ಬೆಳಗಾವಿ: ಚಿಕ್ಕೋಡಿ ತಾಲೂಕಿನ ಹಿರೇಕೋಡಿಯ ನಂದಿ ಪರ್ವತದ ಶ್ರೀ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸುವ ಯಾವುದೇ ಸಂದರ್ಭ ಇಲ್ಲ. ಕೊಲೆಗೆ ಕಾರಣ ತನಿಖೆಯಿಂದ ಬಹಿರಂಗವಾಗಲಿದೆ. ಪ್ರತಿಭಟನೆ ಕೈ ಬಿಡುವಂತೆ ಜೈನ ಸಮಾಜಕ್ಕೆ ಮನವಿ ಮಾಡುತ್ತೇವೆ. ಸರ್ಕಾರ ಜೈನ ಧರ್ಮದ ರಕ್ಷಣೆ ಬದ್ಧವಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದರು.
ತಾಲೂಕಿನ ಹಲಗಾದಲ್ಲಿರುವ ಶ್ರೀ 108 ಸಿದ್ಧಸೇನ ಮುನಿ ಮಹಾರಾಜರನ್ನು ಸೋಮವಾರ ಗೃಹ ಸಚಿವ ಪರಮೇಶ್ವರ ಭೇಟಿ ನೀಡಿ ಮಾಹಿತಿ ಪಡೆದುಕೊಂಡು ಇಡೀ ಜೈನ ಸಮಾಜಕ್ಕೆ ಅಭಯ ನೀಡಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ರಾಜ್ಯದಲ್ಲಿ ಶಾಂತಿ ಕಾಪಾಡಲು ಸರ್ಕಾರ ಬದ್ಧವಾಗಿದೆ. ಇದು ನಿಮ್ಮ ಸರ್ಕಾರ. ಯಾವುದೆ ಸಂದರ್ಭದಲ್ಲಿಯೂ ನಿಮ್ಮೊಂದಿಗೆ ಇದ್ದೇವೆ. ಆತಂಕ ಪಡುವ ಅಗತ್ಯ ಇಲ್ಲ. ಸರ್ಕಾರದಿಂದ ವಿಳಂಬ ಆಗುವುದಿಲ್ಲ. ನಿಮ್ಮ ನೋವು, ಅದು ನಮ್ಮ ನೋವು. ದೇಶ-ವಿದೇಶದಲ್ಲಿ ಪ್ರತಿಭಟನೆ ಆಗುತ್ತಿದ್ದು, ಪರಿಣಾಮಕಾರಿಯಾಗಿ ತನಿಖೆ ನಡೆಸಲಾಗುವುದು. ಯಾವುದೇ ಉದ್ವೇಗಕ್ಕೆ ಒಳಗಾಗಬಾರದು ಎಂದರು.
ಬಿಜೆಪಿಯವರು ಸರ್ಕಾರ ನಡೆಸುವಾಗ ಪೊಲೀಸ್ ಇಲಾಖೆ ಚೆನ್ನಾಗಿ ಇತ್ತು. ಈಗ ಒಂದೂವರೆ ತಿಂಗಳಲ್ಲಿ ಬಿಜೆಪಿವರಿಗೆ ಪೊಲೀಸ್ ಇಲಾಖೆ ಮೇಲೆ ಅಪನಂಬಿಕೆ ಬರುತ್ತಿರುವುದು ಏಕೆ? ಬಿಜೆಪಿಯವರು ಕ್ಷುಲ್ಲಕ ರಾಜಕೀಯ ಮಾಡಬಾರದು. ಜೈನಮುನಿಗಳ ಹತ್ಯೆ ನಡೆದ ಕೆಲವೇ ಗಂಟೆಯಲ್ಲಿ ಆರೋಪಿಗಳ ಬಂಧನವಾಗಿದೆ. ಎಲ್ಲದರಲ್ಲೂ ರಾಜಕೀಯ ಮಾಡಿದರೆ ಚೆನ್ನಾಗಿ ಇರುವುದಿಲ್ಲ ಎಂದರು.
ಸ್ವಾಮೀಜಿ ಭೀಕರ ಹತ್ಯೆ ನೋವು ತಂದಿದೆ. ಇಂಥ ಘಟನೆ ನಡೆಯಬಾರದಿತ್ತು. ಕಾನೂನು ಸರಿಯಾದ ಪಾಠ ಕಲಿಸುತ್ತದೆ. ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಂಡಿದೆ ಎಂದ ಅವರು, ಹಲಗಾದ 108 ಶ್ರೀ ಸಿದ್ದಸೇನ ಮುನಿ ಮಹಾರಾಜರನ್ನು ಭೇಟಿಯಾಗಿ ಹಲವು ವಿಷಯಗಳ ಬಗ್ಗೆ ಚರ್ಚಿಸಿದ್ದೇನೆ. ಜೈನಮುನಿಗಳ ಪಾದಯಾತ್ರೆ ಸಂದರ್ಭದಲ್ಲಿ ಶಾಲೆ, ಕಾಲೇಜಿನಲ್ಲಿ ತಂಗಲು ಅನುಮತಿ ನೀಡಿ ರಕ್ಷಣೆ ಒದಗಿಸಬೇಕು. ಜೈನ ಸಮುದಾಯಕ್ಕೆ ಮಂಡಳಿ ಸ್ಥಾಪನೆ ಮಾಡಬೇಕು ಎಂದು ಶ್ರೀಗಳ ಬೇಡಿಕೆಯಾಗಿದೆ. ಇದರ ಬಗ್ಗೆ ಮುಂದಿನ ದಿನಗಳಲ್ಲಿ ಸ್ಪಂದಿಸಲಾಗುವುದು ಎಂದು ತಿಳಿಸಿದರು.
ಹಲಗಾದ 108 ಶ್ರೀ ಸಿದ್ದಸೇನ ಮುನಿ ಮಹಾರಾಜರು ಇದ್ದರು.