ಪಾವೂರು : ಪ್ರತಿಯೊಂದು ಧರ್ಮಕ್ಕೆ ಪವಿತ್ರ ಗ್ರಂಥಗಳಿರುವಂತೆ ದೇಶಕ್ಕೆ ಅಂಬೇಡ್ಕರ್ ಬರೆದ ಸಂವಿಧಾನವೇ ಪವಿತ್ರ ಗ್ರಂಥವಾಗಿದೆ ಎಂದು ಆಹಾರ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಾ| ಅಂಬೇಡ್ಕರ್ ವಾದ) ಪಾವೂರು ಗ್ರಾಮ ಸಮಿತಿ ಆಶ್ರಯದಲ್ಲಿ ಪಾವೂರು ಕಂಬ್ಲಿಪದವಿನಲ್ಲಿರುವ ಡಾ| ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ಡಾ| ಬಿ.ಆರ್.ಅಂಬೇಡ್ಕರ್ ಸಂಸ್ಮರಣೆ ಹಾಗೂ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಂಬೇಡ್ಕರ್ ಸಂವಿಧಾನ ಬರೆಯುವ ಸಂದರ್ಭ ಮತದಾನ ಹಕ್ಕಿನ ಬಗ್ಗೆ ವ್ಯಾಪಕ ಚರ್ಚೆ ನಡೆದಿತ್ತು. ಈ ಸಂದರ್ಭ ಬಡವ, ಶ್ರೀಮಂತ ಎನ್ನದೆ 18 ವರ್ಷ ಪೂರ್ತಿಯಾದವರಿಗೆ ಮತದಾನದ ಹಕ್ಕು ನೀಡಲಾಯಿತು. ಇದರ ಫಲವಾಗಿ ಸಾಮಾನ್ಯ ಜನರೂ ತಮಗೆ ಬೇಕಾದ ಪ್ರತಿನಿಧಿಯನ್ನು ಚುನಾಯಿಸುವ ಅಧಿಕಾರ ಲಭಿಸಿತು ಎಂದರು. ಸಭಾ ಕಾರ್ಯಕ್ರಮಕ್ಕೆ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಪ್ರಧಾನ ಕಾರ್ಯದರ್ಶಿ ಅಶೋಕ್ ಕೊಂಚಾಡಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ನಿವೃತ್ತ ಸೈನಿಕ ಗಣೇಶ್ ಕಾಮತ್, ನಿವೃತ್ತ ಸರಕಾರಿ ಸಿಬಂದಿ ಕಮಲಾ ಎನ್., ಪವರ್ ಲಿಫ್ಟರ್ ಸಂಜೀವ ಸೂಟರ್‌ಪೇಟೆ, ಸಂಘಟಕ ರಘುವೀರ್ ಸೂಟರ್‌ಪೇಟೆ ಹಾಗೂ ನೃತ್ಯಪಟು ಮೇಘನಾ ಅತ್ತಾವರ ಅವರನ್ನು ಸಮ್ಮಾನಿಸಲಾಯಿತು. ದಸಂಸ ಪಾವೂರು ಗ್ರಾಮ ಸಮಿತಿ ಅಧ್ಯಕ್ಷ ಮನೋಜ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ತಾ.ಪಂ. ಅಧ್ಯಕ್ಷ ಮಹಮ್ಮದ್ ಮೋನು, ಪಾವೂರು ಗ್ರಾ.ಪಂ. ಅಧ್ಯಕ್ಷ ಫಿರೋಜ್ ಮಲಾರ್, ಮಾಜಿ ಉಪಾಧ್ಯಕ್ಷ ವಲೇರಿಯನ್ ಡಿ’ಸೋಜಾ, ಪಜೀರು ಗ್ರಾ.ಪಂ.ಮಾಜಿ ಅಧ್ಯಕ್ಷ ಭರತ್ ರಾಜ್ ಶೆಟ್ಟಿ ಪಜೀರುಗುತ್ತು, ಪಾವೂರು ಗ್ರಾ.ಪಂ. ಸದಸ್ಯ ಎಂ.ಪಿ.ಹಸನ್, ಮಜೀದ್ ಸಾತ್ಕೋ , ವಿವೇಕ್ ರೈ, ಮಾಜಿ ಸದಸ್ಯ ಮಹಮ್ಮದ್, ಮಂಗಳೂರು ವಿವಿ ಪ್ರಾಧ್ಯಾಪಕ ಡಾ| ಪ್ರಶಾಂತ್ ನಾಯಕ್, ಸಂಚಾರ ಮತ್ತು ಅಪರಾಧ ವಿಭಾಗ ಉಪಾಯುಕ್ತೆ ಉಮಾ ಪ್ರಶಾಂತ್, ಕೊಣಾಜೆ ಠಾಣಾಧಿಕಾರಿ ಅಶೋಕ್ ಪಿ., ಜನಜಾಗೃತಿ ವೇದಿಕೆ ಮಾಜಿ ಅಧ್ಯಕ್ಷ ಶಂಕರಾನಂದ ಎನ್.ಇನವಳ್ಳಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ಚಿತ್ತರಂಜನ್ ಪಾವೂರು, ಆರಾಧನ ಸಮಿತಿ ಸದಸ್ಯ ಗೋಪಾಲ, ಇಂಜಿನಿಯರ್ ಚಂದ್ರಶೇಖರ್, ಗುತ್ತಿಗೆದಾರ ವಿನ್ಸೆಂಟ್ ಲೋಬೋ, ಜಿಲ್ಲಾ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಸಂಚಾಲಕ ವಿನೇಶ್ ಮೂಳೂರು, ಗ್ರಾಮಚಾವಡಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾಸಂಘದ ಮಾಜಿ ಅಧ್ಯಕ್ಷ ಸುಭಾಷ್ ಧರ್ಮನಗರ, ಉದ್ಯಮಿ ದಾವೂದ್ ಉಪಸ್ಥಿತರಿದ್ದರು. ಶಿಕ್ಷಕಿ ಪುಷ್ಪಲತಾ ಸ್ವಾಗತಿಸಿದರು. ಬಸವರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ದೈಹಿಕ ಶಿಕ್ಷಣ ಶಿಕ್ಷಕ ಮೋಹನ್ ಶಿರ್ಲಾಲು ನಿರೂಪಿಸಿದರು.