Advertisement
ಕನಕಮ್ಮ ಶೆಡ್ತಿ ಹಾಗೂ ಎಚ್.ರಾಮಣ್ಣ ಶೆಟ್ಟಿ ದಂಪತಿಗಳ ಪುತ್ರನಾಗಿ 1927ರಲ್ಲಿ ಯಡ್ತಾಡಿಯ ಅಲ್ತಾರಿನಲ್ಲಿ ಜನಸಿದ ಆನಂದ ಶೆಟ್ಟಿ ಅವರು ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಅನಂತರ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ ಇಂಟರ್‌ಮೀಡಿಯೆಟ್ ಕೋರ್ಸ್, ಮದ್ರಾಸ್ ಕಾಲೇಜಿನಲ್ಲಿ ಜಿ.ಸಿ.ಐ.ಎಂ. ತರಬೇತಿ ಪಡೆದು ಮಂಗಳೂರು ವೆನಾÉಕ್ ಆಸ್ಪತ್ರೆಯ ಮೂಲಕ ವೈದ್ಯಕೀಯ ವೃತ್ತಿ ಆರಂಭಿಸಿದರು.
1955ರಲ್ಲಿ ಕೋಟದಲ್ಲಿ ಕ್ಲಿನಿಕ್ ಆರಂಭಿಸಿ ಕುಗ್ರಾಮದಂತಿದ್ದ ಈ ಊರಿಗೆ ವೈದ್ಯ ನಾರಾಯಣನಾದರು. ಆ ಕಾಲದಲ್ಲಿ ಇಲ್ಲಿನ ಹತ್ತಾರು ಕಿ.ಮೀ. ಸುತ್ತ-ಮುತ್ತ ಆಸ್ಪತ್ರೆಯಾಗಲಿ, ವೈದ್ಯರಾಗಲಿ ಇರಲಿಲ್ಲ ಹಾಗೂ ಮೂಲ ಸೌಕರ್ಯ ಮರೀಚಿಕೆಯಾಗಿತ್ತು. ಆಗ ಕಾಲ್ನಡಿಗೆಯಲ್ಲೇ ಮನೆ-ಮನೆ ತೆರಳಿ, ರಾತ್ರಿ ಹಗಲೆನ್ನದೆ ರೋಗಿಗಳಿಗೆ ಚಿಕಿತ್ಸೆ ನೀಡಿದನ್ನು, ಅರ್ಥಿಕ ಸಂಕಷ್ಟವಿದ್ದ ರೋಗಿಗಳ ಬಳಿ ಹಣ ಪಡೆಯದೆ ಸಾಂತ್ವನ ಹೇಳಿ ವಾಪಾಸಾಗುತ್ತಿದ್ದ ಇವರ ಮಾನವೀಯ ಗುಣಗಳನ್ನು ಕೋಟದ ಜನ ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಜತೆಗೆ ಸಾವಿರಾರು ಮಂದಿ ಇವರ ಕ್ಲಿನಿಕ್‌ನಲ್ಲಿ ಧರ್ಮಾಥ ಚಿಕಿತ್ಸೆ ಪಡೆದ ಉದಾಹರಣೆ ಇದೆಯಂತೆ. ವೈದ್ಯಕೀಯ ಕ್ಷೇತ್ರವೆನ್ನುವುದು ಸಂಪೂರ್ಣ ವ್ಯಾಪಾರಿಕರಣವಾಗುತ್ತಿರುವ ಈ ಕಾಲಘಟ್ಟದಲ್ಲಿ ಇಂತಹ ವೈದ್ಯರು ಮುಂದಿನ ಪೀಳಿಗೆಗೆ ಆದರ್ಶವಾಗಿ ಉಳಿಯುತ್ತಾರೆ. 90ರ ಹರೆಯದಲ್ಲೂ ಸೇವೆ
ಆನಂದ ಶೆಟ್ಟಿ ಅವರು ತನ್ನ ಕೊನೆಯ ದಿನಗಳ ತನಕ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಹಿಂದೆ ಕೋಟ ಬಸ್ಸು ನಿಲ್ದಾಣದ ಬಳಿ ಇದ್ದ ಇವರ ಉದಯ ಕ್ಲಿನಿಕ್ ರಸ್ತೆ ವಿಸ್ತರಣೆಯ ಸಂದರ್ಭ ತೆರವುಗೊಂಡಿತು. ಅನಂತರ ಕೋಟ ಪೊಲೀಸ್ ಠಾಣೆ ಸಮೀಪ ಇರುವ ಮನೆಯಲ್ಲೇ ಕ್ಲಿನಿಕ್ ಆರಂಭಿಸಿದರು. ಕಳೆದ ನಾಲ್ಕೈದು ತಿಂಗಳಿಂದ ಅನಾರೋಗ್ಯದ ಕಾರಣ ವೃತ್ತಿಯಿಂದ ದೂರ ಉಳಿದಿದ್ದು ಬಿಟ್ಟರೆ ತನ್ನ 90ರ ವಯಸ್ಸಿನ ವರೆಗೂ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದರು.ವೃದ್ಯಕೀಯ ಕ್ಷೇತ್ರದ ಜತೆಗೆ ಪ್ರತಿಷ್ಠಿತ ಕೋಟ ಸಿ.ಎ. ಬ್ಯಾಂಕ್‌ನ ಸ್ಥಾಪಕ ಕೋಶಾಧಿಕಾರಿಯಾಗಿ ಅನಂತರ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿ ಬ್ಯಾಂಕ್‌ನ ಉನ್ನತಿಗೆ ಶ್ರಮಿಸಿದ್ದರು.
Related Articles
Advertisement
ಒಟ್ಟಾರೆ ಸುಮಾರು ಆರುವರೇ ದಶಕಗಳ ಕಾಲ ಗ್ರಾಮೀಣ ಪ್ರದೇಶವೊಂದರ ಬಡ ಜನತೆಯ ಸೇವೆಯಲ್ಲಿ ತೊಡಗಿಸಿಕೊಂಡ, ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ ಇಂತಹ ವೈದ್ಯರು ಸಮಾಜಕ್ಕೆ ಆದರ್ಶವಾಗುತ್ತಾರೆ.
– ರಾಜೇಶ ಗಾಣಿಗ ಅಚ್ಲಾಡಿ