Advertisement

ಬನ್ರೋ ನನ್ ಮಕ್ಳಾ ಯಾರು ಬರ್ತೀರೋ ಬನ್ನಿ: ಗುಡುಗಿದ ಡಾ.ಜಿ.ಪರಮೇಶ್ವರ್

06:59 PM Mar 13, 2023 | Team Udayavani |

ಕೊರಟಗೆರೆ: ಸಾವಿರ ಜನ ಹೇಳಿದ್ರು ಬೆಂಗಳೂರಿಗೆ ಬನ್ನಿ ಅಂತಾ.. ನಾನು ಹಠಕ್ಕೆ ಬಿದ್ದೀದಿನಿ ಕೊರಟಗೆರೆ ಕ್ಷೇತ್ರದಿಂದ್ಲೇ ಸ್ಪರ್ಧೆ ಮಾಡ್ತೀನಿ.. 2023ರ ವಿಧಾನಸಭಾ ಚುನಾವಣೆಯು ನನಗೇ ಅಗ್ನಿಪರೀಕ್ಷೆ.. ಬನ್ರೋ ನನ್ ಮಕ್ಳ ಯಾರು ಬರ್ತೀರೋ ಬನ್ನಿ.. ಯಾವ ಮೀಸೆನೂ ಇಲ್ಲ.. ಗೀಸೆಗೂ ಹೆದರೋಲ್ಲ. ಸಂಸದರೇ ಕೊರಟಗೆರೆ ಕ್ಷೇತ್ರಕ್ಕೆ ನಿಮ್ಮ ಕಾಣಿಕೆ ಏನು ತೋರಿಸಿ ನಿಮ್ಮ ಲೆಕ್ಕ ಆಮೇಲೆ ಚುನಾವಣೆ ಪ್ರಚಾರಕ್ಕೆ ಬನ್ನಿ ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಗುಡುಗಿದರು.

Advertisement

ಕೊರಟಗೆರೆ ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಒಕ್ಕಲಿಗರ ಮುಖಂಡರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ತುಮಕೂರಿನ ಸಂಸದರೇ 5 ವರ್ಷದ ನಿಮ್ಮ ಸಾಧನೆಯ ಅಂಕಿಅಂಶ ಜನತೆಗೆ ನೀಡಿ. ಪ್ರಧಾನಿ ಮೋದಿ ಹೆಸರಲ್ಲಿ ಮತ ಕೇಳೊದನ್ನ ಬಿಡಿ. ನಿಮ್ಮ ಅಭಿವೃದ್ದಿ ಹೆಸರಲ್ಲಿ ಚುನಾವಣೆಗೆ ಬನ್ನಿ. ಕೊರಟಗೆರೆ ಕ್ಷೇತ್ರಕ್ಕೆ ಎಷ್ಟು ಸಾರಿ ಬಂದಿದ್ದೀರಾ ಸಂಸದರೇ ನಮಗೆ ಲೆಕ್ಕ ಕೋಡಿ. ಭ್ರಷ್ಟಚಾರದ 40% ಕಮಿಷನ್ ಸರಕಾರ ಕರ್ನಾಟಕ ರಾಜ್ಯದಲ್ಲಿ ಆಡಳಿತ ನಡೆಸುತ್ತಿದೆ. 14 ದಿನ ಮಾತ್ರ ಬೊಮ್ಮಾಯಿ ಆಡಳಿತ ಆಮೇಲೆ ನಿಮ್ಮ ಅಧಿಕಾರ ಮುಗಿಯುತ್ತೆ ಕಾಯುತ್ತಿರಿ ಎಂದು ಗುಡುಗಿದರು.

ಕೊರಟಗೆರೆ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಕುರುವು ಏನಿದೆ ಎಂಬುದನ್ನು ಮೋದಲು ತೋರಿಸಿ. ನಿಮ್ಮ ನಾಯಕರ ಅಭಿವೃದ್ದಿಯ ಸಾಕ್ಷಿ ಗುಡ್ಡೆಯನ್ನು ಜನತೆಗೆ ತಲುಪಿಸಿ. ಪಾಪ ಕುಮಾರಸ್ವಾಮಿ ಒಳ್ಳೆಯ ಮನುಷ್ಯ ಆಡಳಿತ ಬೇಕಲ್ಲ. ಕುಮಾರಸ್ವಾಮಿ ಮೊದಲು ಕರ್ನಾಟಕದ 224 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಹಾಕಲಿ. 25 ಸೀಟು ಬಂದ್ರೇ ವ್ಯವಹಾರ ಮಾಡಿಕೊಳ್ಳೊಣ ಅಂತಾ ಹಗಲು ಕನಸು ಕಾಣ್ತೀದ್ದಾರೆ. ಜೆಡಿಎಸ್ ನಾಯಕರ ಸುಳ್ಳು ಭರವಸೆ ಮತ್ತು ಆಶ್ವಾಸನೆಯನ್ನು ಯಾರು ನಂಬಬೇಡಿ ಎಂದರು.

ಮೋದಿ ಸರಕಾರ ಮಜ್ಜಿಗೆಗೆ 18% ತೆರಿಗೆ ಹಾಕ್ತಾರೇ ಎಚ್ಚರ. ರೈತ ವಿರೋಧಿ ಖಾಯ್ದೆ ಇಂದಿಗೂ ಬಿಜೆಪಿ ಸರಕಾರ ವಾಪಸ್ ಪಡೆದಿಲ್ಲ. ಎತ್ತಿನಹೊಳೆ ಯೋಜನೆಗೆ ಬೊಮ್ಮಾಯಿ 50 ರೂ ಅನುದಾನ ನೀಡಿಲ್ಲ. ನನ್ನ 35 ವರ್ಷದ ರಾಜಕೀಯ ಜೀವನ ಸಮಾಜಸೇವೆಗೆ ಮೀಸಲು. ಬಫರ್ ಡ್ಯಾಂ ರೈತರಿಗೆ ಸಮಾನ ಪರಿಹಾರ ನೀಡದಿದ್ರೇ ಒಂದು ಅಡಿ ಭೂಮಿ ಕೋಡೊದಿಲ್ಲ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮತ್ತು ನನ್ನ ನಡುವೆ ಯಾವುದೇ ವೈಮನಸ್ಸು ಇಲ್ಲ. ವಿರೋಧಿಗಳ ಮಾತನ್ನು ಯಾರು ನಂಬಬೇಡಿ ಎಂದರು.

ಒಕ್ಕಲಿಗ ಸಮಾಜವು ಶ್ರೀರಕ್ಷೆ

Advertisement

ಕರ್ನಾಟಕ ರಾಜ್ಯ ಕೌಶಲ್ಯ ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಮಾತನಾಡಿ ಡಾ.ಜಿ.ಪರಮೇಶ್ವರ್ 35 ವರ್ಷದ ರಾಜಕೀಯ ಜೀವನಕ್ಕೆ ಒಕ್ಕಲಿಗ ಸಮಾಜವು ಶ್ರೀರಕ್ಷೆಯಾಗಿದೆ. ಒಕ್ಕಲಿಗ ಸಮಾಜ ನಿಮ್ಮ ಪರವಾಗಿದೆ ಒಮ್ಮೆ ಮಾತು ಕೊಟ್ರೇ ನಮ್ಮ ಸಮಾಜ ಯಾವತ್ತೂ ತಪ್ಪೋದಿಲ್ಲ. ನಾವು ನಿಮ್ಮ ಪರವಾಗಿ ಕೊರಟಗೆರೆ ಕ್ಷೇತ್ರದಲ್ಲಿ ಮತಯಾಚನೆ ಮಾಡ್ತೀವಿ. ನೀವು ವಿಧಾನಸೌಧ ನೋಡಿಕೊಳ್ಳಿ ಎಂಬ ಭರವಸೆಯನ್ನು ನಾವೇಲ್ಲರೂ ನೀಡಬೇಕಿದೆ ಎಂದು ಮನವಿ ಮಾಡಿದರು.

ಕೇಂದ್ರ ಸರಕಾರದ ಓಬಿಸಿ ಪಟ್ಟಿಯಲ್ಲಿ ನಮ್ಮ ಒಕ್ಕಲಿಗ ಸಮುದಾಯ ಇಲ್ಲ. ಒಕ್ಕಲಿಗ ಸಮುದಾಯಕ್ಕೆ ನಿವೇಶನ ಮತ್ತು ಕಟ್ಟಡದ ಅವಶ್ಯಕತೆ ಇದೆ. ಗಂಗಾ ಕಲ್ಯಾಣ ಮತ್ತು ಸಾಗುವಳಿ ಚೀಟಿಯಲ್ಲಿ ನಮಗೆ ಆಧ್ಯತೆ ಅಗತ್ಯ. ಹುಣಸೆ ಬೆಲೆ ಪಾತಾಳಕ್ಕೆ ಕುಸಿತ ಕಂಡಿದೆ ರೈತರಿಗೆ ನೂತನ ನಿಗಮದ ಅಗತ್ಯವಿದೆ. ನಮ್ಮ ಮನೆ ಮಗ ಎಂದು ನಿಮ್ಮನ್ನ ನಂಬಿದೀವಿ. ಅದಕ್ಕೆ ನಿಮ್ಮ ಸಹಮತ ಅಗತ್ಯ. 2023ಕ್ಕೆ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುತ್ತೇ ಯಾವುದೇ ಅನುಮಾನ ಬೇಡ ಎಂದು ಮುರುಳೀಧರ ಹಾಲಪ್ಪ ಹೇಳಿದರು.

ಕೋಳಾಲ ಮಾಜಿ ಜಿಪಂ ಸದಸ್ಯ ಪಿ.ಎನ್.ಕೃಷ್ಣಮೂರ್ತಿ ಮಾತನಾಡಿ ಮಾಜಿ ಶಾಸಕ ಸುಧಾಕರಲಾಲ್ ಸಾಧನೆ ಶೂನ್ಯ. ಅವರ ಹೆಸರನ್ನು ಯಾಕೆ ಮತ್ತೆ ಮತ್ತೆ ತರುತ್ತೀರಾ. ಬಿಜೆಪಿ ಅಭ್ಯರ್ಥಿಯ ಬಿಬಿಎಂಪಿ ಹಗರಣದ ತನಿಖೆ ಇನ್ನೂ ಬಾಕಿ ಇದೆ.2023 ಕ್ಕೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ. ಕೊರಟಗೆರೆ ಕ್ಷೇತ್ರದಿಂದ ಪರಮೇಶ್ವರ ಗೆದ್ದರೇ ಮಾತ್ರ ನಮಗೆಲ್ಲ ಬೆಲೆ ಬರುತ್ತೇ. ನಾವೇಲ್ಲರೂ ನಿಮ್ಮ ಜೊತೆ ಇದ್ದೇವೆ ಎಂಬುದನ್ನು ತೋರಿಸೋಣ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಸದಸ್ಯ ಪ್ರಸನ್ನಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರಕೆರೆ ಶಂಕರ್, ಅಶ್ವತ್ಥನಾರಾಯಣ್, ಮಹಿಳಾಧ್ಯಕ್ಷೆ ಜಯಮ್ಮ, ಯುವಾಧ್ಯಕ್ಷ ವಿನಯ್, ಮಾಜಿ ಜಿಪಂ ಸದಸ್ಯ ಗಂಗಾಧರಪ್ಪ, ತುಮಲ್ ನಿರ್ದೇಶಕ ಈಶ್ವರಯ್ಯ, ಮಾಜಿ ತಾಪಂ ಅಧ್ಯಕ್ಷ ಕೆಂಪರಾಮಯ್ಯ, ಮಾಜಿ ಸದಸ್ಯ ರವಿಕುಮಾರ್, ಮುಖಂಡರಾದ ಗಟ್ಲಹಳ್ಳಿ ಕುಮಾರ್, ಕಾಮರಾಜು, ವೆಂಕಟೇಶ್, ವೆಂಕಟೇಶಮೂರ್ತಿ, ಕಾಕಿಮಲ್ಲಣ್ಣ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next