Advertisement

ಪಾದರಕ್ಷೆ ತಯಾರಕರಿಗೆ “ಲಂಡನ್‌ ಭಾಗ್ಯ’

06:20 AM Dec 19, 2017 | |

ಬೆಂಗಳೂರು: ಪಾದರಕ್ಷೆಗಳನ್ನು ತಯಾರಿಸುವವರಿಗೆ ಈಗ “ಲಂಡನ್‌ ಭಾಗ್ಯ’ ಸಿಕ್ಕಿದೆ! ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮವು ರಾಜ್ಯದ ಹಳ್ಳಿಗಾಡಿನ 15 ಯುವಕರಿಗೆ ಈ ಅವಕಾಶ ಕಲ್ಪಿಸಿದೆ. ಈ ಯುವಕರು ಚರ್ಮ ಉದ್ಯಮಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತರಬೇತಿಯನ್ನು ಪಡೆಯಲಿದ್ದಾರೆ.

Advertisement

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಓ.ಓಂಕಾರ್‌, ಕೌಶಲ್ಯಾಭಿವೃದ್ಧಿ ಯೋಜನೆ ಅಡಿ 18 ತಿಂಗಳ ತರಬೇತಿಗಾಗಿ 30 ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಈ ಪೈಕಿ 15 ಜನರನ್ನು ಅಂತಿಮಗೊಳಿಸಿ, ಅವರೆಲ್ಲರಿಗೂ ಚೆನ್ನೈನಲ್ಲಿರುವ ಕೇಂದ್ರ ಪಾದರಕ್ಷೆ ತರಬೇತಿ ಸಂಸ್ಥೆಯಲ್ಲಿ 16 ತಿಂಗಳು ತರಬೇತಿ ನೀಡಲಾಗಿದೆ. ಇನ್ನುಳಿದ ಎರಡು ತಿಂಗಳು ಚರ್ಮ ಉದ್ಯಮದ ಹೆಚ್ಚಿನ ತರಬೇತಿಗೆ ಹೊಸ ವರ್ಷದಂದು ಲಂಡನ್‌ಗೆ ಕಳುಹಿಸಲಾಗುವುದು. ಇದಕ್ಕೆ ಪ್ರತಿ ಅಭ್ಯರ್ಥಿಗೆ ತಲಾ 6 ಲಕ್ಷ ರೂ. ಖರ್ಚು ಆಗಲಿದ್ದು, ಎಲ್ಲವನ್ನೂ ನಿಗಮವೇ ನೋಡಿಕೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಇದೇ ಮೊದಲ ಬಾರಿಗೆ ಈ ಅವಕಾಶ ಕಲ್ಪಿಸಲಾಗುತ್ತಿದೆ. ಹೀಗೆ ತರಬೇತಿ ಪಡೆಯುತ್ತಿರುವರೆಲ್ಲರೂ ಪದವೀಧರರಾಗಿದ್ದು, ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ. ತರಬೇತಿ ಪಡೆದು ಬಂದ ನಂತರ ಈ ಅಭ್ಯರ್ಥಿಗಳಿಗೆ ರೀಬಾಕ್‌ ಸೇರಿ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉನ್ನತ ಹುದ್ದೆ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಸ್ತುತ ಲಿಡ್ಕರ್‌ ಮಳಿಗೆಗಳು 16 ಜಿಲ್ಲೆಗಳಿಗೆ ಸೀಮಿತವಾಗಿದೆ. ಇಲ್ಲಿ ಕುಶಲಕರ್ಮಿಗಳು ತಯಾರಿಸಿದ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಈ ಮಳಿಗೆಗಳನ್ನು ರಾಜ್ಯದ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಲು ನಿರ್ಧರಿಸಲಾಗಿದೆ. ಇದರಿಂದ ಕುಶಲಕರ್ಮಿಗಳಿಗೆ ಹೆಚ್ಚು ಅನುಕೂಲ ಆಗಲಿದೆ ಎಂದು ತಿಳಿಸಿದರು.

ಕುಶಲಕರ್ಮಿಗಳ ಸಮೀಕ್ಷೆ: ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್‌. ನಟರಾಜ್‌ ಮಾತನಾಡಿ, ರಾಜ್ಯದಲ್ಲಿ ಸುಮಾರು ಎರಡು ಲಕ್ಷ ಕುಶಲಕರ್ಮಿಗಳಿದ್ದಾರೆ ಎಂದು ಅಂದಾಜಿಸಲಾಗಿದೆ. ಆದರೆ, ಚರ್ಮ ಉದ್ಯಮದಲ್ಲಿ ತೊಡಗಿಕೊಂಡಿರುವವರ ಬಗ್ಗೆ ನಿಖರ ಮಾಹಿತಿ ಇಲ್ಲ. ಈ ಹಿನ್ನೆಲೆಯಲ್ಲಿ ಸಮೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಜನವರಿಯಿಂದ ಈ ಸಮೀಕ್ಷೆ ಆರಂಭಗೊಳ್ಳಲಿದೆ ಎಂದು ಹೇಳಿದರು.

Advertisement

ನಾಳೆಯಿಂದ ಕರಕುಶಲ
ವಸ್ತುಪ್ರದರ್ಶನ

ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮವು ಡಿ.20ರಿಂದ 24ರವರೆಗೆ ರಾಜ್ಯಮಟ್ಟದ ಕುಶಲಕರ್ಮಿಗಳ ಸಮಾವೇಶ ಮತ್ತು ಚರ್ಮ ಕರಕುಶಲ ವಸ್ತುಪ್ರದರ್ಶನ ಮತ್ತು ಮಾರಾಟ ಹಮ್ಮಿಕೊಂಡಿದೆ. ಐದು ದಿನಗಳ ಕಾಲ ನಡೆಯುವ ಈ ವಸ್ತುಪ್ರದರ್ಶನದಲ್ಲಿ ಆಗ್ರಾ, ತಮಿಳುನಾಡು ಸೇರಿ ವಿವಿಧ ಭಾಗಗಳಿಂದ ಐದು ಸಾವಿರಕ್ಕೂ ಅಧಿಕ ಕುಶಲಕರ್ಮಿಗಳು ಭಾಗವಹಿಸಲಿದ್ದಾರೆ. 40ಕ್ಕೂ ಹೆಚ್ಚು ಚರ್ಮ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು ತಲೆಯೆತ್ತಲಿವೆ ಎಂದು ನಿಗಮದ ಅಧ್ಯಕ್ಷ ಓ.ಓಂಕಾರ್‌ ತಿಳಿಸಿದರು.

ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಸಮಾವೇಶ ಉದ್ಘಾಟಿಸಲಿದ್ದು, ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ಚರ್ಮ ಕರಕುಶಲ ವಸ್ತುಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್‌, ಅನಂತಕುಮಾರ್‌ ಹೆಗಡೆ, ಅನಂತಕುಮಾರ್‌, ರಮೇಶ್‌ ಜಿಗಜಿಣಗಿ, ಡಿ.ವಿ. ಸದಾನಂದಗೌಡ, ಲೋಕಸಭೆ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಭಾಪತಿ ಡಿ.ಎಚ್‌.ಶಂಕರಮೂರ್ತಿ, ಸಭಾಧ್ಯಕ್ಷ ಕೆ.ಬಿ.ಕೋಳಿವಾಡ, ಸಚಿವರಾದ ಕೆ.ಜೆ.ಜಾರ್ಜ್‌,
ಎಚ್‌.ಸಿ.ಮಹದೇವಪ್ಪ, ರಾಮಲಿಂಗಾ ರೆಡ್ಡಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next