ಕಲಬುರಗಿ: ನಾಡಿನ ಹಿರಿಯ ಸಾಹಿತಿ, ದಲಿತ, ಬಂಡಾಯ, ಸಮುದಾಯ, ಪ್ರಗತಿಪರ ಚಳುವಳಿಯ ನಾಯಕ ಡಾ.ಚೆನ್ನಣ್ಣ ವಾಲೀಕಾರ (76)ರವಿವಾರ ರಾತ್ರಿ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ರವಿವಾರ ರಾತ್ರಿ ಬಾರದ ಲೋಕಕ್ಕೆ ತೆರಳಿದರು. ಈ ಮೂಲಕ ಕಲ್ಯಾಣ ಕರ್ನಾಟಕದ ಹಿರಿಯ ಸಾಹಿತಿ, ಚಿಂತಕರನ್ನು ಕಳೆದುಕೊಂಡಂತಾಗಿದೆ. ಜತೆಗೆ ತುಂಬಲಾರದ ಹಾನಿಯುಂಟಾಗಿದೆ.
ಸೋಮವಾರ ಬೆಳಿಗ್ಗೆ 11ರಿಂದ 12ರವರೆಗೆ ನಗರದ ಹಿಂದಿ ಪ್ರಚಾರ ಸಭೆಯಲ್ಲಿ ಸಾರ್ವಜನಿಕರಿಗೆ ಪಾರ್ಥಿವ ಶರೀರದ ಅಂತೀಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
ತದನಂತರ ಮಧ್ಯಾಹ್ನ 3ಕ್ಕೆ ಚಿತ್ತಾಪುರ ತಾಲೂಕಿನ ಶಂಕರ ವಾಡಿ ಗ್ರಾಮದಲ್ಲಿ ಅಂತೀಮಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
2000ರಲ್ಲಿ ಶಹಾಬಾದ್ ನಲ್ಲಿ ನಡೆದ ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಲ್ಲದೇ ಹತ್ತಾರು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದಾರೆ. ಡಾ. ಚೆನ್ನಣ್ಣ ಅವರ ಮನಸ್ಸು ಸದಾ ಸಮಾಜದ ಒಳಿತಿಗಾಗಿ ಹಾಗೂ ಶೋಷಿತರ ಒಳಿತಿಗಾಗಿ ಮಿಡಿಯುತ್ತಿತ್ತು.