Advertisement

ಸಿರಿಬಾಗಿಲು ಪ್ರಶಸ್ತಿಗೆ ಆಯ್ಕೆಗೊಂಡ ಡಾ|ಡಿ. ಸದಾಶಿವ ಭಟ್‌

07:50 AM Aug 11, 2017 | |

ಸಿರಿಬಾಗಿಲು: ಡಾ| ಡಿ. ಸದಾಶಿವ ಭಟ್‌ ಅವರು 2016-17ನೇ ಸಾಲಿನ ಹಾಗೂ ಪ್ರಕೃತ 11ನೇ ವರ್ಷದ ಪ್ರತಿಷ್ಠಿತ  ಸಿರಿಬಾಗಿಲು ವೆಂಕಪ್ಪಯ್ಯ ಸ್ಮಾರಕ ಪ್ರಶಸ್ತಿಗೆ ಆಯ್ಕೆಗೊಂಡಿದ್ದು, ಆ. 12ರಂದು ಶನಿವಾರ ಅಪರಾಹ್ನ 2ರಿಂದ ಸದ್ರಿ ಪ್ರತಿಷ್ಠಾನದ ವತಿಯಿಂದ ಪೆರ್ಲ ಶ್ರೀ ಸತ್ಯನಾರಾಯಣ ಮಂದಿರದಲ್ಲಿ  ಜರಗುವ “ಅರ್ಥಾಂತರಂಗ -2′ ಕಾರ್ಯಕ್ರಮದ ಸಭಾ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

Advertisement

ಪುತ್ತೂರು ತಾಲೂಕಿನ ಬೆಟ್ಟಂಪಾಡಿ  ಗ್ರಾಮದ ಪಳ್ಳುಮನೆಯಲ್ಲಿ ವಾಸಿಸುತ್ತಿರುವ ಅವರ ಜನನ 1933ರ ಮೇ 15. ತಂದೆ ಡಿ.ನಾರಾಯಣ ಭಟ್‌, ತಾಯಿ ಗೋದಾವರಿ ಅಮ್ಮ. 1964ರಲ್ಲಿ ಪುತ್ತೂರು ತಾಲೂಕು ಬೆಟ್ಟಂಪಾಡಿ ನವೋದಯ ಹೈಸ್ಕೂಲ್‌ನಲ್ಲಿ ಕನ್ನಡ ಪಂಡಿತರಾಗಿ ಉದ್ಯೋಗ ಜೀವನ ಆರಂಭಿಸಿ 1992ರಲ್ಲಿ ವೃತ್ತಿ ಯಿಂದ ನಿವೃತ್ತಿ. ಬಹು ಭಾಷಾ ವಿದ್ವಾಂಸ ರಾದ ಅವರು ಬಹು ವಿಶ್ವವಿದ್ಯಾನಿಲಯ ಗಳಿಂದ ಪದವಿಗಳನ್ನು ಗಳಿಸಿದವರು. 

ಮದ್ರಾಸ್‌ ವಿ.ವಿ.ಯಿಂದ ವಿದ್ವಾನ್‌, ದಕ್ಷಿಣ  ಭಾರತ ಹಿಂದಿ ಪ್ರಚಾರ ಸಭಾ ದಿಂದ ರಾಷ್ಟ್ರ ಭಾಷಾ ವಿಶಾರದ, ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎ., ಬೆಂಗಳೂರು ವಿಶ್ವವಿದ್ಯಾ ನಿಲಯ ದಿಂದ ಬಿ.ಎಡ್‌., ಧಾರವಾಡ ಕರ್ನಾಟಕ ವಿಶ್ವವಿದ್ಯಾ ಲಯದಿಂದ ಎಂ.ಎ., 1986 ರಲ್ಲಿ ಡಾ| ಜಿ.ಸಿ. ಐತಾಳರ ಮಾರ್ಗ ದರ್ಶನದಲ್ಲಿ “ಪಂಜೆಯವರ ಸಾಹಿತ್ಯ ಕೃತಿಗಳು ಒಂದು ಅಧ್ಯಯನ’ ಎಂಬ ಮಹಾ ಪ್ರಬಂಧಕ್ಕೆ ಮಂಗಳೂರು ವಿಶ್ವ ವಿದ್ಯಾನಿಲಯದಿಂದ ಪಿ.ಎಚ್‌.ಡಿ. ಪದವಿ. ಕನ್ನಡ, ತುಳು, ಸಂಸ್ಕೃತ, ಹಿಂದಿ, ಇಂಗ್ಲಿಷ್‌, ಹವ್ಯಕ ಕನ್ನಡ, ಕೊಂಕಣಿ, ಮರಾಠಿ, ಕರ್ಹಾಡ ಹೀಗೆ ಒಂಬತ್ತು ಭಾಷೆಗಳಲ್ಲಿ ಅರ್ಥಸಹಿತ ಯಕ್ಷಗಾನ ಪ್ರಸಂಗವನ್ನು ಬರೆದ ಯಕ್ಷಗಾನ ರಂಗದ ಏಕೈಕ ವಿದ್ವಾಂಸ.

ಸಂಸ್ಕೃತ, ಹಿಂದಿ, ಇಂಗ್ಲಿಷ್‌, ಕರ್ಹಾಡ ಭಾಷೆಗಳ ಯಕ್ಷಗಾನ ಧ್ವನಿಸುರುಳಿಗಳೂ ಬೆಳಕು ಕಂಡಿವೆ. ಅವರು  ಬರೆದ 10 ಯಕ್ಷಗಾನ ಪ್ರಸಂಗಗಳೂ ಸೇರಿ ಒಟ್ಟು 174 ಪ್ರಸಂಗಗಳು ಇದುವರೆಗೆ ಪ್ರಕಟಗೊಂಡಿದ್ದು ಇನ್ನೂ ಹಲವು ಪ್ರಸಂಗಗಳು ಪ್ರಕಟನೆಯ ಬೆಳಕು ಕಾಣ ಬೇಕಾಗಿದೆ.ಅವರು 40 ಪ್ರಸಂಗಗಳ ಸುಮಾರು ಮೂರು ಸಾವಿರದಷ್ಟು ಪುಟಗಳ ಕನ್ನಡ ತುಳು ಪ್ರಸಂಗಾರ್ಥಗಳು, ಗೀತರೂಪಕ, ಕನ್ನಡ, ತುಳು, ಸಾಮಾಜಿಕ ನಾಟಕ, ಪೌರಾಣಿಕ ನಾಟಕಗಳು, ಮಕ್ಕಳ ಕವನ ಯಕ್ಷಗಾನ ಸೇರಿ ಸುಮಾರು 80 ಅಪ್ರಕಟಿತ ಕೃತಿಗಳು. 

ಮಾತೃ ಭಾಷೆ ಕರ್ಹಾಡದಲ್ಲಿ ರಚಿಸಿದ ಕರ್ಹಾಡಿ ರಾಮಾಯಣ ಹಾಗೂ ಶ್ರೀಕೃಷ್ಣ ಚರಿತ ಮಹಾಕಾವ್ಯಗಳು, 5,600 ಪದ್ಯಗಳನ್ನೊಳಗೊಂಡ ಶ್ರೀಕೃಷ್ಣ ಚರಿತೆ ಯಕ್ಷಗಾನ ಮಹಾಕಾವ್ಯ, ವಿವಿಧ ದೇವರುಗಳ ಸಂಸ್ಕೃತ ಸ್ತೋತ್ರಗಳು, ಸುಪ್ರಭಾತಗಳು, ಕನ್ನಡ ಕವನ ಸಂಕಲನಗಳು, ಕನ್ನಡ ಗೀತ ರೂಪಕಗಳು, ಕನ್ನಡ ಹರಿಕತೆ, ವ್ಯಕ್ತಿ ಚಿತ್ರಗಳು, ಬದುಕುಬರಹಗಳು ಹೀಗೆ ಸಾಹಿತ್ಯದ ಅನನ್ಯ ಕೊಡುಗೆಗಳೇ ಅಸಂಖ್ಯ.

Advertisement

ಅವರಿಗೆ ಸೀತಾನದಿ ಗಣಪಯ್ಯ ಶೆಟ್ಟಿ ಸ್ಮಾರಕ ಪ್ರಶಸ್ತಿ, ಪೊಳಲಿ ಶಂಕರನಾರಾಯಣ ಶಾಸ್ತ್ರಿ ಸ್ಮಾರಕ ಪ್ರಶಸ್ತಿ, ಬೊಳ್ಳಂಬಳ ಪ್ರಶಸ್ತಿ, ಕಡವ ಶಂಭುಶರ್ಮ ಸ್ಮಾರಕ ಪ್ರತಿಷ್ಠಾನ ಗೌರವಾರ್ಪಣೆ, ಅವರ 30 ಪ್ರಸಂಗಗಳ ಯಕ್ಷಗಾನ ಪ್ರಸಂಗ ಸಂಪುಟ “ತ್ರಿಂಶತಿ’ಗೆ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪುಸ್ತಕ ಬಹುಮಾನ ಹೀಗೆ ಹತ್ತು ಹಲವು ಗೌರವಾದರಗಳು ಲಭಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next