Advertisement

ಡಾ|ಮೋಹನ ಆಳ್ವರಿಗೆ ಅಪ್ಪಣ್ಣ ಹೆಗ್ಡೆ ಪ್ರಶಸ್ತಿ ಪ್ರದಾನ

12:59 AM Dec 26, 2019 | sudhir |

ಬಸ್ರೂರು: ರಾಗ, ದ್ವೇಷಗಳಿಲ್ಲದೆ, ಜಾತಿ – ಧರ್ಮದ ಸಂಕೋಲೆಗಳನ್ನು ಕಟ್ಟಿಕೊಳ್ಳದೆ, ಮುಕ್ತ ಹಾಗೂ ಪರಿಶುದ್ಧವಾದ ಪ್ರೀತಿಯಿಂದ ಬದುಕನ್ನು ಕಟ್ಟಿಕೊಂಡು ಸಮಾಜಮುಖೀಯಾಗಿ ಬದುಕುವವರು ನಿಜಾರ್ಥದಲ್ಲಿ ವಿಶ್ವ ಮಾನವರು ಎಂದು ಶ್ರೀ ಕ್ಷೇತ್ರ ಹೊರನಾಡಿನ ಧರ್ಮಕರ್ತ ರಾದ ಡಾ| ಜಿ. ಭೀಮೇಶ್ವರ ಜೋಷಿ ಹೇಳಿದರು.

Advertisement

ಅವರು ಮಂಗಳವಾರ ಬಸ್ರೂರಿನ ಶ್ರೀ ಶಾರದಾ ಕಾಲೇಜಿನಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ. ಅಪ್ಪಣ್ಣ ಹೆಗ್ಡೆ ಅವರ 85ನೇ ಜನ್ಮ ದಿನಾಚರಣೆ ಅಂಗವಾಗಿ ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನದಿಂದ ಕೊಡಮಾಡುವ ಬಿ. ಅಪ್ಪಣ್ಣ ಹೆಗ್ಡೆ ಶಿಕ್ಷಣ ಪ್ರಶಸ್ತಿಯನ್ನು ಮೂಡುಬಿದಿರೆಯ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವರಿಗೆ ಪ್ರದಾನ ಮಾಡಿ ಮಾತನಾಡಿದರು.

ಜೀವನದಲ್ಲಿ ಕಾಣುವ ಪ್ರತಿಯೊಂದು ಏರಿಳಿತಗಳನ್ನು ಸಮಚಿತ್ತದಿಂದ ಸ್ವೀಕಾರ ಮಾಡಬೇಕು. ಕಪ್ಪು ಚುಕ್ಕೆಯಿಲ್ಲದ 85 ವರ್ಷಗಳ ಸಾರ್ಥಕತೆಯನ್ನು ಕಂಡ ಬಸ್ರೂರು ಅಪ್ಪಣ್ಣ ಹೆಗ್ಡೆಯವರ ಬದುಕು ಎಲ್ಲರಿಗೂ ಆದರ್ಶಪ್ರಾಯ ಎಂದರು.

3ನೇ ಹಣಕಾಸು ಆಯೋಗದ ಅಧ್ಯಕ್ಷ ಎ.ಜಿ. ಕೊಡ್ಗಿ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವ ಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್‌ ಕುಮಾರ ಶೆಟ್ಟಿ, ಹಿರಿಯ ಅರ್ಚಕ ಡಾ| ಎನ್‌. ನರಸಿಂಹ ಅಡಿಗ, ಮೀನುಗಾರಿಕಾ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಿ. ಹಿರಿಯಣ್ಣ, ಕಂಚಿ ಕಾಮಕೋಟಿ ಶಂಕರಾಚಾರ್ಯ ಶ್ರೀ ಮಠದ ಪರವಾಗಿ ಅಪ್ಪಣ್ಣ ಹೆಗ್ಡೆಯವರನ್ನು ಅಭಿನಂದಿಸಲಾಯಿತು.

ಸಮ್ಮಾನ ಸ್ವೀಕರಿಸಿದ ಬಿ. ಅಪ್ಪಣ್ಣ ಹೆಗ್ಡೆ ಮಾತನಾಡಿ, ವಿವಿಧ ರಂಗಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಬಗ್ಗೆ ಆತ್ಮತೃಪ್ತಿಯಿದೆ. ದೇವರ ಆಶೀರ್ವಾದ ಇರುವವರೆಗೆ ಇನ್ನಷ್ಟು ಸಮಾಜ ಮುಖೀ ಕಾರ್ಯಮಾಡುತ್ತೇನೆ ಎಂದರು.
ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಮೂಡಬಿದಿರೆ ಅಧ್ಯಕ್ಷತೆ ವಹಿಸಿದ್ದರು. ಜಯಶ್ರೀ ಕೆ. ಅಮರನಾಥ ಶೆಟ್ಟಿ, ನಾಗರತ್ನ ಅಪ್ಪಣ್ಣ ಹೆಗ್ಡೆ, ಬಾಂಡ್ಯಾ ಸುಭಾಶ್ಚಂದ್ರ ಶೆಟ್ಟಿ ಉಪಸ್ಥಿತರಿದ್ದರು.

Advertisement

ವಿದ್ಯಾರ್ಥಿಗಳಿಗೆ ದತ್ತಿನಿಧಿ, ಅಶಕ್ತರಿಗೆ ಸಹಾಯಧನವನ್ನು ವಿತರಿಸಲಾಯಿತು.
ಪ್ರತಿಷ್ಠಾನದ ಅಧ್ಯಕ್ಷ ರಾಮ್‌ಕಿಶನ್‌ ಹೆಗ್ಡೆ ವರದಿ ಮಂಡಿಸಿ, ಟ್ರಸ್ಟಿ ಅನುಪಮಾ ಎಸ್‌. ಶೆಟ್ಟಿ ಸ್ವಾಗತಿಸಿದರು. ಪತ್ರಕರ್ತ ಯು.ಎಸ್‌. ಶೆಣೈ ಪ್ರಸ್ತಾವನೆಗೈದರು. ಸಾಹಿತಿ ಕೋ. ಶಿವಾನಂದ ಕಾರಂತ ಅಭಿನಂದನಾ ಪತ್ರ ವಾಚಿಸಿದರು. ನಿವೃತ್ತ ಮುಖ್ಯ ಶಿಕ್ಷಕ ದಿನಕರ ಶೆಟ್ಟಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಸಂದೇಶ ವಾಚಿಸಿದರು. ಆರ್‌ಜೆ ನಯನಾ ಕಾರ್ಯಕ್ರಮ ನಿರ್ವಹಿಸಿದರು. ನಿವೃತ್ತ ಪ್ರಾಂಶುಪಾಲ ಕೆ. ರಾಧಾಕೃಷ್ಣ ಶೆಟ್ಟಿ ವಂದಿಸಿದರು.

ಪ್ರಶಸ್ತಿ ಬೇರೆಯವರಿಗೆ ನೀಡುವುದು ಸಂತೋಷದ ಕೆಲಸ. ಆದರೆ ಪ್ರಶಸ್ತಿ ಸ್ವೀಕರಿಸುವುದೆಂದರೆ ತುಂಬಾ ಕಷ್ಟ. ಹಿಂದೆ ನಮ್ಮ ಹಿರಿಯರು ಸಮಾಜದ ಬೆಳವಣಿಗೆಯ ಉದ್ದೇಶದಿಂದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುತ್ತಿದ್ದರು. ಇಂದು ಇನ್ನಾವುದೋ ಉದ್ದೇಶಕ್ಕಾಗಿ ಸ್ಥಾಪನೆಯಾಗುತ್ತಿವೆ. ಶಿಕ್ಷಣ ಮೂಲ ಉದ್ದೇಶವನ್ನು ಬಿಟ್ಟು ವ್ಯಾಪಾರೀಕರಣವಾಗುತ್ತಿದೆ.
– ಡಾ| ಎಂ. ಮೋಹನ ಆಳ್ವ, ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next