Advertisement

ಕಾವೂರಿನಿಂದ ಡಾ|ಭರತ್‌ ಶೆಟ್ಟಿ ಪಾದಯಾತ್ರೆ 

12:14 PM Apr 24, 2018 | |

ಕಾವೂರು : ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ| ಭರತ್‌ ಶೆಟ್ಟಿ ವೈ. ಅವರು ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸೋಮವಾರ ಬೆಳಗ್ಗೆ ಪೂಜೆ ಸಲ್ಲಿಸಿ ನಾಮ ಪತ್ರ ಸಲ್ಲಿಸಲು ಪಾದಯಾತ್ರೆ ಮೂಲಕ ಮಹಾನಗರ ಪಾಲಿಕೆಯಲ್ಲಿರುವ ಚುನಾವಣಾ ಕಚೇರಿಗೆ ತೆರಳಿದರು.

Advertisement

ಬೆಳಗ್ಗೆ 9 ಗಂಟೆಗೆ ಮಹಾಲಿಂಗೇಶ್ವರನಿಗೆ ಡಾ| ಭರತ್‌ ಶೆಟ್ಟಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ದೇವಸ್ಥಾನದಿಂದ ಕಾವೂರು, ಬೊಂದೆಲ್‌, ಯೆಯ್ನಾಡಿ ಮಾರ್ಗವಾಗಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವರೆಗೆ ಸುಮಾರು ಐದಾರು ಸಾವಿರ ಕಾರ್ಯಕರ್ತರೊಂದಿಗೆ ಪಾದಯಾತ್ರೆ ಮೂಲಕ ಆಗಮಿಸಿ ಬಳಿಕ ವಾಹನದಲ್ಲಿ ಆಗಮಿಸಿದರು.

ಇದಕ್ಕೂ ಮುನ್ನ ದೇವಸ್ಥಾನದ ಬಳಿ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದ ಡಾ| ಭರತ್‌ ಶೆಟ್ಟಿ ಅವರು ಮಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಆಡಳಿತವಿದ್ದಾಗ ಉತ್ತಮ ಅಭಿವೃದ್ಧಿ ಕಾರ್ಯಗಳಾಗಿವೆ. ಯಡಿಯೂರಪ್ಪ ಸರಕಾರ ಹೆಚ್ಚಿನ ಅನುದಾನ ಒದಗಿಸಿ ಅಭಿವೃದ್ಧಿಗೆ ಸಹಕರಿಸಿದೆ ಎಂದರು. ಬಿಜೆಪಿ ಕಾರ್ಯಕರ್ತರ ಪಕ್ಷ, ಈಗಾಗಲೇ ಮನೆ ಮನೆ ಭೇಟಿಯಂತಹ ಕೆಲಸಗಳನ್ನು ಹಗಲಿರುಳು ಮಾಡುತ್ತಿದ್ದಾರೆ.

ಅಭಿವೃದ್ಧಿಗೆ ವಿಶೇಷ ಒತ್ತು
ಕಳೆದ ಐದು ವರ್ಷಗಳಲ್ಲಿ ನಡೆದಂತಹ ಅಹಿತಕರ ಘಟನೆಗಳಿಂದ ಜನತೆ ಬೇಸತ್ತಿದ್ದು, ಈ ಬಾರಿ ಬಿಜೆಪಿಗೆ ಆಶೀರ್ವಾದ ಮಾಡಲಿದ್ದಾರೆ. ಮಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿಯು ಅಭಿವೃದ್ಧಿಗಾಗಿ ವಿಶೇಷ ಪ್ರಣಾಳಿಕೆ ಸಿದ್ಧಪಡಿಸಿದ್ದು ಅದರಂತೆ ನಡೆದುಕೊಳ್ಳಲಿದೆ ಎಂದರು.

ಸಂಸದ ಹಾಗೂ ರಾಷ್ಟ್ರೀಯ ಬಿಜೆಪಿ ಉಪಾಧ್ಯಕ್ಷ ಓಂ ಪ್ರಕಾಶ್‌ ಮಾಥುರ್‌, ರಜನಿ ದುಗ್ಗಣ್ಣ, ಜನಾರ್ದನ ಗೌಡ, ರುಕ್ಮಯ್ಯ ಪೂಜಾರಿ, ರಣ್‌ದೀಪ್‌ ಕಾಂಚನ್‌, ರಘುವೀರ್‌ ಪಣಂಬೂರು, ಮಧುಕಿರಣ್‌, ಗಣೇಶ್‌ ಹೊಸಬೆಟ್ಟು, ಗುಣಶೇಖರ ಶೆಟ್ಟಿ, ಸುಮಿತ್ರಾಕರಿಯ, ಸುಧಾಕರ ಅಡ್ಯಾರ್‌, ಅಶೋಕ್‌ ಕೃಷ್ಣಾಪುರ ಮತ್ತಿತರರು ಭಾಗವಹಿಸಿದ್ದರು.

Advertisement

ಪಾದಯಾತ್ರೆ
ಬಿಳಿ ಅಂಗಿ, ಕಪ್ಪು ಬಣ್ಣದ ಪ್ಯಾಂಟ್‌ ಧರಿಸಿ ಸರಳ ರೀತಿಯಲ್ಲಿ ಪಾಲ್ಗೊಂಡ ಬಿಜೆಪಿ ಅಭ್ಯರ್ಥಿ ಡಾ| ಭರತ್‌ ಶೆಟ್ಟಿ ವೈ. ಅವರು ಕಾರ್ಯಕರ್ತರೊಂದಿಗೆ ಪಾದಯಾತ್ರೆಯಲ್ಲಿ ಪಾಲ್ಗೊಂಡರಲ್ಲದೆ, ಮೆರವಣೆಗೆಯ ಅಕ್ಕಪಕ್ಕದಲ್ಲಿ ನಿಂತು ವೀಕ್ಷಿಸುತ್ತಿದ್ದ ಮತದಾರರ ಬಳಿಗೆ ತೆರಳಿ ಕ್ಷೇಮ ಸಮಾಚಾರ ವಿಚಾರಿಸಿದರು. ಬಿಜೆಪಿ, ಪ್ರಧಾನಿ ನರೇಂದ್ರ ಮೋದಿ, ಅಧ್ಯಕ್ಷ ಅಮಿತ್‌ ಶಾ ಅವರಿಗೆ ಜೈಕಾರ ಹಾಕುತ್ತಾ ಕಾರ್ಯಕರ್ತರು ಸಾಗಿದರು. 

Advertisement

Udayavani is now on Telegram. Click here to join our channel and stay updated with the latest news.

Next