ಗೆ ಮಾಹಿತಿ. ವಿವಿಧ ಘರಾಣಾಗಳ ಪರಂಪರೆ ಕುರಿತು ಪರಿಚಯ ಈ ವಸ್ತು ಸಂಗ್ರಹಾಲಯದಲ್ಲಿದೆ.
ಗಂಗೂಬಾಯಿ ಅವರ ಗುರುಗಳಾದ ಸವಾಯಿಗಂಧರ್ವರು ಎರಡು ವರ್ಷ ಈ ಮನೆಯಲ್ಲಿದ್ದರು. ಅವರಿದ್ದ ಕೋಣೆಗಳು ಸಹ ಈಗ ವಸ್ತುಸಂಗ್ರಹಾಲಯದ ಭಾಗವಾಗಿವೆ. ಈ ವಸ್ತು ಸಂಗ್ರಹಾಲಯವು ಒಟ್ಟು 6 ಕೋಣೆಗಳನ್ನು ಹೊಂದಿದೆ.
ಈ ವಸ್ತುಸಂಗ್ರಹಾಲಯವನ್ನು ಇದುವರೆಗೂ ಸಾವಿರಾರು ಜನರು ವೀಕ್ಷಿ$ಸಿದ್ದಾರೆ. ಮುಖ್ಯವಾಗಿ ಭೀಮಸೇನ್ ಜೋಶಿ, ಭಾರತ ರತ್ನ ಪುರಸ್ಕೃತರಾದ ಬಿಸ್ಮಿಲ್ಲಾ ಖಾನ್, ಪಂಡಿತ್ ರವಿಶಂಕರ, ಎಂ.ಎಸ್ ಸುಬ್ಬಲಕ್ಷಿ$¾ ಉಸ್ತಾದ್ ಜಾಕೀರ್ ಹುಸೇನ್, ಗಿರೀಶ್ ಕಾರ್ನಾಡ್, ಎಸ್.ಎಲ್.ಬೈರಪ್ಪ, ನಾನಾಪಾಟೇಕರ್, ಡಾ.ವಿಷ್ಣುವರ್ದನ್, ಚಂದ್ರಶೇಖರ ಕಂಬಾರ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತಿತರರು ಈ ಸಂಗೀತ ವಸ್ತಸಂಗ್ರಹಾಲಯವನ್ನು ವೀಕ್ಷಿ$ಸಿ, ಮೆಚ್ಚಿದ್ದಾರೆ.
ಈ ಸಂಗೀತ ವಸ್ತುಸಂಗ್ರಹಾಲಯವನ್ನು ನೋಡಿದ ಒಡಿಸ್ಸಿ ನೃತ್ಯ ಕಲಾವಿದ ಸೋನಾಲ್ ಮಾನ್ಸಿಂಗ್ ಸಂಗೀತ ಉಪಕರಣಗಳನ್ನು ಮೂಲೆಗೆ ಹಾಕಿದ್ದನ್ನು ನೋಡಿರುವೆ. ಆದರೆ ಅವುಗಳನ್ನೆಲ್ಲ ಶಿಸ್ತಾಗಿ ಜೋಡಿಸಿರುವುದನ್ನು ನೋಡಿದ್ದು ಇದೇ ಮೊದಲು. ಇದು ವಸ್ತು ಸಂಗ್ರಹಾಲಯ ಮಾತ್ರವಲ್ಲ. ನಮ್ಮ ಸಂಸ್ಕೃತಿ ಮತ್ತು ಪರಂಪರೆ ಎಂದು ಕೊಂಡಾಡಿದ್ದಾರೆ.
ಚಿತ್ರ ಲೇಖನ: ಟಿ.ಶಿವಕುಮಾರ್