Advertisement

ಆರೋಗ್ಯ ಸುರಕ್ಷತಾ ಕ್ರಮ ಅನುಸರಿಸಲು ಡಾ|ಬೀಳಗಿ ಸಲಹೆ

09:50 PM Jun 15, 2021 | Girisha |

ಮುದ್ದೇಬಿಹಾಳ: ಮಳೆಗಾಲ ಆರಂಭಗೊಂಡಿದೆ. ಕೊರೊನಾ ನಿಯಂತ್ರಣಕ್ಕೆ ಬರುತ್ತಿದೆ. ಆದರೆ ಸೊಳ್ಳೆ ಉತ್ಪತ್ತಿ ಹೆಚ್ಚಾಗಿ ಮಲೇರಿಯಾ, ಡೆಂಘೀ, ಚಿಕೂನ್‌ ಗುನ್ಯಾ ರೋಗಗಳ ಹಾವಳಿ ಹೆಚ್ಚುವ ಸಂಭವ ಇದೆ. ಸಾರ್ವಜನಿಕರು ಈಗಿನಿಂದಲೇ ಸುರಕ್ಷತಾ ಕ್ರಮಗಳನ್ನು ಪಾಲಿಸಿದರೆ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ| ಜೈಬುನ್ನೀಸಾ ಬೀಳಗಿ ಹೇಳಿದರು.

Advertisement

ತಾಲೂಕು ಆರೋಗ್ಯಾ ಧಿಕಾರಿ ಕಚೇರಿಯಲ್ಲಿ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ಸೋಮವಾರ ಏರ್ಪಡಸಿದ್ದ ತಾಲೂಕು ಮಟ್ಟದ ಮಲೇರಿಯಾ ಮಾಸಾಚರಣೆ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಈ ವರ್ಷದ ಮಾರ್ಚ್‌ವರೆಗೂ ಮಲೇರಿಯಾ, ಡೆಂಘೀ, ಚಿಕೂನ್‌ಗುನ್ಯಾ ಆತಂಕ ಇತ್ತು. ಆದರೆ ಮಾರ್ಚ್‌ನಿಂದ ಕೊರೊನಾ ಎರಡನೇ ಅಲೆ ಗಂಭೀರಗೊಂಡಿದ್ದರಿಂದ ಇವುಗಳ ಹಾವಳಿ ನಿಯಂತ್ರಣಕ್ಕೆ ಬಂತು.

ಏಪ್ರಿಲ್‌, ಮೇ ತಿಂಗಳಲ್ಲಿ ಕೊರೊನಾ ಹಿನ್ನೆಲೆ ಇವುಗಳ ಸಮೀಕ್ಷೆ ನಡೆಯಲಿಲ್ಲ. ಜೂನ್‌ ತಿಂಗಳಲ್ಲಿ ಇದುವರೆಗೂ 21 ಮಾದರಿಗಳನ್ನು ತಪಾಸಣೆಗೆ ಕಳಿಸಿದ್ದು ಇನ್ನೂ ವರದಿ ಬರಬೇಕಿದೆ ಎಂದರು. ಕೃಷ್ಣಾ ನದಿ ತೀರವು ಮಲೇರಿಯಾ ಪೀಡಿತ ಪ್ರದೇಶ ಎನ್ನಿಸಿಕೊಂಡಿದೆ. ಕೆಬಿಜೆಎನ್ನೆಲ್‌ನ ವೈದ್ಯಕೀಯ ಸಿಬ್ಬಂದಿ ತಂಡ ನದಿ ತೀರದ ಗ್ರಾಮಗಳಲ್ಲಿ ಸಂಚರಿಸಿ, ರಕ್ತದ ಮಾದರಿ ಸಂಗ್ರಹಿಸಿ ರೋಗ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಂಡಿದೆ.

ಆರೋಗ್ಯ ಇಲಾಖೆಯಡಿ ಅಡವಿಹುಲಗಬಾಳ ತಾಂಡಾ, ಕಿಲಾರಹಟ್ಟಿ, ಮಿಣಜಗಿ ಗ್ರಾಮಗಳನ್ನು ಹೆಚ್ಚು ಬಾಧಿ ತ ಎಂದು ಗುರುತಿಸಲಾಗಿತ್ತು. ಸಕಾಲಿಕ ಕ್ರಮಗಳಿಂದಾಗಿ ಈಗ ಈ ಗ್ರಾಮಗಳಲ್ಲಿ ನಿಯಂತ್ರಣ ಆಗಿದೆ. ಸೊಳ್ಳೆ ನಿಯಂತ್ರಣಕ್ಕೆ ಗಪ್ಪಿ (ಕೊಳಚೆ ನೀರಲ್ಲಿನ ಲಾರ್ವಾ ನಾಶಪಡಿಸಲು) ಮತ್ತು ಗಂಬೂಸಿಯಾ (ಶುದ್ಧ ನೀರಿನಲ್ಲಿನ ಲಾರ್ವಾ ನಾಶಪಡಿಸಲು) ಮೀನುಗಳನ್ನು ಕೆರೆಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬೆಳೆಸಲಾಗಿದೆ.

ಅಗತ್ಯ ಇರುವೆಡೆ ಇವುಗಳನ್ನು ಬಿಟ್ಟು ಸೊಳ್ಳೆಗಳನ್ನು ಲಾರ್ವಾ ಹಂತದಲ್ಲೇ ನಿಯಂತ್ರಿಸಲಾಗುತ್ತದೆ ಎಂದರು.ಹಿರಿಯ ಆರೋಗ್ಯ ನಿರೀಕ್ಷಣಾ ಧಿಕಾರಿಗಳಾದ ವಿ.ಎಸ್‌. ಬಂಡಿ, ಮಹದೇವಪ್ಪ ಹಿಂಗೋಲಿ, ಆರೋಗ್ಯ ನಿರೀಕ್ಷಣಾಧಿ ಕಾರಿ ಎಂ.ಎಸ್‌. ಗೌಡರ ಮಾತನಾಡಿ, ಸೊಳ್ಳೆ ಉತ್ಪತ್ತಿಯಾಗದಂತೆ ನೋಡಿಕೊಳ್ಳಲು ಜನರು ಸ್ವತ್ಛತಾ ಕ್ರಮಗಳನ್ನು ಪಾಲಿಸಬೇಕು. ನೀರು ತುಂಬಿಟ್ಟ ಬ್ಯಾರಲ್‌ಗ‌ಳನ್ನು ಮುಚ್ಚಳದಿಂದ ಮುಚ್ಚಬೇಕು. ಮನೆ ಸುತ್ತಲೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

Advertisement

ತಾಲೂಕು ಆರೋಗ್ಯಾ ಧಿಕಾರಿ ಡಾ| ಸತೀಶ ತಿವಾರಿ ಮಾತನಾಡಿ, 4-5 ತಿಂಗಳ ಹಿಂದೆ ತಂಗಡಗಿಯಲ್ಲಿ ಒಂದು ಡೆಂಘೀ, ಅಮರಗೋಳ, ಮುದ್ದೇಬಿಹಾಳ (ನೇತಾಜಿ ನಗರ, ಮಹಿಬೂಬ ನಗರ), ಮುದ್ನಾಳ ಗ್ರಾಮಗಳಲ್ಲಿ ತಲಾ 2 ಚಿಕೂನ್‌ ಗುನ್ಯಾ ಪ್ರಕರಣಗಳು ವರದಿಯಾಗಿದ್ದವು. ಅಲ್ಲೆಲ್ಲ ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಇದುವರೆಗೂ ಒಂದೂ ಮಲೇರಿಯಾ ಪ್ರಕರಣ ಕಂಡು ಬಂದಿಲ್ಲ. ಆಶಾ ಕಾರ್ಯಕರ್ತೆಯರು ಕೋವಿಡ್‌ ಸಮೀಕ್ಷೆ ಜೊತೆಗೆ ಮಲೇರಿಯಾ, ಡೆಂಘೀ, ಚಿಕೂನ್‌ಗುನ್ಯಾ ಸಮೀಕ್ಷೆಯನ್ನೂ ನಡೆಸುತ್ತಿದ್ದಾರೆ. ನಗರ ಪ್ರದೇಶದಲ್ಲಿ ಪ್ರತಿ ತಿಂಗಳ 1 ಮತ್ತು 3ನೇ ರವಿವಾರ, ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ನಿತ್ಯವೂ ಸಮೀಕ್ಷೆ ಕಾರ್ಯ ನಡೆಯುತ್ತಿದೆ ಎಂದರು.

ಆರೋಗ್ಯ ಇಲಾಖೆಯ ಮಲೇರಿಯಾ ನಿಯಂತ್ರಣಕ್ಕೆ ಸಂಬಂಧಿ ಸಿದ ಸಿಬ್ಬಂದಿಗಳಾದ ಎಂಟಿಎಸ್‌ ಎಸ್‌.ಸಿ.ರುದ್ರವಾಡಿ, ಶಿವು ಬೊಮ್ಮನಳ್ಳಿ, ಸಿ.ಜಿ. ಬಿದರಕುಂದಿ, ಎಸ್‌.ಆರ್‌. ಸಜ್ಜನ, ನಗರ ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು. ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾ ಧಿಕಾರಿ ಅನುಸೂಯಾ ತೇರದಾಳ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next